ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಸೋಂಕು: ನಗರ ತೊರೆಯುತ್ತಿರುವ ಜನ

Last Updated 6 ಜುಲೈ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹರಡುವುದು ಹೆಚ್ಚುತ್ತಿದ್ದಂತೆ ಜನ ಸ್ವಂತ ಊರಿನತ್ತ ಮುಖಮಾಡಿದ್ದಾರೆ. ಬಸ್, ಆಟೊ, ಟ್ರ್ಯಾಕ್ಟರ್, ಲಗೇಜ್‌ ಆಟೊಗಳಲ್ಲಿ ಗಂಟು–ಮೂಟೆ ಸಮೇತ ವಲಸಿಗರು ಸೋಮವಾರ ಊರಿಗೆ ತೆರಳಿದರು.

‘ಸೋಂಕು ನಿಯಂತ್ರಣದಲ್ಲಿದೆ. ಯಾರೂ ನಗರವನ್ನು ತೊರೆಯಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಹಾಗಿದ್ದರೂ ಜನ ಊರಿಗೆ ಹಿಂದಿರುಗುವುದು ಸೋಮವಾರವೂ ಮುಂದುವರಿದಿತ್ತು.

‘ನಗರದಲ್ಲಿ ಆಟೊ ಓಡಿಸುತ್ತಿದ್ದೆ. ಪತ್ನಿ ಮನೆಗೆಲಸ ಮಾಡುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಮರಳಿ ಬಂದು ಬಿಡಿ ಎಂದು ಊರಿನಿಂದ ಫೋನ್‌ ಮಾಡುತ್ತಿದ್ದಾರೆ. ಸೋಂಕು ಕಡಿಮೆಯಾದ ನಂತರ, ಮರಳಿ ಬರುತ್ತೇವೆ’ ಎಂದು ತಾವರೆಕೆರೆ ಕುದೂರಿಗೆ ಹೊರಟಿದ್ದ ಆಟೊ ಚಾಲಕರೊಬ್ಬರು ಹೇಳಿದರು.

‘ಬೆಂಗಳೂರು ಸಹವಾಸ ಸಾಕಾಯಿತು. ದುಡಿಮೆಗಾಗಿ ಇಲ್ಲಿಗೆ ಬಂದಿದ್ದೆವು. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆ ಇಲ್ಲದಂತಾಯಿತು. ಈಗ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊರಿಗೆ ಹೋಗಿ ಯಾವುದಾದರೂ ಕೆಲಸ ನೋಡಿಕೊಳ್ಳುವುದು ಒಳ್ಳೆಯದು ಎಂದು ಹೋಗುತ್ತಿದ್ದೇವೆ’ ಎಂದು ಶಿರಾದ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೆಲಮಂಗಲ ಟೋಲ್‌ಗೇಟ್‌ ಸೇರಿದಂತೆ ನಗರದ ಹೊರವಲಯಗಳಲ್ಲಿನ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಕೊಲೆಗಡುಕ ಸರ್ಕಾರ: ಸಿದ್ದರಾಮಯ್ಯ

‘ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ, ಅಷ್ಟೇ ಪ್ರಮಾಣದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಪರೀಕ್ಷೆ ನಡೆಸದೇ ಜನರ ಸಾವಿಗೆ ಕಾರಣವಾಗುತ್ತಿರುವ ಸರ್ಕಾರವನ್ನು ಕೊಲೆಗಡುಕ ಸರ್ಕಾರ ಎಂದು ಕರೆದರೆ ತಪ್ಪಾಗುತ್ತದೆಯೇ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯದಲ್ಲಿ 59 ಕೋವಿಡ್ ಪರೀಕ್ಷಾ ಕೇಂದ್ರಗಳಿದ್ದು, 31,116 ಸ್ಯಾಂಪಲ್‌ಗಳನ್ನು ಪರೀಕ್ಷಿಸಬಹುದು. ಆದರೆ, ಪ್ರತಿದಿನ ಕೇವಲ 13, 910 ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ‌ ಒಟ್ಟು ಸಾಮರ್ಥ್ಯದ ಶೇಕಡಾ 44.7 ರಷ್ಟು ಮಾತ್ರ ಬಳಕೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಯೋಗ್ಯತೆಗೆ ಬೇರೆ ಸಾಕ್ಷಿ ಬೇಕೇ?’ ಎಂದು ಕಿಡಿ ಕಾರಿದ್ದಾರೆ.

‘ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ದಿನಕ್ಕೆರಡು ಬಾರಿ ಮುಖ್ಯಮಂತ್ರಿ ಹಾಗೂ ಸಚಿವರು ಅಬ್ಬರಿಸುತ್ತಿದ್ದಾರೆ. ಒಂದೆರಡು ಆಸ್ಪತ್ರೆಗಳ ವಿರುದ್ಧ 'ಕಠಿಣ ಕ್ರಮ' ಕೈಗೊಳ್ಳಬಾರದೇಕೆ? ಸರ್ಕಾರ ಯಾರಿಗೆ ಮತ್ತು ಯಾಕೆ ಹೆದರುತ್ತಿದೆ?’ ಎಂದು ಅವರು ಕುಟುಕಿದ್ದಾರೆ.

‘ಕೊರೊನಾ ನಿಯಂತ್ರಣಕ್ಕೆ ಸೋಂಕು ಪರೀಕ್ಷೆಯೇ ಏಕೈಕ ಮಾರ್ಗ ಎಂದು ವಿಶ್ವದಾದ್ಯಂತ ವೈದ್ಯರು-ತಜ್ಞರು ಹೇಳುತ್ತಲೇ ಇದ್ದಾರೆ. ಕೊರೊನಾ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರ್ಕಾರಕ್ಕೆ ಸೋಂಕು ಪರೀಕ್ಷೆಯನ್ನು ಸರಿಯಾಗಿ ನಡೆಸಬೇಕೆಂದು ಮಾತ್ರ ಗೊತ್ತಾಗಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

‘ಆರೋಗ್ಯ ಯೋಧ’ರಿಗೆ ರಿಸ್ಕ್‌ ಭತ್ಯೆ?

ಕೋವಿಡ್‌ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಆರೋಗ್ಯ ಯೋಧ’ರಿಗೆ ರಿಸ್ಕ್‌ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಆರೋಗ್ಯ ಇಲಾಖೆಯ ‘ಡಿ’ ಗ್ರೂಪ್‌ ನೌಕರರಿಗೆ ವೇತನ ಹೆಚ್ಚಿಸುವುದೂ ಸೇರಿದಂತೆ, ಎಲ್ಲ ಆರೋಗ್ಯ ಯೋಧರಿಗೆ ರಿಸ್ಕ್‌ ಭತ್ಯೆ ನೀಡುವ ಮಾತುಕತೆ ನಡೆದಿದ್ದು, ಶೀಘ್ರ ಮಾಹಿತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೇರ ನೇಮಕಾತಿಗಳಿಗೆ ಸರ್ಕಾರದ ತಡೆ

ಕೋವಿಡ್ ಮತ್ತು ಆರ್ಥಿಕ ಸಂಕಷ್ಟದ ಕಾರಣ ವಿವಿಧ ಇಲಾಖೆಗಳಲ್ಲಿರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಗಳಿಗೆ ರಾಜ್ಯ ಸರ್ಕಾರ ತಡೆ ನೀಡಿದೆ.

ಈ ಸಂಬಂಧ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.‌ಎನ್‌. ಪ್ರಸಾದ್‌ ಅವರು ಆದೇಶ ಹೊರಡಿಸಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿ ಎಲ್ಲ ರೀತಿಯ (2020–21 ನೇ ಸಾಲಿನ) ನೇಮಕಗಳಿಗೂ ಇದು ಅನ್ವಯವಾಗುತ್ತದೆ.

‘ರಾಜ್ಯದಲ್ಲಿ ಕೋವಿಡ್‌ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲ ಸಂಗ್ರಹಿಸುವ ಅಗತ್ಯವಿದೆ. ಸರ್ಕಾರದ ವೆಚ್ಚದ ಬಾಬ್ತಿನಲ್ಲಿ ಮಿತವ್ಯಯ ಪಾಲಿಸುವುದು ಅವಶ್ಯ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಮುಂದಿನ ಆದೇಶ ಹೊರಡಿಸುವವರೆಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುತ್ತದೆ. ಈಗಾಗಲೇ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿ ಇರುವ ನೇಮಕಾತಿ ಪ್ರಕ್ರಿಯೆಗಳಿಗೂ ಆದೇಶ ಅನ್ವಯ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT