ಬುಧವಾರ, ಮೇ 27, 2020
27 °C
ಕೊನೆಯ ಆಸೆಯಂತೆ ಮಠದಲ್ಲಿ ದೇಹತ್ಯಾಗ ಮಾಡಿದ ಶ್ರೀಗಳು; ಸೂತಕದಲ್ಲಿ ಕೃಷ್ಣನೂರು

ಕೊನೆಯ ಆಸೆಯಂತೆ ಮಠದಲ್ಲಿ ದೇಹತ್ಯಾಗ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು (88) ಭಾನುವಾರ ಬೆಳಿಗ್ಗೆ 9.20ಕ್ಕೆ ಇಲ್ಲಿ ವಿಧಿವಶರಾದರು. ಒಂಬತ್ತು ದಿನಗಳ ಜೀವನ್ಮರಣ ಹೋರಾಟ ಅಂತ್ಯವಾಯಿತು.

ಶ್ರೀಗಳು ದೇಹತ್ಯಾಗ ಮಾಡುತ್ತಿ ದ್ದಂತೆ ಮಠದ ಸಿಬ್ಬಂದಿ ಹೊರಬಂದು ಸಾರ್ವಜನಿಕವಾಗಿ ನಿಧನ ವಾರ್ತೆ ಘೋಷಿಸಿದರು. ಇದರ ಬೆನ್ನಲ್ಲೇ ಕದೋಣಿ ಸಿಡಿಸಿ (ಸಿಡಿಮದ್ದು) ಸಾವಿನ ಸುದ್ದಿಯನ್ನು ನಗರಕ್ಕೆ ಸಾರಲಾಯಿತು. ಮಠದ ಮುಂದೆ ಸೇರಿದ್ದ ಭಕ್ತರು, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದರು. ರಥಬೀದಿಯಲ್ಲಿ ಸೂತಕದ ಛಾಯೆ ಆವರಿಸಿತು.

ಇದಕ್ಕೂ ಮುನ್ನ ಬೆಳಿಗ್ಗೆ 7ಕ್ಕೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ಅಗತ್ಯ ಜೀವರಕ್ಷಕ ಸಾಧನಗಳೊಂದಿಗೆ ಶ್ರೀಗಳನ್ನು ಮಠಕ್ಕೆ ಕರೆತರಲಾಯಿತು. ತಜ್ಞ ವೈದ್ಯರ ತಂಡ ಜತೆಯಲ್ಲಿತ್ತು. ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತ ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದರು.

ಏನಾಗಿತ್ತು?: ಶ್ರೀಗಳು ತೀವ್ರ ಉಸಿರಾ ಟದ ಸಮಸ್ಯೆ ಹಾಗೂ ನ್ಯುಮೋನಿಯಾ ಸೋಂಕಿನಿಂದ ಬಳಲುತ್ತಿದ್ದರು. ಇದೇ 20ರಂದು ನಸುಕಿನ 3 ಗಂಟೆಗೆ ದಿಢೀರ್ ಅಸ್ವಸ್ಥಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿತ್ತು.

ವೈದ್ಯರ ತಂಡ 9 ದಿನಗಳಿಂದ ಚಿಕಿತ್ಸೆ ನೀಡುತ್ತಿತ್ತು. ಬೆಂಗಳೂರಿನ ಮಣಿಪಾಲ್‌ ಹಾಗೂ ನವದೆಹಲಿಯ ಏಮ್ಸ್‌ನ ವೈದ್ಯರ ನೆರವು ಪಡೆಯಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ನಿಧನದ ನಂತರ: ಬಿದಿರಿನ ಬುಟ್ಟಿಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಿ ಪೇಜಾವರ ಮಠದಿಂದ ಮೆರವಣಿಗೆ ಆರಂಭಿಸಿ, ಕನಕನ ಕಿಂಡಿಯಲ್ಲಿ ಮೊದಲಿಗೆ ಕೃಷ್ಣನ ದರ್ಶನ ಮಾಡಿಸಲಾಯಿತು. ಬಳಿಕ ಮಧ್ವಸರೋವರಕ್ಕೆ ತೆರಳಿ ಮೂರು ಬಾರಿ ಮುಳುಗೇಳಿಸಿ, ಅಭಿಷೇಕ ಮಾಡಿಸಲಾಯಿತು.

ಕೊನೆಯ ಪೂಜೆ: ಮಠದ ಗರ್ಭಗುಡಿಯ ಮುಂದಿನ ತೀರ್ಥ ಮಂಟಪದ ಎದುರು ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥರು ಪೇಜಾವರ ಶ್ರೀಗಳಿಂದ ಕೃಷ್ಣನಿಗೆ ಕೊನೆಯ ಬಾರಿಗೆ ಆರತಿ ಮಾಡಿಸಿದರು. ಇದು ಯತಿಯೊಬ್ಬರು ಮರಣಾನಂತರ ದೇವರಿಗೆ ಸಲ್ಲಿಸುವ ಕೊನೆಯ ಪೂಜೆ. ಬಳಿಕ, ಕೆಲಹೊತ್ತು ಚಂದ್ರಶಾಲೆಯಲ್ಲಿ ಪಾರಾಯಣ, ಭಜನೆ, ಹರಿ ಹಾಗೂ ಗೋವಿಂದ ನಾಮಸ್ಮರಣೆ ನಡೆಯಿತು.

ಅಷ್ಟಮಠಗಳಿರುವ ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿಸಿ, ತೆರೆದ ವಾಹನದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಕೊಂಡೊಯ್ಯ
ಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಕುಶಾಲುತೋಪು ಹಾರಿಸಲಾಯಿತು.

ಮಧ್ಯಾಹ್ನ 12.10 ರಿಂದ 1.40 ರವರೆಗೂ ಸಾವಿರಾರು ಭಕ್ತರು, ಅಭಿಮಾನಿಗಳು, ಗಣ್ಯರು ದರ್ಶನ ಪಡೆದು ಕಂಬನಿ ಮಿಡಿದರು. 2 ಗಂಟೆಗೆ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಸಾಗಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು