ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗಿಲ್ಲ ಆನ್‌ಲೈನ್ ಶಿಕ್ಷಣ: ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ತೀರ್ಮಾನ

Last Updated 10 ಜೂನ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಮೂಲಕ ಪುಟ್ಟ ಮಕ್ಕಳಿಗೆ ಬೋಧನೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಯಾವುದೇ ಪಠ್ಯಕ್ರಮಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸುತ್ತಿದ್ದರೆ ತಕ್ಷಣದಿಂದಲೇ ಅದನ್ನು ಸ್ಥಗಿತಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಲಾಕ್‌ಡೌನ್ ಸಮಯದಲ್ಲಿ ಖಾಸಗಿಶಾಲೆಗಳು ಆರಂಭಿಸಿರುವ ಆನ್‌ಲೈನ್ ತರಗತಿಗಳಿಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನೆಲೆಯೊಳಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು, ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿರಿಯ ಶಿಕ್ಷಣ ತಜ್ಞರು, ಮಾನಸಿಕ ಆರೋಗ್ಯ ವಿಭಾಗದ ಪರಿಣಿತರು, ಖಾಸಗಿ ವಿದ್ಯಾಸಂಸ್ಥೆಗಳ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಶೈಕ್ಷಣಿಕ ಹಾಗೂ ಮಕ್ಕಳ ಸುಧಾರಣೆ ವಿಷಯದ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಹಂತದಲ್ಲಿ ಎಲ್ಲ ಪಠ್ಯಕ್ರಮದ ಶಾಲೆಗಳಲ್ಲಿ ಆನ್‌ಲೈನ್‌ ಬೋಧನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸೂಚಿಸಲಾಗಿದೆ’ ಎಂದರು.

ತಜ್ಞರ ಸಮಿತಿ ರಚನೆ: ‘ಆರನೇ ತರಗತಿಯಿಂದ 10ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣದ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮತ್ತು ಆ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ಜತೆಗೆ ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ಆನ್‌ಲೈನ್‌ ಹೊರತುಪಡಿಸಿ ತಂತ್ರಜ್ಞಾನ ಆಧರಿತ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಹ ಈ ಸಮಿತಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ’ ಎಂದು ಸಚಿವರು ಹೇಳಿದರು.

ಸಮಿತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯರಾಗಿದ್ದ ಪ್ರೊ.ಎಂ.ಕೆ.ಶ್ರೀಧರ್‌, ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರಜಗಿ, ಡಾ.ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್‌, ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್‌ಹುಡ್‌ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಇರುತ್ತಾರೆ’ ಎಂದರು.

‘ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು, ತರಗತಿ ಇಲ್ಲದಿರುವಾಗ ಮಕ್ಕಳ ಶಿಕ್ಷಣ ನಿರಂತರತೆಗಾಗಿ ಇದನ್ನು ಎಷ್ಟು ಬಳಕೆ ಮಾಡಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ. ರಜಾ ಅವಧಿಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಕೋವಿಡ್‌ನಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ತರಗತಿಗಳಿಗೆ ಪರ್ಯಾಯವೆನ್ನುವ ಭಾವನೆಯನ್ನು ಮೂಡಿಸದೇ ಅವರ ಕಲಿಕೆಗೆ ಪ್ರೇರಣೆಯಾಗುವಂತೆ ಮಾತ್ರವೇ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಿದೆ. ಯಾವುದೇ ವಿದ್ಯಾರ್ಥಿ ಕಲಿಕೆಯಿಂದ ವಂಚಿತವಾಗದೇ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವುದು ಸೇರಿದಂತೆ ಈ ಪರ್ಯಾಯ ಬೋಧನಾ ಕ್ರಮದ ಮಾರ್ಗಸೂಚಿಗಳನ್ನು ರೂಪಿಸಿ ಈ ಸಮಿತಿಯು 10 ದಿನಗಳಲ್ಲಿ ವರದಿ ನೀಡಲಿದೆ’ ಎಂದು ಮಾಹಿತಿ ನೀಡಿದರು.

ಟಿವಿ ಚಾನಲ್: ‘ಗ್ರಾಮೀಣ ಭಾಗ ಮತ್ತು ಗುಡ್ಡಗಾಡು ಪ್ರದೇಶದ ಮಕ್ಕಳಿಗಾಗಿ ಟಿವಿ ಮೂಲಕ ಶಿಕ್ಷಣ ನೀಡಲು ಅನುಕೂಲ ಆಗುವಂತೆ ಮೂರು ಶೈಕ್ಷಣಿಕ ಚಾನೆಲ್‌ಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಶುಲ್ಕ ಹೆಚ್ಚಳ: 1 ಸಾವಿರ ದೂರು
‘ಈ ಶೈಕ್ಷಣಿಕ ಸಾಲಿಗೆ ಬೋಧನಾ ಶುಲ್ಕ ಹೆಚ್ಚಳ ಮಾಡಬಾರದು ಎಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟವಾದ ಸುತ್ತೋಲೆ ಹೊರಡಿಸಿದ್ದು, ಇದನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಈವರೆಗೆ 1 ಸಾವಿರ ದೂರು ಬಂದಿದೆ. ಅದರಲ್ಲಿ 350 ಪ್ರಕರಣಗಳಿಗೆ ಪರಿಹಾರ ನೀಡಿದ್ದೇವೆ. ಹೆಚ್ಚಿಸಿದ ಶುಲ್ಕ ಆದೇಶ ವಾಪಸ್ ಪಡೆಯಲು ಸೂಚಿಸಲಾಗಿದೆ’ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳು‌ತ್ತಿದೆ. ಹೀಗಾಗಿ ಪರೀಕ್ಷೆ ನಡೆಸಲು ಯಾವುದೇ ಅಡ್ಡಿಯಿಲ್ಲ’ ಎಂದರು.

ಶಿಕ್ಷಕರ ವರ್ಗಾವಣೆ: ಕರಡು ನಿಯಮ ಪ್ರಕಟ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ಕಾಯ್ದೆಗೆ ಕರಡು ನಿಯಮಗಳನ್ನು ಬುಧವಾರ ಪ್ರಕಟಿಸಲಾಗಿದ್ದು, 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ.

ಶೇ 25ರಷ್ಟು ಖಾಲಿ ಹುದ್ದೆಗಳಿರುವ ತಾಲ್ಲೂಕಿನಿಂದ ವರ್ಗಾವಣೆ ಇಲ್ಲ ಹಾಗೂ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಪರಸ್ಪರ ವರ್ಗಾವಣೆಗೆ ಅವಕಾಶ ಎಂಬುದನ್ನು ನಿಯಮದಲ್ಲಿ ಸೇರಿಸಲಾಗಿದೆ.

‘ಘಟಕದ ಹೊರಗಡೆ ವರ್ಗಾವಣೆ ಕೇವಲ ಶೇ 2ರಷ್ಟಿದೆ. ಹೀಗಾಗಿ 25ಕ್ಕಿಂತ ಹೆಚ್ಚಿಗೆ ಖಾಲಿ ಇರುವ ತಾಲ್ಲೂಕುಗಳಿಂದ ವರ್ಗಾವಣೆಯಿಲ್ಲ ಎಂಬ ಅಂಶವನ್ನು ಕೈಬಿಡಬೇಕು. ಇದರಿಂದ ಕಲ್ಯಾಣ ಕರ್ನಾಟಕದ ಬಹುತೇಕ ತಾಲ್ಲೂಕುಗಳ ವರ್ಗಾವಣೆ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗುತ್ತದೆ. ಪರಸ್ಪ‍ರ ವರ್ಗಾವಣೆಗೆ 7 ವರ್ಷ ಅವಧಿಯನ್ನು ಹಾಗೂ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಪರಸ್ಪರ ವರ್ಗಾವಣೆ ಅವಕಾಶವೆಂಬ ಅಂಶ ಶಿಕ್ಷಕರಿಗೆ ಮಾರಕ. ಇದನ್ನು ಕೈಬಿಟ್ಟು ಯಾವುದೇ ಷರತ್ತು ಇಲ್ಲದೆ ಪರಸ್ಪರ ವರ್ಗಾವಣೆಗೆ ಅವಕಾಶ ಕೊಡಬೇಕು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

‘ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೇವಾ ಅವಧಿಯಲ್ಲಿ ಒಂದು ಬಾರಿ ಅವರ ಜಿಲ್ಲೆಗೆ ಹೋಗಲು ಅವಕಾಶ ಕಲ್ಪಿಸಬೇಕು’ ಎಂದು ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಒತ್ತಾಯಿಸಿದ್ದಾರೆ.

**
ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.


-ಎಸ್‌.ಸುರೇಶ್‌ ಕುಮಾರ್‌,ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

**

ಆನ್‌ಲೈನ್ ತರಗತಿ ನಿಷೇಧಿಸಿದ್ದು ಹಾಗೂ ತಂತ್ರಜ್ಞಾನ ಬಳಕೆ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ಸೂಚಿಸಿರುವುದು ಸ್ವಾಗತಾರ್ಹ.


-ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

**

ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಆನ್‌ಲೈನ್‌ ತರಗತಿ ನಿಷೇಧವನ್ನು 7ನೇ ತರಗತಿವರೆಗೂ ವಿಸ್ತರಿಸಬೇಕಿತ್ತು.


-ವೀಣಾ ಮೋಹನ್‌, ಮುಖ್ಯಸ್ಥರು, ಪ್ರಜ್ಞಾ ಪಬ್ಲಿಕ್‌ ಸ್ಕೂಲ್‌, ಚಾಮರಾಜಪೇಟೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT