ಮಂಗಳವಾರ, ಜೂನ್ 2, 2020
27 °C
ಉಳಿದವರನ್ನು ಮನೆಗಳಲ್ಲಿಯೇ ಇರುವಂತೆ ನೋಡಿಕೊಳ್ಳಲು ಇವರು ಮನೆಯಿಂದ ಹೊರಗೇ ಇರಬೇಕು

ಸಮಾಜದ ಸ್ವಾಸ್ಥ್ಯಕ್ಕಾಗಿ ಮಿಡಿವ ಪೊಲೀಸರು

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

prajavani

ಕೋವಿಡ್‌–19 ಕಾರಣದಿಂದ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿರುವ ಈ ಸನ್ನಿವೇಶದಲ್ಲಿ, ಜನ ಮನೆಯಿಂದ ಹೊರಬರದಂತೆ ತಡೆಯುವ ಹೊಣೆ ಪೊಲೀಸರ ಮೇಲಿದೆ. ಹೀಗಾಗಿ, ಉಳಿದವರನ್ನು ಮನೆಗಳಲ್ಲಿ ಇರುವಂತೆ ಮಾಡಲು ಮನೆಯಿಂದ ಹೊರಗೇ ಇರಬೇಕಾದ ಅನಿವಾರ್ಯತೆ ಅವರದ್ದಾಗಿದೆ.

ವೈರಾಣು ಭೀತಿ ಅವರನ್ನೇನೂ ಕಾಡದೇ ಬಿಟ್ಟಿಲ್ಲ. ಆದರೆ, ಅದಕ್ಕಿಂತ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಅವರಿಗೆ ಮುಖ್ಯವಾಗಿದೆ. ಆದ್ದರಿಂದ ಹಗಲು–ರಾತ್ರಿ ಎನ್ನದೆ ಅವರು ರಸ್ತೆಗಳಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಕೋವಿಡ್‌–19 ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಲವು ನಗರಗಳಲ್ಲಿ ಭಿನ್ನ ಹಾದಿಯನ್ನೂ ತುಳಿದಿದ್ದಾರೆ. ಕೊರೊನಾ ಹೆಲ್ಮೆಟ್‌ ತೊಡುವುದು, ‘ಘರ್‌ ಮೆ ಹೀ ರೆಹನಾ ಹೈ’ ಸೇರಿದಂತೆ ಜಾಗೃತಿ ಗೀತೆಗಳನ್ನು ಹಾಡುವುದು, ರಸ್ತೆಗಳಲ್ಲಿ ಚಿತ್ರ ಬಿಡಿಸುವುದು ಇಂಥ ನಡೆಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗೆಯೇ, ನಿರ್ಗತಿಕರಿಗೆ ಆಹಾರ ಪೊಟ್ಟಣಗಳನ್ನೂ ನೀಡುತ್ತಿದ್ದಾರೆ.

ಲಾಕ್‌ಡೌನ್‌ ನಿಷೇಧಾಜ್ಞೆ ವೇಳೆಯಲ್ಲಿ ಬೆಂಗಳೂರು, ಕಲಬುರ್ಗಿ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ಪ್ರಮುಖ ನಗರಗಳ ಪ್ರತಿಯೊಂದು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಕಾಯುತ್ತಿದ್ದಾರೆ.

ಅನಗತ್ಯವಾಗಿ ಓಡಾಡುವರನ್ನು ಹಿಡಿದು ಲಾಠಿಯಿಂದ ಹೊಡೆಯುವ ಪೊಲೀಸರ ವಿಡಿಯೊ ಗಳಷ್ಟೆ ಎಲ್ಲೆಡೆ ಹರಿದಾಡುತ್ತಿವೆ. ಆದರೆ, ಭದ್ರತೆಗೆ ನಿಯೋಜನೆಗೊಂಡ ಪೊಲೀಸರ ವೈಯಕ್ತಿಕ ಜೀವನ ಹೇಗಾಗಿದೆ? ಇಲ್ಲಿದೆ ಕೇಳಿ ಅವರ ಕಥೆ:

ನಿತ್ಯವೂ ರಸ್ತೆಯಲ್ಲಿ ಭದ್ರತೆ ಕೈಗೊಳ್ಳುವ ಹಾಗೂ ಗಸ್ತು ತಿರುಗುವ ಪೊಲೀಸರಿಗೆ ಜನಸಂಪರ್ಕ ಹೆಚ್ಚಿರುತ್ತದೆ. ಕೆಲಸ ಮುಗಿಸಿ ಮನೆಗೆ ಹೋಗಿ, ಪತ್ನಿ ಹಾಗೂ ಮಕ್ಕಳ ಜೊತೆ ಬೆರೆಯಲಾಗದೇ ಸಂಕಟಪಡುತ್ತಿದ್ದಾರೆ. ಹಲವು ಪೊಲೀಸರು, ತಮ್ಮ ಕುಟುಂಬದವರನ್ನು ಊರುಗಳಿಗೆ ಕಳುಹಿಸಿ ಒಬ್ಬಂಟಿಯಾಗಿ ಉಳಿದಿದ್ದಾರೆ.

‘ಮನೆಯಲ್ಲಿ ತಂದೆ–ತಾಯಿ, ಪತ್ನಿ ಹಾಗೂ ಮಕ್ಕಳು ಇದ್ದಾರೆ. ಕೆಲಸ ಮುಗಿಸಿ ಮನೆಗೆ ಹೋಗಲು ಭಯವಾಗುತ್ತಿದೆ. ಯಾರ ಜೊತೆಗೂ ಬೆರೆಯಲು ಆಗುತ್ತಿಲ್ಲ’ ಎಂದು ಬೆಂಗಳೂರಿನ ರಾಜಾಜಿನಗರ ಠಾಣೆ ಕಾನ್‌ಸ್ಟೆಬಲೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

‘ಮನೆಗೆ ಹೋದ ಕೂಡಲೇ ಸ್ನಾನ ಮಾಡುತ್ತೇವೆ. ಅಪ್ಪ ಬಂದನೆಂದು ಮಕ್ಕಳು ಓಡೋಡಿ ಬಂದರೆ, ಬರಬೇಡವೆಂದು ಹೇಳಿ ನಾವೇ ದೂರ ನಿಲ್ಲುತ್ತಿದ್ದೇವೆ. ಒಂಟಿಯಾಗಿಯೇ ಊಟ ಮಾಡಿ ಪ್ರತ್ಯೇಕವಾಗಿ ಮಲಗಿ, ಪುನಃ ಕೆಲಸಕ್ಕೆ ಬರುತ್ತಿದ್ದೇವೆ’ ಎಂದು ವಿವರಿಸುತ್ತಾರೆ.

‘ಜನರು ರೋಗಕ್ಕೆ ತುತ್ತಾಗಬಾರದೆಂದು ಬೀದಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದೇವೆ. ನಮಗೆ ಏನೇ ಆದರೂ ಪರವಾಗಿಲ್ಲ. ನಮ್ಮ ಕುಟುಂಬದವರು ಆರೋಗ್ಯವಾಗಿರಲಿ ಎಂದು ನಿತ್ಯವೂ ಅವರಿಂದ ಅಂತರ ಕಾಯುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ಆರ್ಥಿಕ ವರ್ಷದ ಅಂತ್ಯವೆಂದು ಹೇಳಿ ಕಳೆದ ತಿಂಗಳು ಮಾ. 14ಕ್ಕೆ ಸಂಬಳ ಕೊಟ್ಟಿದ್ದಾರೆ. ಈ ತಿಂಗಳಾದರೂ ಬೇಗನೇ ಸಂಬಳ ಕೊಡಬೇಕು. ನಮಗೂ ಕುಟುಂಬವಿದೆ. ಹಲವೆಡೆ ಸಾಲ ಮಾಡಿಕೊಂಡಿದ್ದು, ಅದರ ಕಂತು ಪಾವತಿ ಮಾಡಬೇಕು. ತಡವಾಗಿ ಸಂಬಳ ಕೊಟ್ಟರೆ ತೊಂದರೆ ಆಗುತ್ತದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ.

‘ಕಾನೂನಿನಡಿ ಜನರ ರಕ್ಷಣೆ ಮಾಡುತ್ತೇವೆ ಎಂಬ ಪ್ರತಿಜ್ಞೆ ಸ್ವೀಕರಿಸಿಯೇ ಕೆಲಸಕ್ಕೆ ಬಂದಿದ್ದೇವೆ. ಕರ್ತವ್ಯದ ಕೊನೆಯವರೆಗೂ ಅದನ್ನೇ ಮಾಡುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ನಮಗೇನಾದರೂ ಸಂಭವಿಸಿದರೆ ಕುಟುಂಬದವರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು’ ಎಂದು ವಿನಂತಿಸುತ್ತಾರೆ.

ಒಟ್ಟು ಪೊಲೀಸರು  – 84,773

ಖಾಲಿ ಹುದ್ದೆಗಳು – 15,540

ಭಯದಲ್ಲೇ ಬದುಕು

‘ನಮ್ಮ ಕುಟುಂಬಕ್ಕೆ ಪತಿಯೇ ಆಧಾರ. ನಿತ್ಯವೂ ಕೆಲಸಕ್ಕೆ ಹೋಗುವ ಅವರು ವಾಪಸು ಮನೆಗೆ ಯಾವಾಗ ಬರುತ್ತಾರೆ ಎಂಬುದನ್ನೇ ಕಾಯುತ್ತಿರುತ್ತೇವೆ. ಇಂದಿನ ಸ್ಥಿತಿಯಲ್ಲಿ ಭಯದಲ್ಲೇ ದಿನ ಕಳೆಯುತ್ತಿದ್ದೇವೆ’ ಎಂದು ಹೆಡ್ ಕಾನ್‌ಸ್ಟೆಬಲೊಬ್ಬರ ಪತ್ನಿ ಹೇಳುತ್ತಾರೆ.

‘ಕೊರೊನಾ ವೈರಾಣು ಹರಡುವಿಕೆ ಭೀತಿಯಲ್ಲಿ ಎಲ್ಲರೂ ಮನೆಯಲ್ಲಿ ಕುಳಿತಿದ್ದಾರೆ. ನಮ್ಮವರು ಕೆಲಸಕ್ಕೆ ಹೋಗುತ್ತಾರೆ. ಅವರು ಮನೆಗೆ ಬಂದಾಗಲೂ ಭಯವಿರುತ್ತದೆ. ಹೀಗಾಗಿ, ಮಕ್ಕಳನ್ನು ಅವರ ಬಳಿ ಕಳುಹಿಸುತ್ತಿಲ್ಲ’ ಎಂದು ಕಣ್ಣೀರಿಡುತ್ತಾರೆ.

ಮಾಸ್ಕ್, ಸ್ಯಾನಿಟೈಸರ್ ಮತ್ತು ಮೂರು ಪಾಳಿ ಕೆಲಸ

‘ಪೊಲೀಸರ ಸುರಕ್ಷತೆಗಾಗಿ ಇಲಾಖೆ ಕ್ರಮ ಕೈಗೊಂಡಿದೆ. ಐದು ಮಾಸ್ಕ್, 100 ಎಂ.ಎಲ್. ಸ್ಯಾನಿಟೈಸರ್ ಹಾಗೂ ಒಂದು ತೊಳೆದು ಹಾಕಿಕೊಳ್ಳುವ ಮಾಸ್ಕ್ ಕೊಡಲಾಗಿದೆ. ಕೈಗೆ ಗ್ಲೌಸ್ ಸಹ ಇದೆ’ಎಂದು ಬೆಂಗಳೂರಿನ ಪೀಣ್ಯ ಠಾಣೆ ಕಾನ್‌ಸ್ಟೆಬಲೊಬ್ಬರು ಹೇಳುತ್ತಾರೆ.

ಪೊಲೀಸರಿಗೆ ನೀಡಲಾಗಿರುವ ಕಿಟ್‌ ಅನ್ನು ಎಷ್ಟು ದಿನ ಬಳಸಬೇಕು ಮತ್ತು ಈ ಕಿಟ್ ಮುಗಿದ ನಂತರ ಮತ್ತೊಂದು ಕಿಟ್ ಯಾವಾಗ ನೀಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲ. ಹೀಗಾಗಿ ಈ ಕಿಟ್‌ ಅನ್ನು ಬಹಳ ಯೋಚನೆ ಮಾಡಿ ಬಳಸುವ ಅನಿವಾರ್ಯತೆ ಪೊಲೀಸರದ್ದು. ಮಾಸ್ಕ್‌ ಮತ್ತು ಸ್ಯಾನಿಟೈಸರ್ ಬಳಸುವುದರಿಂದ ಸೋಂಕು ತಗಲುವ ಅಪಾಯ ಇಲ್ಲ ಎಂಬುದು ಪೊಲೀಸರ ನಂಬಿಕೆ, ಅದರ ಜತೆಯಲ್ಲಿ ಏನಾದರೂ ತೊಂದರೆಯಾದರೆ ಹೇಗೆ ಎಂಬ ಭಯವೂ ಅವರಲ್ಲಿದೆ.

‘ಎಲ್ಲ ಸುರಕ್ಷತೆಯೂ ಇದೆ. ಏನು ಆಗುವುದಿಲ್ಲವೆಂದು ಕೆಲಸ ಮಾಡುತ್ತಿದ್ದೇವೆ. ಆದರೆ, ಮುಂದೆ ಏನು ಆಗುತ್ತದೆ ಎಂಬುದು ಗೊತ್ತಿಲ್ಲ. ಭಯವೂ ಹೆಚ್ಚಿದೆ’ ಎನ್ನುತ್ತಾರೆ ಆ ಕಾನ್‌ಸ್ಟೆಬಲ್‌.

ಸದಾ ರಸ್ತೆಗಳಲ್ಲಿ ನಿಂತು ಕೆಲಸ ಮಾಡುವುದರಿಂದ ಮಾಸ್ಕ್‌ಗಳು ಬೇಗ ಕೊಳಕಾಗುತ್ತವೆ ಮತ್ತು ಬಳಸಲು ಯೋಗ್ಯವಾಗಿರುವುದಿಲ್ಲ. ಕೋವಿಡ್–19 ತಗುಲಿದ್ದವರು ಮಾತ್ರ ಮಾಸ್ಕ್‌ ಬಳಸುವುದರಿಂದ ಉಪಯೋಗವಿದೆ. ಆದರೆ, ರಸ್ತೆಯಲ್ಲಿ ನಿಂತು ಕಾವಲು ಕಾಯುವ ಪೊಲೀಸರಿಗೆ ದೂಳು, ಬೇರೆ–ಬೇರೆ ಸೋಂಕುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾಸ್ಕ್‌ಗಳ ಅಗತ್ಯವಿದೆ. 

ಮೂರು ಪಾಳಿಯಲ್ಲಿ ಕೆಲಸ: ರಸ್ತೆಯಲ್ಲಿ ನಿರಂತರವಾಗಿ ಸರ್ಪಗಾವಲು ಇರಬೇಕಾದ ಸ್ಥಿತಿ ಇದೆ. ಹೀಗಾಗಿ ಪೊಲೀಸರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಸ್ತು ತಿರುಗಲು ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಬೀದಿ–ಬೀದಿಗಳಲ್ಲಿ ಗಸ್ತು ತಿರುಗಿ, ಲಾಕ್‌ಡೌನ್‌ ನಿರ್ವಹಣೆ ಮಾಡುವುದು ತುಸು ಸುಲಭವಾಗಿದೆ.

‘ಪ್ರತಿಯೊಬ್ಬ ಸಿಬ್ಬಂದಿಗೂ ಎಂಟು ಗಂಟೆ ಕೆಲಸ ನಿಗದಿ ಮಾಡಲಾಗಿದೆ. ನಿತ್ಯವೂ ಮೂರು ಪಾಳಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಕೆಲಸದ ಒತ್ತಡ ಸ್ವಲ್ಪ ಕಡಿಮೆ ಆಗಿದೆ’ ಎಂದು ಯಶವಂತಪುರ ಠಾಣೆ ಹೆಡ್ ಕಾನ್‌ಸ್ಟೆಬಲೊಬ್ಬರು ಹೇಳುತ್ತಾರೆ.

ಅವಿವಾಹಿತರ ಊಟಕ್ಕೆ ಕಷ್ಟ: ಕುಟುಂಬ ಇದ್ದವರಿಗೆ ಊಟದ ಸಮಸ್ಯೆ ಇಲ್ಲ. ಆದರೆ, ಅವಿವಾಹಿತರಿಗೆ ಸಾಕಷ್ಟು ಸಮಸ್ಯೆ ಇದೆ. ಕೆಲಸದ ಅವಧಿಯಲ್ಲಿ ಇಲಾಖೆಯಿಂದ ಒಂದು ಹೊತ್ತಿನ ಊಟ ನೀಡಲಾಗುತ್ತದೆ. ಲಾಕ್‌ಡೌನ್ ಇರುವುದರಿಂದ ಹೋಟೆಲ್‌ಗಳು ಇಲ್ಲ. ಉಳಿದ ಎರಡು ಹೊತ್ತಿನ ಊಟವನ್ನು ಅವರೇ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಬಾಹರ್‌ ನಹೀ ಜಾನಾ ಹೈ

ಛತ್ತೀಸ್‌ಗಡ ರಾಜ್ಯದ ಬಿಲಾಸ್‌ಪುರದ ಪೊಲೀಸ್‌ ಅಧಿಕಾರಿ ಅಭಿನವ್‌ ಉಪಾಧ್ಯಾಯ ಅವರು ಕೋವಿಡ್‌–19 ವಿರುದ್ಧ ಜಾಗೃತಿ ಮೂಡಿಸಲು ಹಾಡಿರುವ ಹಾಡು ವೈರಲ್‌ ಆಗಿದೆ. ಶೋರ್‌ ಸಿನಿಮಾದ ಖ್ಯಾತ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ’ ಗೀತೆಯ ಧಾಟಿಯಲ್ಲಿ ಅವರು ಹಾಡು ರಚಿಸಿ, ಹಾಡಿದ್ದಾರೆ. ‘ಘರ್‌ ಮೆ ಹೀ ರೆಹನಾ ಹೈ. ಬಾಹರ್‌ ನಹೀ ಜಾನಾ ಹೈ. ಸ್ಯಾನಿಟೈಸರ್‌ ಲಗನಾ ಹೈ’ ಎಂಬ ಗೀತೆಯನ್ನು ಅವರು ಧ್ವನಿವರ್ಧಕದಲ್ಲಿ ಹಾಡುತ್ತಾ, ಜಾಗೃತಿ ಮೂಡಿಸುತ್ತಿದ್ದಾರೆ. ಉಪಾಧ್ಯಾಯ ಅವರ ಹಾಡನ್ನು ಮನೆಗಳ ಬಾಲ್ಕನಿಯಲ್ಲಿ ನಿಂತು ಜನ ಈ ಹಾಡು ಕೇಳಿಸಿಕೊಳ್ಳುತ್ತಿರುವ ದೃಶ್ಯವುಳ್ಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಧಿಕಾರದ ದರ್ಪ; ಜನರ ಕೋಪ

ನಿಷೇಧಾಜ್ಞೆ ಜಾರಿಯಾದ ಬಳಿಕ ಪೊಲೀಸರು ಲಾಠಿಗೆ ಹೆಚ್ಚು ಕೆಲಸ ನೀಡಿರುವುದಕ್ಕೆ ವಿಡಿಯೊಗಳೇ ಸಾಕ್ಷಿ ಹೇಳುತ್ತಿವೆ. ಅಗತ್ಯವಸ್ತು ತರಲು ಹೋಗುವ ಹಾಗೂ ಆಸ್ಪತ್ರೆಗೆ ತೆರಳುವ ವ್ಯಕ್ತಿಗಳನ್ನು ತಡೆದು ಸುಖಾಸುಮ್ಮನೇ ಲಾಠಿ ಬೀಸುತ್ತಿರುವ ಪೊಲೀಸರು ಅಧಿಕಾರ ದರ್ಪದಲ್ಲಿ ಮೆರೆಯುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ದೂರು.

ಬೆಂಗಳೂರಿನ ಸಂಜಯನಗರದಲ್ಲಿ ಇತ್ತೀಚೆಗೆ ಬೈಕ್ ಸವಾರರನ್ನು ತಡೆದು ಕಾನ್‌ಸ್ಟೆಬಲೊಬ್ಬರು ಮನಬಂದಂತೆ ಥಳಿಸಿದ್ದರು. ಆಕ್ರೋಶಗೊಂಡ ಸ್ಥಳೀಯರು ಕಾನ್‌ಸ್ಟೆಬಲ್ ವಿರುದ್ಧವೇ ತಿರುಗಿಬಿದ್ದು ಥಳಿಸಿದ್ದರು. ಈ ಪ್ರಕರಣದಲ್ಲಿ ಸವಾರನದ್ದೇ ತಪ್ಪೆಂದು ಬಿಂಬಿಸುವ ವಿಡಿಯೊವನ್ನು ಪೊಲೀಸರು ಬೇರೆ ಮೂಲಗಳ ಮೂಲಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಅಸಲಿ ವಿಡಿಯೊ ಬಯಲಾಗುತ್ತಿದ್ದಂತೆ ಪೊಲೀಸರೇ ತಲೆತಗ್ಗಿಸುವಂತಾಯಿತು. ಅಷ್ಟರಲ್ಲೇ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅಮಾಯಕರನ್ನು ರೌಡಿಗಳಂತೆ ಬಿಂಬಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಮೌನವಾದ ಪೊಲೀಸ್ ಅಧಿಕಾರಿ, ತಮ್ಮ ತಪ್ಪಿಗೆ ಪ್ರತಿಕ್ರಿಯೆ ನೀಡಲಾಗದೇ ನುಣಚಿಕೊಂಡರು. ಈ ಪ್ರಕರಣದ ತನಿಖೆ ಅರ್ಧಕ್ಕೆ ನಿಂತಿದೆ.

ನಂಜನಗೂಡಿನಲ್ಲಿ ಪೆಟ್ರೋಲ್ ನೀಡದಿದ್ದರೆ ಬಂಕ್‌ನ್ನೇ ಸುಡುವುದಾಗಿ ಪೊಲೀಸರೊಬ್ಬರು ಬೆದರಿಕೆ ಹಾಕಿದ್ದರು. ಬೆಳಗಾವಿಯಲ್ಲೂ ಆರೋಗ್ಯ ಇಲಾಖೆ ನೌಕರನನ್ನೇ ಪೊಲೀಸರು ಥಳಿಸಿದ್ದು, ಆ ನೌಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕಾರಿಪುರದಲ್ಲಿ ರೈತರ ಮೇಲೂ ಪೊಲೀಸರು ದರ್ಪ ತೋರಿದ್ದರು. ಉಡುಪಿ, ಗದಗ ಜಿಲ್ಲೆಯಲ್ಲೂ ಅಗತ್ಯವಸ್ತು ತರಲು ಹೋಗುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದರು.

ಲಾಠಿ ಬೀಸುತ್ತಿರುವ ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. ಅದರ ಮಧ್ಯೆಯೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಲಾಠಿ ಬಿಟ್ಟು ಕೆಲಸ ಮಾಡಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು