ಸೋಮವಾರ, ಆಗಸ್ಟ್ 2, 2021
26 °C
ಪಟ್ಟಭದ್ರರಿಗೆ ಇಲ್ಲ ಮಣೆ: ರಾಜ್ಯ ಸಮಿತಿ ನಿರ್ಣಯ ಅಲಕ್ಷ್ಯ

ರಾಜ್ಯಸಭೆ ಚುನಾವಣೆ | ಒಂದೇ ಬಾಣ: ಬಿಜೆಪಿ ತಲ್ಲಣ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ‘ಬಿಜೆಪಿ’ ಸರ್ಕಾರ ಒಂದು ವರ್ಷದ ಸಂಭ್ರಮಕ್ಕೆ ಕಾಲಿಡುವ ಹೊತ್ತಿನಲ್ಲೇ ಆ ಪಕ್ಷದ ವರಿಷ್ಠರು ಬಿಟ್ಟ ಒಂದೇ ಒಂದು ಬಾಣಕ್ಕೆ ಕರ್ನಾಟಕದ ‘ಕಮಲ ಕೂಟ’ವೇ ತಲ್ಲಣಿಸಿ ಹೋಗಿದೆ. 

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಇಟ್ಟ ಹೆಜ್ಜೆ ಒಂದೇ ಕಲ್ಲಿನಲ್ಲಿ ಹತ್ತಾರು ಹಕ್ಕಿಗಳಿಗೆ ಚುರುಕು ಮುಟ್ಟಿಸುವ, ಸಂದರ್ಭ ಬಂದರೆ ಹಕ್ಕಿಯನ್ನಲ್ಲ, ಹದ್ದನ್ನೇ ಹೊಡೆದುರುಳಿಸುತ್ತೇವೆ ಎಂಬ ಸಂದೇಶ ರವಾನಿಸುವ ನಡೆ ಎಂದೇ ಆ ಪಕ್ಷದ ‘ಗರ್ಭಗುಡಿ’ಯ ಪ್ರವರ ಗೊತ್ತಿದ್ದವರು ಅರ್ಥೈಸುತ್ತಿದ್ದಾರೆ.

ಪಾಡ್‍ಕಾಸ್ಟ್ ಮೂಲಕ ಕೇಳಿ:

 

ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುವ ಮೊದಲೇ ಶಾಸಕ ಉಮೇಶ ಕತ್ತಿ, ತಮ್ಮ ಸಹೋದರ ರಮೇಶ ಕತ್ತಿಗೆ ಟಿಕೆಟ್‌ ಬೇಕೆಂದು ಪಟ್ಟು ಹಿಡಿದು ಅದಕ್ಕೆ ಭಿನ್ನಮತದ ಸ್ವರೂಪವನ್ನೂ ಬಳಿದರು. ಪ್ರಭಾಕರ ಕೋರೆ ತಮಗೂ ಮತ್ತೊಂದು ಅವಧಿಗೆ ಅವಕಾಶ ಕೊಡಿ ಎಂದು ಲಾಬಿ ನಡೆಸಿದರು. ಉದ್ಯಮಿ ಪ್ರಕಾಶ ಶೆಟ್ಟಿ ಬೆನ್ನಿಗೆ ರಾಜ್ಯದ ಬಹುತೇಕ ನಾಯಕರು ನಿಂತಿದ್ದರು. ಭಿನ್ನಮತ ಬೆಳೆದು ಬೆಂಕಿಯಾಗುವ ಭಯದಲ್ಲಿದ್ದ ಯಡಿಯೂರಪ್ಪ, ಕತ್ತಿ ಆಸೆ ಈಡೇರಿಸುವ ಲೆಕ್ಕಾಚಾರದಲ್ಲಿದ್ದರು. ಆದರೆ, ಯಾರ ಆಸೆಯೂ ಈಡೇರಲಿಲ್ಲ.

ಹಿಂದೆಲ್ಲ ಪ್ರಮುಖರ ಸಮಿತಿಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ವರಿಷ್ಠರು ಒಪ್ಪಿಗೆ ಸೂಚಿಸುವ ಪದ್ಧತಿ ಇತ್ತು. ಏನಿಲ್ಲವೆಂದರೂ ಶೇ 50ರಷ್ಟು ತೀರ್ಮಾನಗಳಿಗಾದರೂ ಮಾನ್ಯತೆ ಕೊಡುತ್ತಿತ್ತು. ಇದೇ ಮೊದಲ ಬಾರಿಗೆ ಹೊಸ ಅವತಾರವೆತ್ತಿದಂತೆ ತೋರಿರುವ ಬಿಜೆಪಿ ವರಿಷ್ಠರು, ರಾಜ್ಯದ ನಿರ್ಣಯವನ್ನು ಸಂಪೂರ್ಣ ಅಲಕ್ಷಿಸಿ, ‘ತಮ್ಮ’ ನಿಲುವನ್ನು ಹೇರುವ ಯತ್ನ ಮಾಡಿದ್ದಾರೆ. ಇದರ ಹಿಂದೆ ಸಂತೋಷ ಅವರ ಪಾತ್ರವೇ ನಿರ್ಣಾಯಕವಾಗಿದ್ದು, ಯಡಿಯೂರಪ್ಪ ಬಲ ಕುಂದುತ್ತಿರುವ ಸೂಚನೆ ಇದಾಗಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ದಟ್ಟವಾಗಿದೆ.

 ‘ಮೇಲ್ಮನೆ’ ಚುನಾವಣೆಯಲ್ಲಿ ಪಟ್ಟಭದ್ರರಿಗೆ, ಪ್ರಭಾವಿಗಳಿಗೆ, ಲಾಬಿ ಮಾಡುವವರಿಗೆ, ಹಣವಂತರಿಗೆ ಮಣೆ ಹಾಕುವ ಹಳೆಯ ಚಾಳಿಯನ್ನು ಈ ಬಾರಿ ಬಿಟ್ಟಿದ್ದಾರೆ.

ಅದರ ಜತೆಗೆ ನಾನಾ ರೀತಿಯ ಎಚ್ಚರಿಕೆಗಳನ್ನು ರಾಜ್ಯ ಘಟಕದ ನಾನಾ ಸ್ತರದಲ್ಲಿರುವ ನಾಯಕರಿಗೆ, ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ಲಾಬಿ, ಹಣಕ್ಕೆ ಇನ್ನು ಮುಂದೆ ಮಣೆ ಹಾಕುವುದಿಲ್ಲ; ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಪ್ರಾತಿನಿಧ್ಯ ಕಲ್ಪಿಸಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ಇದರ ಹಿಂದೆ ಇದೆ. ಏಕೆಂದರೆ ಈಗ ರಾಜ್ಯಸಭೆಗೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿರುವವರು ಇಬ್ಬರೂ ಮೂರು ದಶಕಗಳಿಗೂ ಹೆಚ್ಚು ಕಾಲ ಸಂಘಟನೆಯಲ್ಲಿ ದುಡಿದವರು. ಅದಕ್ಕಿಂತ ಮುಖ್ಯವಾಗಿ ಆಸೆ–ಆಮಿಷಗಳಿಗೆ ಬಲಿಯಾಗದೇ  ಸಂಘಪರಿವಾರದ ಸಿದ್ಧಾಂತವನ್ನೇ ನೆಚ್ಚಿಕೊಂಡು ಬದುಕು ಸವೆಸಿದವರು. ಅಂತಹವರಿಗೆ ಪ್ರಾಧಾನ್ಯತೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸವಿತಾ/ ಹಡಪದ ಸಮಾಜಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿರಲಿಲ್ಲ. ಅಶೋಕ ಗಸ್ತಿ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ವಿಷಯದಲ್ಲಿ ಕಾಂಗ್ರೆಸ್‌ಗಿಂತ ತಾವೇ ಮುಂದು ಎಂದು ತೋರಿಸುವ ಉಮೇದು ಕೂಡ ಬಿಜೆಪಿ ನಾಯಕರಿಗೆ ಇದ್ದಂತಿದೆ. 

ತಮ್ಮನ ಟಿಕೆಟ್‌ಗಾಗಿ ಗುಂಪು ಕಟ್ಟಿಕೊಂಡು ರಾಜಕೀಯ ಮಾಡಿದ್ದ ಉಮೇಶ ಕತ್ತಿ, ಬಂಡಾಯದ ಸೂಚನೆಯನ್ನೂ ನೀಡಿದ್ದರು. ಇಂತಹ ಬಂಡಾಯಗಾರರಿಗೆ ಸೊಪ್ಪು ಹಾಕುವುದಿಲ್ಲ ಎಂಬ ಸೂಚನೆಯನ್ನೂ ಈ ಆಯ್ಕೆಯ ಮೂಲಕ ಮಾಡಿದ್ದಾರೆ. ಹಾಗೆಯೇ ಬಿಜೆಪಿಯಲ್ಲಿ ಯಾರೊಬ್ಬರೂ ಪ್ರಶ್ನಾತೀತ ನಾಯಕರಿಲ್ಲ. ಅಂತಹ ಸನ್ನಿವೇಶ ಸೃಷ್ಟಿಯಾದರೆ ಪರ್ಯಾಯ ನಾಯಕನನ್ನೂ ಪಕ್ಷ ಹುಟ್ಟು ಹಾಕಲಿದೆ ಎಂಬ ಸಂದೇಶವೂ ಇದರ ಹಿಂದೆ ಇದೆ. ರಾಜ್ಯ ಸರ್ಕಾರ ರಚನೆಯಾದ ಹೊತ್ತಿನಲ್ಲಿ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಗೆದ್ದಿದ್ದರೂ ಅವರನ್ನು ಬಿಟ್ಟು ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದೆವು. ಈಗಲೂ ತಮ್ಮನ್ನು ಬಿಟ್ಟರೆ ಲಿಂಗಾಯತರ ನಾಯಕರು ಬೇರೆ ಇಲ್ಲ ಎಂದು ಉಮೇಶ ಕತ್ತಿ, ಪ್ರಭಾಕರ ಕೋರೆ, ಬಸನಗೌಡ ಪಾಟೀಲ ಯತ್ನಾಳ ಬಿಂಬಿಸಲು ಹೊರಟರೆ ಈರಣ್ಣ ಕಡಾಡಿಯಂತಹ ಪಕ್ಷ ನಿಷ್ಠರನ್ನು ಮುನ್ನೆಲೆಗೆ ತಂದು ನಾಯಕರನ್ನಾಗಿ ರೂಪಿಸುತ್ತೇವೆ ಎಂಬ ಸಂದೇಶವನ್ನೂ ವರಿಷ್ಠರು ಈ ಮೂಲಕ ನೀಡಿದ್ದಾರೆ.

ವಿಧಾನಪರಿಷತ್ತಿಗೆ ಪ್ರವೇಶ ಪಡೆಯಲು ಲಾಬಿ ನಡೆಸುತ್ತಿರುವವರಿಗೆ ಕೂಡ ಇದೊಂದು ಎಚ್ಚರಿಕೆಯಾಗಿದೆ. ಸ್ಥಾನಗಳಿಗಾಗಿ ಲಾಬಿ ನಡೆಸುವುದು ಬಿಡಿ; ಸಂಘಟನೆಯಲ್ಲಿ ತೊಡಗಿಕೊಂಡರೇ ಸ್ಥಾನ–ಮಾನ ತನ್ನಿಂತಾನೇ ಹುಡುಕಿಕೊಂಡು ಬರುತ್ತದೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಪಕ್ಷದ ನಾಯಕರಿಗೆ ಮಾತ್ರವಲ್ಲದೇ, ಪರಿಷತ್ತು ಪ್ರವೇಶಿಸುವ ಆಕಾಂಕ್ಷಿಗಳಿಗೂ ವರಿಷ್ಠರು ಎಚ್ಚರಿಕೆಯ ಚಾಟಿಯನ್ನು ಈ ಮೂಲಕ ಬೀಸಿದ್ದಾರೆ.

ಗಸ್ತಿ, ಕಡಾಡಿ ಕಣಕ್ಕೆ
ಇದೇ 19 ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ಪ್ರಮುಖರ ಸಮಿತಿ ಕಳುಹಿಸಿದ್ದ ಐವರ ಹೆಸರನ್ನು ಗಣನೆಗೆ ತೆಗೆದುಕೊಳ್ಳದ ವರಿಷ್ಠರು ಹೊಸಮುಖಗಳನ್ನು ಆಯ್ಕೆ ಮಾಡಿರುವುದು ಪಕ್ಷದ ರಾಜ್ಯ ಘಟಕದ ನಾಯಕರ ಅಚ್ಚರಿಗೆ ಕಾರಣವಾಗಿದೆ.

ಈರಣ್ಣ ಅವರು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕಲ್ಲೋಳಿಯವರು. ಸಂಘ ಪರಿವಾರ ಹಿನ್ನೆಲೆಯವರಾಗಿದ್ದು, ಈಗ ಬಿಜೆಪಿಯ ಸಕ್ರಿಯ ಕಾರ್ಯಕರ್ತ.

ಅರಭಾವಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಮಂಡಳ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಮಿತಿ ಕಾರ್ಯದರ್ಶಿ ಸ್ಥಾನಗಳನ್ನು ನಿರ್ವಹಿಸಿದ್ದ ಅವರು, ಈಗ ಪಕ್ಷದ ಬೆಳಗಾವಿ ವಿಭಾಗದ ಉಸ್ತುವಾರಿ ಆಗಿದ್ದಾರೆ. 2008ರಲ್ಲಿ ಎನ್‌ಜಿಇಎಫ್‌ ಅಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 1994 ರ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 54 ವಯಸ್ಸಿನ ಈರಣ್ಣ, ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸೇರಿದವರು.

ಅಶೋಕ ಗಸ್ತಿ ಅವರು ರಾಯಚೂರಿನವರು. ವಕೀಲಿ ವೃತ್ತಿಯ ಇವರು 1989ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾದರು. 2009ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ,ನಂತರ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು.

ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 56 ವರ್ಷದ ಅಶೋಕ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪಕ್ಷದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಎಚ್‌ಡಿಡಿ ಇಂದು ನಾಮಪತ್ರ
ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಜನಪರ ಧ್ವನಿ ಎತ್ತುವೆ: ‘ರಾಜ್ಯಸಭೆಯಲ್ಲಿ ಹೈಕಮಾಂಡ್ ಅಪೇಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ. ಜನರ ಪರವಾಗಿ ಧ್ವನಿ ಎತ್ತುತ್ತೇನೆ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಚುನಾವಣೆ ನಡೆದರೆ ಎಲ್ಲ ಶಾಸಕರು ನನ್ನನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

**

ರಾಜ್ಯಸಭೆ ಚುನಾವಣೆಯ ಬಿಜೆಪಿ ಟಿಕೆಟ್‌ ಬಗ್ಗೆ ನನಗೆ ಸುಳಿವಿರಲಿಲ್ಲ. ನನ್ನ ಬಳಿ ಹಣವಿಲ್ಲ, ಪ್ರಭಾವಿಯೂ ಅಲ್ಲ. 3 ದಶಕಗಳಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ.


-ಅಶೋಕ ಗಸ್ತಿ, ಬಿಜೆಪಿ ಅಭ್ಯರ್ಥಿ

**

32 ವರ್ಷಗಳಿಂದಲೂ ಕಾರ್ಯಕರ್ತನಾಗಿ ಬಿಜೆಪಿ ಕಟ್ಟಲು ಶ್ರಮಿಸುತ್ತಿದ್ದೇನೆ. ನನ್ನ ಈ ಶ್ರಮವನ್ನು ಪರಿಗಣಿಸಿ, ರಾಜ್ಯಸಭೆಗೆ ಅವಕಾಶ ನೀಡಿದ್ದಾರೆ.


-ಈರಣ್ಣ ಕಡಾಡಿ, ಬಿಜೆಪಿ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು