ಶನಿವಾರ, ಜುಲೈ 24, 2021
28 °C

ಮೈಶುಗರ್‌ ಕಾರ್ಖಾನೆ ಖಾಸಗೀಕರಣ ಬೇಡ: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾವಿರಾರು ಕೋಟಿ ಮೌಲ್ಯದ ಮೈಶುಗರ್‌ ಕಾರ್ಖಾನೆಯನ್ನು (ಮೈಸೂರು ಸಕ್ಕರೆ ಕಾರ್ಖಾನೆ) ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು. ಸರ್ಕಾರವೇ ಬಂಡವಾಳ ಹೂಡಿ ಆಧುನೀಕರಿಸಿ, ಬಲಪಡಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಿ, ಅಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಮತ್ತು ಹಳೆ ಮೈಸೂರು ಭಾಗದ ಕಬ್ಬು ಬೆಳೆಗಾರರನ್ನು ಸಂರಕ್ಷಿಸಬೇಕು. ಸಕ್ಕರೆ ಉತ್ಪಾದನೆಯ ದೀರ್ಘ ಇತಿಹಾಸವಿರುವ ಮಂಡ್ಯ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕು’ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಈ ಹಿಂದೆ, 2013, 2018–19ರವರೆಗೆ ಸುಮಾರು ₹ 229.65 ಕೋಟಿ ನೀಡಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗಿತ್ತು. ಇದೀಗ, ಈ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ದುರದೃಷ್ಟಕರ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಮೈ ಶುಗರ್‌ ಕಾರ್ಖಾನೆಯಲ್ಲಿ ಸುಮಾರು 14,046 ರೈತರು ಷೇರುದಾರರಿದ್ದಾರೆ. ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಕಾರ್ಖಾನೆಗಿದೆ. ವಾರ್ಷಿಕ 9,000 ಲಕ್ಷ ಟನ್‌ ಕಬ್ಬ ಅನ್ನು ಈ ಹಿಂದೆ  ಕಾರ್ಖಾನೆ ಅರೆಯುತ್ತಿತ್ತು. ಅಲ್ಲದೆ, ಶೇ 20ರಿಂದ 30 ಷೇರು ಡಿವಿಟೆಂಡ್‌ ಅನ್ನು 18 ವರ್ಷಕ್ಕೂ ಹೆಚ್ಚು ಕಾಲ ನೀಡಿದೆ. 14ಕ್ಕೂ ಹೆಚ್ಚು ಫರ್ಮ್‌ಗಳು, ವಿದ್ಯಾಸಂಸ್ಥೆಗಳು, ರೈತ ಸಮುದಾಯ ಭವನಗಳನ್ನು ಹೊಂದಿರುವ ಕಾರ್ಖಾನೆ, ಮಂಡ್ಯ ಜಿಲ್ಲೆಯಲ್ಲಿ 207 ಎಕರೆಗಿಂತಲೂ ಹೆಚ್ಚು  ಭೂಮಿ ಹೊಂದಿದೆ’ ಎಂದೂ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು