ಸೋಮವಾರ, ಸೆಪ್ಟೆಂಬರ್ 20, 2021
21 °C
ಮುಳುಗಿದ ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ

ಹೊಸ ಸೇತುವೆ ನಿರ್ಮಾಣ ಯಾವಾಗ?

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ತುಂಗಭದ್ರಾ ಜಲಾಶಯದ ನೀರು ಪ್ರವಾಹವಾಗಿ ಹರಿದ ಪರಿಣಾಮವಾಗಿ ಕಂಪ್ಲಿ–ಗಂಗಾವತಿ ರಾಜ್ಯ ಹೆದ್ದಾರಿ–29ರ ಸೇತುವೆ ಸಂಪೂರ್ಣ ಮುಳುಗಿದೆ. ಹೊಸ ಸೇತುವೆಯನ್ನು ಯಾವಾಗ ನಿರ್ಮಿಸುವುದು ಎಂದು ಸೇತುವೆಯ ಆಚೀಚೆ ಇರುವ ಬಳ್ಳಾರಿ–ಕೊಪ್ಪಳ ಭಾಗದ ಜನ ಮತ್ತೆ ತಮ್ಮ ಅಹವಾಲನ್ನು ಮುಂದಿಟ್ಟಿದ್ದಾರೆ. 

ಪ್ರತಿ ಬಾರಿ ಪ್ರವಾಹ ಬಂದಾಗಲೂ ಸೇತುವೆ ಮುಳುಗಡೆಯಾಗುತ್ತದೆ. ಜನಜೀವನ ಮತ್ತು ವ್ಯಾಪಾರ ವಹಿವಾಟು ಅತಂತ್ರಗೊಳ್ಳುತ್ತದೆ. ಸೇತುವೆಯ ಈ ತುದಿಯಲ್ಲಿರುವ ಕಂಪ್ಲಿ ಭಾಗದ ಜನ ಮತ್ತು ಆ ಭಾಗದಲ್ಲಿರುವ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಜನ ಪರಸ್ಪರ ಓಡಾಟ, ಮಾತುಕತೆಗೂ ತೊಡಕು ಉಂಟಾಗುತ್ತದೆ. ಈ ಬಾರಿಯೂ ಅದೇ ಸಮಸ್ಯೆ.

ಶಿಥಿಲ: ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಶಿಥಿಲಗೊಂಡಿದ್ದು, ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಗೊಂಡಂತೆ, ಸೇತುವೆಯನ್ನು ಅವಲಂಬಿಸಿದ ಜನರಿಗೆ ಆತಂಕ ಶುರುವಾಗುತ್ತದೆ. ಹೈದರಾಬಾದ್ - ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ನಿರ್ಮಾಣವಾಗಿ ಆರು ದಶಕವಾಗುತ್ತಿದೆ.

ಅಭದ್ರ: ‘ಸೇತುವೆಗೆ ಈಗ ತಡೆಗೋಡೆಗಳು ಇಲ್ಲ. ಬದಲಿಗೆ ಕಂಬಿಗಳನ್ನು ಅಳವಡಿಸಲಾಗಿದೆ. ಪ್ರವಾಹದಲ್ಲಿ ಅವು ಕೂಡ ಕೊಚ್ಚಿಕೊಂಡು ಹೋಗಿವೆ. ಕಾಂಕ್ರಿಟ್‌ ಕೂಡ ಅಲ್ಲಲ್ಲಿ ಕಿತ್ತುಹೋಗಿದೆ. ಮೂರು ವರ್ಷದ ಹಿಂದೆ ಸೇತುವೆಯನ್ನು ದುರಸ್ತಿಗೊಳಿಸಿ ರಕ್ಷಣಾ ಕಂಬಗಳನ್ನು ಅಳವಡಿಸಲಾಗಿತ್ತು. ವಾಹನಗಳು ತಗುಲಿ ಅವು ಕಿತ್ತುಹೋಗಿವೆ. ನಿಗದಿತ ಭಾರಕ್ಕಿಂತ ಅಧಿಕ ಭಾರದ ವಾಹನಗಳು ಸೇತುವೆಯಲ್ಲಿ ಸಂಚರಿಸುತ್ತಿವೆ. ಅವುಗಳನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿಲ್ಲ’ ಎಂದು ಸ್ಥಳೀಯರಾದ ವೆಂಕಪ್ಪ, ಗಿರಿಯಣ್ಣ ದೂರಿದರು.

‘ಬಿಜೆಪಿ ಸರ್ಕಾರವಿದ್ದಾಗ, ಈಗಿನ ಸೇತುವೆಯಿಂದ 100 ಮೀಟರ್ ದೂರದಲ್ಲಿ ಹೊಸ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು, ಆದರೆ, ಆ ಯೋಜನೆ ಏನಾಗಿದೆಯೋ ಗೊತ್ತಿಲ್ಲ’ ಎಂದು ಸುರೇಶ್‌ ಹೇಳಿದರು.

ಪ್ರಯತ್ನ: ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೆ.ಎನ್‌.ಗಣೇಶ್‌, ಕನಕಗಿರಿ ಕ್ಷೇತ್ರದ ಶಾಸಕರ ಜೊತೆ ಸಮಾಲೋಚನೆ ನಡೆಸಿ, ಹೊಸ ಸೇತುವೆ ನಿರ್ಮಾಣಕ್ಕೆ ಜಂಟಿ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಐದನೇ ಬಾರಿ ಮುಳುಗಡೆ

ಪ್ರವಾಹದ ನೀರಿನಲ್ಲಿ ಸೇತುವೆ ಇದುವರೆಗೆ ಐದು ಬಾರಿ ಮುಳುಗಡೆಯಾಗಿದೆ. 3 ಲಕ್ಷ ಕ್ಯುಸೆಕ್ಸ್‌ ನೀರು ಹರಿದ ಪರಿಣಾಮ 1962ರಲ್ಲಿ ಹಾಗೂ 1992 ರ ಪ್ರವಾಹದಲ್ಲಿ ಸೇತುವೆ ಮುಳುಗಿತ್ತು. 2013ರಲ್ಲಿ ಎಂಟು ದಿನ, 2014ರಲ್ಲಿ ಎರಡು ಬಾರಿ ಸೇತುವೆ ಮುಳುಗಿತ್ತು. ಐದು ವರ್ಷದ ನಂತರ ಮತ್ತೆ ಮುಳುಗಿದೆ.

1959: ಸೇತುವೆಗೆ ಶಂಕುಸ್ಥಾಪನೆ
1961: ಲೋಕಾರ್ಪಣೆ:
₨ 18, 71 ಲಕ್ಷ: ಸೇತುವೆ ನಿರ್ಮಾಣ ವೆಚ್ಚ
1,934 ಅಡಿ: ಸೇತುವೆಯ ಉದ್ದ
22 ಅಡಿ: ಸೇತುವೆಯ ಅಗಲ
2 ವರ್ಷ: ಸೇತುವೆ ನಿರ್ಮಾಣದ ಕಾಲಾವಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು