ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ವಿವಾದದಿಂದ ಬಿಜೆಪಿಗೆ ರಾಜಕೀಯ ಲಾಭ: ಪ್ರಹ್ಲಾದ ಜೋಶಿ

4ನೇ ಬಾರಿಗೆ ಆಯ್ಕೆಯಾದರೆ ಗ್ರಾಮೀಣ ರಸ್ತೆ ಅಭಿವೃದ್ಧಿ, ಸಣ್ಣ ನೀರಾವರಿ, ಕುಡಿಯುವ ನೀರಿಗೆ ಒತ್ತು
Last Updated 25 ಏಪ್ರಿಲ್ 2019, 9:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಲ್ಲಿನ ಈದ್ಗಾ ಮೈದಾನ ವಿವಾದದಿಂದ ಬಿಜೆಪಿಗೆ ರಾಜಕೀಯ ಲಾಭ ಆಗಿರುವುದು ಸತ್ಯ’ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.

‘ಇದು ಭಾವನಾತ್ಮಕ ರಾಷ್ಟ್ರೀಯ ಹೋರಾಟ. ಇದರಿಂದ ರಾಜಕೀಯ ಲಾಭ ಪಡೆಯಬೇಕೆನ್ನುವ ಉದ್ದೇಶ ಕನಸು– ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ, ಕಾಂಗ್ರೆಸ್‌ನವರ ಮೂರ್ಖತನ ಮತ್ತು ದಡ್ಡತನದ ತೀರ್ಮಾನಗಳಿಂದ ರಾಜಕೀಯ ಲಾಭ ಆಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

‘ಈದ್ಗಾ ಉಳಿಸಬೇಕು ಎನ್ನುವ ಹೋರಾಟ 1971ರಲ್ಲೇ ಆರಂಭವಾಯಿತು. ಆಗ ನಾನು 9 ವರ್ಷದ ಹುಡುಗ. ಈಗಿನ ಪೀಳಿಗೆಗೆ ಅದು ಗೊತ್ತಿಲ್ಲ’ ಎಂದು ಅವರು ಹೇಳಿದರು.

‘ವರ್ಷಕ್ಕೆ ಎರಡು ಬಾರಿ ನಮಾಜ್‌ ಮಾಡಲು ಈ ಜಾಗ ಕೊಟ್ಟಿದ್ದು. ಇಲ್ಲಿ ಸಾರ್ವಜನಿಕ ಸಭೆ– ಸಮಾರಂಭ, ಜನಸಂಘ/ ಬಿಜೆಪಿ ಸಭೆಗಳೂ ನಡೆದಿವೆ. ಆದರೆ, ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾದಾಗ ಅದನ್ನು ಜನಸಂಘ ವಿರೋಧಿಸಿತ್ತು’ ಎಂದು ಹೇಳಿದರು.

‘ಒಮ್ಮೆ ಕಾಶ್ಮೀರ ಉಳಿಸಿ ಆಂದೋಲನ ಇತ್ತು. ಅದರ ಸಂಚಾಲಕ ನಾನೇ ಇದ್ದೆ. ಅದರ ಭಾಗವಾಗಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರಧ್ವಜ ಹಾರಿಸಲು ಪೊಲೀಸರು ಅನುಮತಿ ನೀಡಲಿಲ್ಲ. ಟ್ರಾಫಿಕ್‌ ಸಮಸ್ಯೆ ಆಗುತ್ತದೆಂದು ಹೇಳಿ ಈದ್ಗಾ ಮೈದಾನದಲ್ಲಿ ಮಾಡಿ ಎಂದರು. ನಾವು ಅದಕ್ಕೆ ಒಪ್ಪಿದ್ದೆವು. ಎರಡು ದಿನ ಬಿಟ್ಟು ಈದ್ಗಾ ಮೈದಾನ ಬೇಡ, ಚನ್ನಮ್ಮ ವೃತ್ತದಲ್ಲೇ ಬಾವುಟ ಹಾರಿಸಿ ಅಂದರು. ಅಷ್ಟೊತ್ತಿಗಾಗಲೇ ಕರಪತ್ರಗಳು ಮುದ್ರಣ ಆಗಿದ್ದ ಕಾರಣ ನಾವು ಅದಕ್ಕೆ ಒಪ್ಪಲಿಲ್ಲ. ಪೊಲೀಸರು ಬೆದರಿಸಿದರು. ಆದರೂ ಬಗ್ಗಲಿಲ್ಲ. ಅಲ್ಲಿಂದ ಹೋರಾಟ ಆರಂಭವಾಯಿತು’ ಎಂದು ಹೋರಾಟದ ಮೊದಲ ದಿನಗಳನ್ನು ಮೆಲುಕು ಹಾಕಿದರು.

ಸಂದರ್ಶನದ ಆಯ್ದ ಭಾಗ

* ಹದಿನೈದು ವರ್ಷಗಳಲ್ಲಿ ನಿಮ್ಮ ನಿರೀಕ್ಷೆ ಪ್ರಕಾರ ಕೆಲಸಗಳು ಆಗಿವೆಯೇ?

ಖಂಡಿತ ಆಗಿವೆ. ಐಐಟಿ, ಐಐಐಟಿ, ಕಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಘಟಕ, ಸ್ಮಾರ್ಟ್‌ ಸಿಟಿ, ಬಿಐಎಸ್‌ ಕಚೇರಿ, ಮನೆ ಮನೆಗೆ ನೈಸರ್ಗಿಕ ಅನಿಲ, ಸಿಆರ್‌ಎಫ್‌ ಅನುದಾನದಲ್ಲಿ ನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ್ದು...
ಹೀಗೆ ಹತ್ತಾರು ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ.

* ಮನೆ ಮನೆಗೆ ನೈಸರ್ಗಿಕ ಅನಿಲ ಯೋಜನೆ ಪೂರ್ಣ ಜಾರಿಯಾಗಲು ಇನ್ನೂ ಎಷ್ಟು ದಿನ ಬೇಕು?

ಅನಿಲ ಪೈಪ್‌ ಅಳವಡಿಸುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದಿರುವುದೇ ವಿಳಂಬಕ್ಕೆ ಕಾರಣ. ಉಣಕಲ್‌ನಲ್ಲಿ ಗ್ಯಾಸ್‌ ಸ್ಟೇಷನ್‌ ಮಾಡುವುದಕ್ಕೂ ಜಾಗ ಕೊಡಲಿಲ್ಲ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯ ಸರ್ಕಾರವೇ ಅಡ್ಡಿಯಾಯಿತು. ಇದರ ನಡುವೆಯೂ ಸಾವಿರ ಮನೆಗಳಿಗೆ ಅನಿಲ ಸಂಪರ್ಕ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆಯಲಿದೆ.

* ಮಾಡಲು ಸಾಧ್ಯವಾಗಲಿಲ್ಲ ಎಂದೆನಿಸಿದ್ದು ಏನಾದರೂ ಇದೆಯೇ?

ಹುಬ್ಬಳ್ಳಿ ಚನ್ನಮ್ಮ ಸರ್ಕಲ್‌ ಮತ್ತು ಧಾರವಾಡದ ಜ್ಯೂಬಿಲಿ ಸರ್ಕಲ್‌ನಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಿಸಬೇಕೆನ್ನುವ ನನ್ನ ಕನಸು ಇನ್ನೂ ನನಸಾಗಿಲ್ಲ. ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ಸಮಗ್ರ ಯೋಜನಾ ವರದಿ ಕೊಡುವಂತೆ 2016ರಲ್ಲೇ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಆದರೆ, ವರದಿ ಕೊಟ್ಟಿದ್ದು 2018ರ ಡಿಸೆಂಬರ್‌ನಲ್ಲಿ! ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ.

* ಮತ್ತೊಮ್ಮೆ ನೀವು ಸಂಸದರಾದರೆ ನಿಮ್ಮ ಆಯ್ಕೆಗಳು ಏನು?

ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲ ಸುಧಾರಿಸುವುದಕ್ಕೆ ನನ್ನ ಮೊದಲ ಆದ್ಯತೆ. ಸಣ್ಣ ನೀರಾವರಿಗೆ ಒತ್ತು ಕೊಟ್ಟು, ಅಲ್ಲಲ್ಲಿ ಬ್ಯಾರೇಜ್‌ ನಿರ್ಮಿಸುವುದು; ಮಳೆಗಾಲದ ನಂತರ ಕನಿಷ್ಠ 4–5 ತಿಂಗಳು ನೀರಿಗೆ ಬರ ಇಲ್ಲದಂತೆ ಮಾಡುವುದು.

* ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲವಲ್ಲ. ಜನರಿಗೆ ಏನು ಹೇಳುತ್ತೀರಿ?

ನಿಜ, ಅಧಿಕಾರಿಗಳ ಎಡವಟ್ಟುಗಳಿಂದಾಗಿ ಈ ಸಮಸ್ಯೆ ಬಗೆಹರಿಸಲು ಆಗಿಲ್ಲ. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ನಿರಂತರ ನೀರು ಯೋಜನೆಗೆ ಚಾಲನೆ ನೀಡಿದರು. ಆದರೆ, ಅದು ಇವತ್ತಿಗೂ ಪೂರ್ಣ ಅನುಷ್ಠಾನ ಆಗಿಲ್ಲ. ಒಟ್ಟಾರೆ ನೀರಿನ ಸಮಸ್ಯೆ ನೀಗಿಸಲು ₹ 1,200 ಕೋಟಿ ವೆಚ್ಚದ ಯೋಜನೆ ಸಿದ್ಧ ಆಗಿದೆ. ಕೇಂದ್ರ– ರಾಜ್ಯ ಸರ್ಕಾರಗಳ ವೆಚ್ಚ ಹಂಚಿಕೆ ಒಪ್ಪಂದದ ಪ್ರಕಾರ ನಡೆಯಲಿದೆ.

* ನಿಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ ಕುಲಕರ್ಣಿಗೆ ಏಕೆ ಮತ ಹಾಕಬಾರದು?

ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಏನೂ ಮಾಡಲಿಲ್ಲ. ಪಾಲಿಕೆಯ ಪಿಂಚಣಿ ಹಣ ಕೊಡಿಸಲಿಲ್ಲ. ಕುಡಿಯುವ ನೀರು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಯಾವುದನ್ನು ಮಾಡಿದ್ದಕ್ಕೆ ಅವರಿಗೆ ವೋಟ್‌ ಹಾಕಬೇಕು ನೀವೇ ಹೇಳಿ? ವೋಟ್ ಕೇಳಲು ಸಭ್ಯತೆ, ಸಂಸ್ಕೃತಿ ಕೂಡ ಮುಖ್ಯ ಅಲ್ಲವೇ?

* ಹಾಗಾದರೆ, ಅವರಿಗೆ ಸಭ್ಯತೆ, ಸಂಸ್ಕೃತಿ ಇಲ್ಲ ಎಂದರ್ಥವೇ?

ಆ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ಒಬ್ಬ ಅಭ್ಯರ್ಥಿಗೆ ಇವೆರಡೂ ಇರಬೇಕು ಎಂದಷ್ಟೇ ಹೇಳುವವ ನಾನು.

* ನೀವೂ ಏನೂ ಮಾಡಿಲ್ಲ ಎಂದು ವಿನಯ್‌ ಕುಲಕರ್ಣಿ ಹೇಳುತ್ತಿದ್ದಾರಲ್ಲ. ಇದಕ್ಕೆ ಏನಂತೀರಾ?

ನಾನು ಏನು ಮಾಡಿದ್ದೇನೆ ಎಂದು ಕೇಳುವವರಿಗೆ ನನ್ನ ಕೆಲಸಗಳೇ ಉತ್ತರ ನೀಡುತ್ತವೆ. ಮೇ 23ರವರೆಗೂ ಕಾಯಲಿ.

* ಮಹದಾಯಿ ವಿಚಾರದಲ್ಲಿ ರಾಜಕೀಯ ಮೇಲಾಟಗಳೇ ಹೆಚ್ಚಾಯಿತು ಅನಿಸುವುದಿಲ್ಲವೇ?

ನಿಜ. ಈ ವಿಷಯದಲ್ಲಿ ಆರೋಪ– ಪ್ರತ್ಯಾರೋಪ ನಡೆಯುತ್ತಿದೆ. ಭಾವನಾತ್ಮಕವಾದ ವಿವಾದಗಳನ್ನು ಬಗೆಹರಿಸುವುದು ಕಷ್ಟ. ಮೋದಿ ಬಗೆಹರಿಸಬಹುದಿತ್ತು ಎನ್ನುವವರು ಮನಮೋಹನ್‌ ಸಿಂಗ್‌ ಏಕೆ ಬಗೆಹರಿಸಲಿಲ್ಲ ಎಂಬುದಕ್ಕೂ ಉತ್ತರ ಕೊಡಬೇಕು. ಅನುಕೂಲಕ್ಕೆ ತಕ್ಕಂತೆ ವಿಶ್ಲೇಷಣೆ ನಡೆಯುತ್ತಿದೆ.

* ನಿಮ್ಮ ಕುಟುಂಬದ ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆಯೇ?

ಇಲ್ಲ, ನನ್ನ ಒಬ್ಬ ಮಗಳು ಕಾಲೇಜಿಗೆ ಹೋಗುತ್ತಾಳೆ, ಮತ್ತೊಬ್ಬಳು ಕೆಲಸಕ್ಕೆ ಹೋಗುತ್ತಾಳೆ. ಪತ್ನಿ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾಳೆ. ಎಂದಿನಂತೆ ಬೆಳಿಗ್ಗೆ 6.30ಕ್ಕೆ ಎದ್ದು 10–15 ನಿಮಿಷ ಯೋಗ, ನಂತರ ಪ್ರಚಾರ. ರಾತ್ರಿ 10ಕ್ಕೆ ಪ್ರಚಾರ ಮುಗಿದ ಮೇಲೆ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚೆ. ರಾತ್ರಿ 1.30ಕ್ಕೆ ಮಲಗುತ್ತೇನೆ.

‘ಪ್ರಜಾವಾಣಿ’ ಬಗ್ಗೆ ಮೆಚ್ಚುಗೆ

‘ಕ್ರೀಡಾ ಕ್ಷೇತ್ರದಲ್ಲಿ ಅವಳಿನಗರದಲ್ಲಿ ಏನೆಲ್ಲ ಆಗಬೇಕು ಎಂಬುದರ ಬಗ್ಗೆ ಮೊದಲು ಬೆಳಕು ಚೆಲ್ಲಿದ್ದೇ ‘ಪ್ರಜಾವಾಣಿ’. ನಿಜಕ್ಕೂ ನಾನು ಧನ್ಯವಾದ ಹೇಳಬೇಕು. ಇದರ ಫಲವಾಗಿ ಒಂದೇ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಲು ಸಾಧ್ಯವಾಯಿತು. ಈ ಕೆಲಸಗಳು ಪೂರ್ಣ ಆಗಲು ಇನ್ನೂ ₹ 4–5 ಕೋಟಿ ಬೇಕಾಗಿದೆ. ಅದನ್ನು ನಾನೇ ಕೊಡಿಸುತ್ತೇನೆ. ಇದರ ಕ್ರೆಡಿಟ್‌ ಪ್ರಜಾವಾಣಿಗೇ ಸಲ್ಲಬೇಕು’ ಎಂದು ಪ್ರಹ್ಲಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT