ಬುಧವಾರ, ಆಗಸ್ಟ್ 4, 2021
26 °C

ಎಲ್ಲಿದೆ ಪಾಠದ ಸಂಪರ್ಕ ಸೇತು?

ರವಿಚಂದ್ರ ಎಂ. Updated:

ಅಕ್ಷರ ಗಾತ್ರ : | |

Prajavani

ಪೂರ್ವತಯಾರಿ ಇಲ್ಲದೇ ಘೋಷವಾಕ್ಯ ಮೊಳಗಿಸುವುದು ನಮ್ಮ ಆಡಳಿತಶಾಹಿಗೆ ಅಂಟಿರುವ ಜಾಡ್ಯ. ಇತ್ತೀಚಿನ ದಿನಗಳಲ್ಲಂತೂ ಇದು ಹೆಚ್ಚು ಹೆಚ್ಚು ಅನಾವರಣಗೊಳ್ಳುತ್ತಲೇ ಇದೆ. ಆನ್‍ಲೈನ್ ಶಿಕ್ಷಣ ಸಾಂಪ್ರದಾಯಿಕ ಶಿಕ್ಷಣಕ್ಕೆ ಪರ್ಯಾಯವೆಂದು ವಾದಿಸುವವರೆಲ್ಲರೂ ಮನಗಾಣಬೇಕಾದ ಸತ್ಯವೆಂದರೆ: ಆನ್‌ಲೈನ್ ಶಿಕ್ಷಣಕ್ಕೇ ಅಗತ್ಯವಿರುವ ಪರಿಕರಗಳನ್ನು, ಮೂಲ ಸೌಲಭ್ಯಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ವಾಗಲಿ, ಅಖಿಲ ಭಾರತ ತಂತ್ರಜ್ಞಾನ ಶಿಕ್ಷಣ ಪರಿಷತ್‌ ಆಗಲಿ ಇದುವರೆಗೆ ಒದಗಿಸುವ ಗೋಜಿಗೆ ಹೋಗಿಲ್ಲ.

ಇನ್ನು ರಾಜ್ಯಮಟ್ಟದ ತಾಂತ್ರಿಕ ವಿಶ್ವವಿದ್ಯಾಲಯಗಳು ಸಹ (ಉದಾಹರಣೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ–ವಿಟಿಯು) ತಮ್ಮ ಆಡಳಿತ ಸುಪರ್ದಿಗೆ ಒಳಪಟ್ಟಿರುರುವ ಮತ್ತು ತಮ್ಮಿಂದ ಅಂಗೀಕೃತಗೊಂಡಿರುವ ನೂರಾರು ಕಾಲೇಜುಗಳಿಗೆ ಆನ್‌ಲೈನ್ ಶಿಕ್ಷಣ ಒದಗಿಸಬಲ್ಲ ಅಧಿಕೃತ ಪ್ಲಾಟ್‌ಫಾರ್ಮ್‌ನ ವ್ಯವಸ್ಥೆಯನ್ನು ಮಾಡಿಲ್ಲ. ಬೆರಳೆಣಿಕೆ ಸಂಖ್ಯೆಯಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳು ಮಾತ್ರ ಈ ರೀತಿಯ ಆನ್‌ಲೈನ್ ತರಗತಿ ನಡೆಸಲು ಬೇಕಾದ ಸ್ವಂತ ಮೂಲಸೌಕರ್ಯವನ್ನು ಹೊಂದಿವೆ.

ವಿಟಿಯು ಅಧೀನದಲ್ಲಿ ಬರುವ ಬಹುತೇಕ ಕಾಲೇಜಿನ ಆಡಳಿತ ಮಂಡಳಿಗಳು, ಆನ್‌ಲೈನ್ ತರಗತಿ ಮಾಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕ ವೃಂದದ್ದು ಎಂದೇ ಪರಿಗಣಿಸಿವೆ. ಶಿಕ್ಷಕರು ಅಂತರ್ಜಾಲದಲ್ಲಿ ಲಭ್ಯವಿರುವ ಟ್ರಯಲ್-ಅವತರಣಿಕೆಯ ವಿವಿಧ ಆನ್‌ಲೈನ್ ಪರಿಕರಗಳನ್ನು ಬಳಸಿ ಪ್ರವಚನದಲ್ಲಿ ತೊಡಗುವ ವ್ಯವಸ್ಥೆಗೆ ದೂಡಲ್ಪಟ್ಟಿದ್ದಾರೆ.

ಪಾಠ ಪ್ರವಚನಗಳನ್ನು ಸ್ವೀಕರಿಸುವ ಎಲ್ಲಾ ವಿದ್ಯಾರ್ಥಿಗಳೂ ಪ್ರತ್ಯೇಕ ಕೇಬಲ್ ಆಧರಿತ ಅಂತರ್ಜಾಲ ಸಂಪರ್ಕ ಹೊಂದಿರಲು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳ ಬಳಿ 4-ಜಿ ನೆಟ್‍ವರ್ಕ್‌ನ ಸಂಪರ್ಕ ಇಲ್ಲ. ಒಂದುವೇಳೆ ಮೊಬೈಲ್‌ ಇಂಟರ್ನೆಟ್‌ ಸೌಲಭ್ಯವನ್ನು ಹೊಂದಿದ್ದರೂ ಸೇವೆ ಒದಗಿಸುವ ಕಂಪನಿಗಳ ಕಾರ್ಯಕ್ಷಮತೆ ಮೇಲೆ ಶಿಕ್ಷಣ ಪ್ರಸರಣದ ಗುಣಮಟ್ಟ ಅವಲಂಬಿಸಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರ ನಡುವೆ ಸಂಪರ್ಕ ಸೇತು ಏರ್ಪಡಿಸಬೇಕಾದ ಕನಿಷ್ಠ ಮಟ್ಟದ ಮೂಲಸೌಕರ್ಯವನ್ನು ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಸರ್ಕಾರವಾಗಲಿ, ಉನ್ನತ ಶಿಕ್ಷಣ ಸಂಸ್ಥೆಗಳಾಗಲಿ ಅಥವಾ ಕಾಲೇಜುಗಳಾಗಲಿ ಒದಗಿಸದೇ ಏಕಾಏಕಿ ನಾವು ಆನ್‌ಲೈನ್ ತರಗತಿಗೆ ಸಿದ್ಧ ಎಂದು ಘೋಷಿಸಿದರೆ ಹೇಗೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು