ವಿಜಯನಗರ ಅಲ್ಲ, ಕರ್ನಾಟಕ ಸಾಮ್ರಾಜ್ಯ: ವಸುಂಧರಾ ಫಿಲಿಯೋಜಾ ಹೇಳಿಕೆ

7
ಹಿರಿಯ ಸಂಶೋಧಕಿ

ವಿಜಯನಗರ ಅಲ್ಲ, ಕರ್ನಾಟಕ ಸಾಮ್ರಾಜ್ಯ: ವಸುಂಧರಾ ಫಿಲಿಯೋಜಾ ಹೇಳಿಕೆ

Published:
Updated:
Prajavani

ಹೊಸಪೇಟೆ: ‘ವಿಜಯನಗರ ಸಾಮ್ರಾಜ್ಯ ಎಂಬುದು ಎಲ್ಲೂ ಇರಲಿಲ್ಲ. ಈಗ ಪ್ರಚಲಿತದಲ್ಲಿರುವ ಹಂಪಿಯ ವಿಜಯನಗರ ಸಾಮ್ರಾಜ್ಯ ವಾಸ್ತವವಾಗಿ ‘ಕರ್ನಾಟಕ ಸಾಮ್ರಾಜ್ಯ’ ಆಗಿತ್ತು’ ಎಂದು ಹಿರಿಯ ಸಂಶೋಧಕಿ ವಸುಂಧರಾ ಫಿಲಿಯೋಜಾ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯನಗರ ಸಾಮ್ರಾಜ್ಯ ಎಂಬುದಕ್ಕೆ ಯಾವ ಶಾಸನ, ಸಮಕಾಲೀನ ಸಾಹಿತ್ಯದಲ್ಲಿ ಉಲ್ಲೇಖವಿಲ್ಲ. ಆದರೆ, ಕರ್ನಾಟಕ ಸಾಮ್ರಾಜ್ಯ ಎಂಬುದನ್ನು ದೃಢಪಡಿಸುವಂತಹ ಶಾಸನ, ಸಾಹಿತ್ಯದ ಆಧಾರವಿದೆ’ ಎಂದು ಮಾಹಿತಿ ನೀಡಿದರು.

‘ಬಿ.ಎಂ. ಶ್ರೀ, ಶ್ರೀಕಂಠಯ್ಯ ಸೇರಿದಂತೆ ಅನೇಕ ಸಾಹಿತಿಗಳು ಕರ್ನಾಟಕ ಸಾಮ್ರಾಜ್ಯ ಎಂಬುದನ್ನು ಒಪ್ಪುತ್ತಾರೆ. ಆದರೆ, ವಿಜಯನಗರ ಪದ ಹೆಚ್ಚು ಪ್ರಚಲಿತದಲ್ಲಿರುವ ಕಾರಣ ಅವರು ಕೂಡ ಆ ಶಬ್ದವನ್ನೇ ಪ್ರಯೋಗ ಮಾಡಿದ್ದಾರೆ. 1,295ರಲ್ಲಿ ಮುಸ್ಲಿಂ ಅರಸರ ದಾಳಿಯನ್ನು ಹೊಯ್ಸಳ ರಾಜ ಮುಮ್ಮಡಿ ಬಲ್ಲಾಳ ಸಮರ್ಥವಾಗಿ ಎದುರಿಸಿದ್ದ. ಹೀಗಾಗಿ ಆತನನ್ನು ’ಕರ್ನಾಟಕದ ಬಲ್ಲಾಳ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು’ ಎಂದು ನಿದರ್ಶನ ನೀಡಿದರು.

‘ಬಲ್ಲಾಳ, ಹಂಪಿಗೆ ವಿಜಯ ವಿರೂಪಾಕ್ಷ ಹೊಸ ಪಟ್ಟಣ ಎಂದು ಹೆಸರಿಟ್ಟಿದ್ದ. ಮೊದಲನೇ ಬುಕ್ಕ ಅದಕ್ಕೆ ವಿಜಯನಗರ ಎಂದು ಮರು ನಾಮಕರಣ ಮಾಡಿದ.ಪಂಪಾಕ್ಷೇತ್ರದಿಂದ ಹಂಪಿ ಎಂಬ ಹೆಸರು ಬಂತು. ಅಷ್ಟೇ ಅಲ್ಲ, ವಿದ್ಯಾರಣ್ಯರು ಹಂಪಿಯಲ್ಲಿ ಇರಲಿಲ್ಲ. ವಿದ್ಯಾತೀರ್ಥ ಎಂಬುವರು ಇದ್ದರು. ಇವರನ್ನು ಮರೆತು ಬಿಟ್ಟು ವಿದ್ಯಾರಣ್ಯರನ್ನು ಮುಂಚೂಣಿಗೆ ತಂದಿದ್ದೇವೆ. ರಾಬರ್ಟ್‌ ಸಿವೆಲ್‌ ತನ್ನ ‘ಮರೆತು ಹೋದ ಸಾಮ್ರಾಜ್ಯ’ ಪುಸ್ತಕದಲ್ಲಿ ವಿಜಯನಗರ ಎಂಬ ಶಬ್ದ ಬಳಿಸಿದ. ನಂತರ ಅದು ಹೆಚ್ಚು ಪ್ರಚಲಿತಕ್ಕೆ ಬಂತು’ ಎಂದರು.

‘ಮುಸ್ಲಿಂ ಅರಸರಿಗೆ ಅಳಿಯ ರಾಮರಾಯನ ಮೇಲೆ ಬಹಳ ದ್ವೇಷವಿತ್ತು. ಈ ಕಾರಣಕ್ಕಾಗಿ ಅವರು, ಅವನು ಕಟ್ಟಿಸಿದ್ದ ದೇವಸ್ಥಾನ, ಮಹಲುಗಳಿಗೆ ಹಾನಿ ಮಾಡಿದರು. ಆದರೆ, ಅವರಿಗೆ ಹಿಂದೂ ಧರ್ಮದ ಮೇಲೆ ದ್ವೇಷವಿರಲಿಲ್ಲ. ಹಂಪಿಯ ಪುರಂದರ ಮಂಟಪವಿರುವ ಜಾಗದಲ್ಲಿ ಪುರಂದರದಾಸರು ನೆಲೆಸಿದ್ದರೂ ಎನ್ನುವುದು ಶುದ್ಧ ಸುಳ್ಳು’ ಎಂದು ಹೇಳಿದರು.

‘1963ರಿಂದ ಸತತವಾಗಿ ಹಂಪಿಗೆ ಭೇಟಿ ನೀಡಿ, ಸಂಶೋಧನೆ ಮಾಡುತ್ತಿದ್ದೇನೆ. ಎಲ್ಲ ಸಂಗತಿಗಳನ್ನು ‘ಹಂಪಿ ವಿಜಯನಗರ’ ಪುಸ್ತಕದಲ್ಲಿ ದಾಖಲಿಸಿದ್ದೇನೆ. ನನ್ನ ಪತಿ ಪಿಯರ್‌ ಸಿಲ್ವನ್‌ ಸಂಸ್ಕೃತ ವಿದ್ವಾಂಸರಾಗಿದ್ದಾರೆ. ಅವರು ಹಂಪಿಯ ಅರಸರ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಹಂಪಿಯ ಆನೆಗುಂದಿ ಬಳಿ ಈ ಹಿಂದೆ ಸೇತುವೆ ನಿರ್ಮಿಸುತ್ತಿದ್ದಾಗ ಅದನ್ನು ನಾನು ವಿರೋಧಿಸಿದ್ದೆ. ಹಂಪಿ ಒಂದು ಜೀವಂತ ಪುರಾತತ್ವ ಸ್ಥಳ. ಅದನ್ನು ಸಂರಕ್ಷಿಸಬೇಕಾದುದು ಎಲ್ಲರ ಜವಾಬ್ದಾರಿ. ಆದರೆ, ಇತ್ತೀಚೆಗೆ ಹಂಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನೋವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕರ್ನಾಟಿಕ್‌ ಅಲ್ಲ; ಕರ್ನಾಟಕ ಸಂಗೀತ’

‘ಕರ್ನಾಟಿಕ್‌ ಸಂಗೀತ ಎಂಬುದೇ ಇಲ್ಲ. ಇರುವುದು ಕರ್ನಾಟಕ ಸಂಗೀತ ಮಾತ್ರ’ ಎಂದು ಸಂಸ್ಕೃತ ವಿದ್ವಾಂಸ ಪಿಯರ್‌ ಸಿಲ್ವನ್‌ ಫಿಲಿಯೋಜಾ ತಿಳಿಸಿದರು.

‘ಕರ್ನಾಟಕ ಸಂಗೀತ ಜನ್ಮ ತಾಳಿದ್ದು ಹಂಪಿಯಲ್ಲಿ ಹೊರತು ಬೇರೆ ರಾಜ್ಯದಲ್ಲಿ ಅಲ್ಲ. ಅದರ ಬಗ್ಗೆಯೂ ಅನೇಕ ಕಟ್ಟುಕಥೆಗಳನ್ನು ಕಟ್ಟಲಾಗಿದೆ’ ಎಂದರು. ಸಿಲ್ವನ್‌ ಅವರು ಪ್ಯಾರಿಸ್‌ನ ಸೋರ್‌ಬಾನ್‌ ವಿಶ್ವವಿದ್ಯಾಲಯದಲ್ಲಿ 1971ರಲ್ಲಿ ‘ವಿಜಯನಗರದ ಮೊದಲ ಇಬ್ಬರು ಅರಸರು’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !