ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕಪುರದ ಬಂಡೆ’ ಡಿ.ಕೆ.ಶಿವಕುಮಾರ್‌ಗೆ ಈಗ ಸಂಕಷ್ಟದ ಕಾಲ!

ಕಾಂಗ್ರೆಸ್‌ ಮುಖಂಡ ಶಿವಕುಮಾರ್‌ ಮೇಲೆ ಐ.ಟಿ. ಇ.ಡಿ. ಕೆಂಗಣ್ಣು
Last Updated 6 ಸೆಪ್ಟೆಂಬರ್ 2019, 12:19 IST
ಅಕ್ಷರ ಗಾತ್ರ

ರಾಮನಗರ: ಡಿ.ಕೆ. ಶಿವಕುಮಾರ್‌ ಎಂಬ ಹೆಸರು ಸದ್ಯದ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಮತ್ತು ಹಣ ಸಂಗ್ರಹದ ಆರೋಪದ ಮೇಲೆ ಆದಾಯ ತೆರಿಗೆ ಮತ್ತು ಇ.ಡಿ. ಅಧಿಕಾರಿಗಳಿಂದ ತನಿಖೆ ಎದುರಿಸುತ್ತಿರುವ ಅವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಲ್ಲಿ ಒಬ್ಬರು.

‘ಕನಕಪುರ ಬಂಡೆ’ ಎಂದೇ ಖ್ಯಾತಿಯಾದ ಶಿವಕುಮಾರ್ ಛಲದ ರಾಜಕಾರಣಕ್ಕೆ ಹೆಸರಾದವರು. ಎರಡು ವರ್ಷದ ಹಿಂದಷ್ಟೇ ಗುಜರಾತ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಹೆದರಿ ಕರ್ನಾಟಕಕ್ಕೆ ಬಂದ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಆತಿಥ್ಯದ ವ್ಯವಸ್ಥೆ ಮಾಡಿ ಪಕ್ಷದ ಹೈಕಮಾಂಡ್‌ ವಿಶ್ವಾಸ ಗಳಿಸಿದ್ದು ಇದೇ ಶಿವಕುಮಾರ್‌. ಅದೇ ಅವರಿಗೆ ಉರುಳಾಗಿದ್ದು, ಬಿಜೆಪಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿ ರಾಜಕೀಯ ಬಲಿಪಶುವೂ ಆಗಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ಆರೋಪ.

ಕಳೆದ ನಾಲ್ಕೈದು ದಶಕಗಳಿಂದ ರಾಜಕಾರಣದಲ್ಲಿ ಇರುವ ಶಿವಕುಮಾರ್ ಹಳೇ ಮೈಸೂರು ಭಾಗದಲ್ಲಿ ಚಿರಪರಿಚಿತ ಹೆಸರು. ಆರಂಭದಿಂದಲೂ ಕಾಂಗ್ರೆಸ್‌ನಲ್ಲೇ ನಿಷ್ಠೆ ಪ್ರದರ್ಶಿಸುತ್ತಾ ಬಂದಿರುವ ಅವರು ಸದ್ಯ ಕೆಪಿಸಿಸಿಯ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯೂ ಹೌದು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಏಳನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು.

ದೇವರಾಜ ಅರಸು ಕಾಲದಲ್ಲಿ ರಾಜಕಾರಣ ಪ್ರವೇಶ ಮಾಡಿದ ಶಿವಕುಮಾರ್ ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯದ ಇನ್ನಿಂಗ್ಸ್‌ ಆರಂಭಿಸಿದವರು. ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಅವರಿಗೆ ಸ್ಪರ್ಧಿಯಾಗಿದ್ದು ಜನತಾ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ. ಆಗ ಅವರಿಗೆ ಕೇವಲ 23 ವರ್ಷ.

ಮೊದಲ ವಿಧಾನಸಭೆ ಚುನಾವಣೆಯಲ್ಲಿ ಗೌಡರ ವಿರುದ್ಧ ಸೋಲು ಕಂಡ ಶಿವಕುಮಾರ್ 1987ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದಿದ್ದ ಶಿವಕುಮಾರ್ ಗೆಲುವಿನ ನಗೆ ಬೀರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ತಿರುಗಿ ನೋಡಿದ್ದಿಲ್ಲ.

1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ನಿಂದ ವಂಚಿತರಾಗಿದ್ದ ಶಿವಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪ ಅಂತರದ ಗೆಲುವು ಕಂಡರು. 1999ರ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಣಿಸುವ ಮೂಲಕ ಅಪ್ಪನ ವಿರುದ್ಧ ಕಂಡಿದ್ದ ಸೋಲಿಗೆ ಮಗನ ವಿರುದ್ಧ ಸೇಡು ತೀರಿಸಿಕೊಂಡರು. 2004ರಲ್ಲಿ ಮತ್ತೆ ಜಯ ಅವರದ್ದಾಯಿತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರಕ್ಕೆ ಬಂದ ಅವರು ಜಯದ ಓಟ ಮುಂದುವರಿಸಿದರು. 2013ರ ಚುನಾವಣೆಯಲ್ಲಿ ಪಿಜಿಆರ್ ಸಿಂಧ್ಯಾ ಅವರನ್ನೂ ಮಣಿಸಿದ್ದರು.

ಮಂತ್ರಿ ಪದವಿ: ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬಂಧೀಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಶಿವಕುಮಾರ್‌ರದ್ದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

1985ರಿಂದ 2001ರವರೆಗೆ ಕೆಪಿಸಿಸಿ ಕಾರ್ಯದರ್ಶಿ, 2008ರಿಂದ 2010ರವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದ ಅವರು ಕಳೆದ ಚುನಾವಣೆಯಲ್ಲಿ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

2018ರ ವಿಧಾನಸಭೆ ಚುನಾವಣೆ ಶಿವಕುಮಾರ್ ಬದುಕಿನಲ್ಲಿ ಮತ್ತೊಂದು ತಿರುವು ನೀಡಿದ ಸನ್ನಿವೇಶ. ಕಳೆದ ನಾಲ್ಕು ದಶಕಗಳಲ್ಲಿ ದೇವೇಗೌಡರ ಕುಟುಂಬದ ನಡುವಿನ ರಾಜಕೀಯ ವೈರತ್ವ ಬದಿಗಿಟ್ಟ ಅವರು ಹೈಕಮಾಂಡ್ ಸೂಚನೆಯಂತೆ ಜೆಡಿಎಸ್ ಜೊತೆ ಸೇರಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದಕ್ಕೆ ಇದ್ದ ಅಡೆತಡೆಗಳನ್ನೂ ನಿವಾರಿಸಿ ‘ಟ್ರಬಲ್‌ ಶೂಟರ್‌’ ಎನಿಸಿದರು. ಒಂದೂವರೆ ವರ್ಷ ಕಾಲ ಸರ್ಕಾರ ನಡೆಯಿತು. ಅದು ಬಿದ್ದುಹೋಗುವ ಸನ್ನಿವೇಶದಲ್ಲೂ ಶಿವಕುಮಾರ್ ಮುಂಬೈನಲ್ಲಿ ಅತೃಪ್ತ ಶಾಸಕರ ಮನವೊಲಿಕೆಗೆ ಬೀದಿಯಲ್ಲಿ ನಿಂತು ಸುದ್ದಿಯಾದರು.

ಅಕ್ರಮ ಗಣಿಗಾರಿಕೆಯ ಕುಣಿಕೆ: ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ ಮೇಲೆ ಇದೆ. ಇದೇ ಅವರಿಂದಾಗಿ ಅವರು ಸಾಕಷ್ಟು ಅವಕಾಶಗಳಿಂದ ವಂಚಿತರಾಗಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಿದ್ದು, ತಮ್ಮ ಮೇಲಿನ ಆರೋಪಗಳ ಕಾರಣ ಶಿವಕುಮಾರ್ ಸಚಿವ ಹುದ್ದೆಯಿಂದ ವಂಚಿತರಾಗಿದ್ದರು. ಒಂದಿಷ್ಟು ತಿಂಗಳು ಕಾಯಿಸಿ ಅವರಿಗೆ ಇಂಧನ ಖಾತೆ ನೀಡಲಾಗಿತ್ತು. ಕಳೆದೊಂದು ವರ್ಷದಿಂದಲೂ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಗಣಿಗಾರಿಕೆಯ ಮಸಿ ಅವರಿಗೆ ಉನ್ನತ ಹುದ್ದೆ ನೀಡಲು ತೊಡರುಗಾಲಾಗಿದೆ ಎಂದು ಹೇಳಲಾಗುತ್ತದೆ.

ಹುಬ್ಬೇರಿಸುವಷ್ಟು ಆಸ್ತಿ: ಕಳೆದೊಂದು ದಶಕದಲ್ಲಿ ಡಿ,ಕೆ. ಶಿವಕುಮಾರ್‌ ಮತ್ತವರ ಕುಟುಂಬದ ಆಸ್ತಿಯು ನೂರು ಪಟ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಅವರ ಕೊರಳಿಗೆ ಕುಣಿಕೆ ಬಿಗಿಯತೊಡಗಿದೆ.

2018ರ ವಿಧಾನಸಭೆ ಚುನಾವಣೆ ಸಂದರ್ಭ ಘೋಷಿಸಿಕೊಂಡಂತೆ ಡಿಕೆಶಿಯ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ ₹840 ಕೋಟಿ. ಇದರಲ್ಲಿ ಅವರ ವೈಯಕ್ತಿಕ ಆಸ್ತಿ ಮೌಲ್ಯವೇ ₹619.8 ಕೋಟಿಯಷ್ಟಿದೆ. 2014ರ ಚುನಾವಣೆ ಸಂದರ್ಭ ಅವರ ಆಸ್ತಿ ಮೌಲ್ಯ ₹251 ಕೋಟಿಯಷ್ಟಿತ್ತು. ಇದಲ್ಲದೆ ಅವರ ಸಹೋದರ ಡಿ.ಕೆ. ಸುರೇಶ್‌ ಕಳೆದ ಲೋಕಸಭೆ ಚುನಾವಣೆ ಸಂದರ್ಭ ₹338 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.

ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಪುತ್ರ ಶಿವಕುಮಾರ್ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. 2004ರ ಚುನಾವಣೆಯಲ್ಲಿ ಘೋಷಿಸಿಕೊಂಡಂತೆ ಅವರ ಆಸ್ತಿ ಮೌಲ್ಯ ₹7 ಕೋಟಿ. ಕೇವಲ ಒಂದೂವರೆ ದಶಕದಲ್ಲಿಯೇ ಅದು ನೂರು ಪಟ್ಟು ಹೆಚ್ಚಾಗಿದೆ. ಕುಟುಂಬದಿಂದ ಬಂದ ಕೃಷಿ ಜಮೀನಿನಲ್ಲಿನ ಆದಾಯದ ಜೊತೆಗೆ ಉದ್ದಿಮೆ, ಶಿಕ್ಷಣ ಸಂಸ್ಥೆ, ರಿಯಲ್‌ ಎಸ್ಟೇಟ್‌ ಚಟುವಟಿಕೆಗಳ ಮೂಲಕ ಆದಾಯ ದ್ವಿಗುಣಗೊಂಡಿರುವುದಾಗಿ ಅವರು ಲೆಕ್ಕ ನೀಡಿದ್ದಾರೆ.

ಡಿ.ಕೆ. ಶಿವಕುಮಾರ್‌ ಕುಟುಂಬದ ಆಸ್ತಿ ಮೌಲ್ಯ (₹ಗಳಲ್ಲಿ)

ಆಸ್ತಿ ಮಾದರಿ 2013 2018
ಚರಾಸ್ತಿ 60.34 ಕೋಟಿ 101.31 ಕೋಟಿ
ಕೃಷಿ ಜಮೀನು 1.14ಕೋಟಿ 9.04 ಕೋಟಿ
ವಸತಿ ಕಟ್ಟಡಗಳು 14.02 ಕೋಟಿ 103.29 ಕೋಟಿ
ಕೃಷಿಯೇತರ ಜಮೀನು 149.65 ಕೋಟಿ 511.25 ಕೋಟಿ
ವಾಣಿಜ್ಯ ಕಟ್ಟಡಗಳು 26.24 ಕೋಟಿ 37.27 ಕೋಟಿ
ಸಾಲ 105.23 ಕೋಟಿ 228.27 ಕೋಟಿ

ಡಿ.ಕೆ.ಶಿವಕುಮಾರ್ ಸೋಲು ಗೆಲುವಿನಹಾದಿ

ವರ್ಷ ಕ್ಷೇತ್ರ ಪಕ್ಷ ಫಲಿತಾಂಶ ಮತಗಳ ಅಂತರ
1985 ಸಾತನೂರು ಕಾಂಗ್ರೆಸ್‌ ಸೋಲು 29,809
1989 ಸಾತನೂರು ಕಾಂಗ್ರೆಸ್‌ ಗೆಲುವು 13,650
1994 ಸಾತನೂರು ಸ್ವತಂತ್ರ ಗೆಲುವು 568
1999 ಸಾತನೂರು ಕಾಂಗ್ರೆಸ್ ಗೆಲುವು 14,387
2004 ಸಾತನೂರು ಕಾಂಗ್ರೆಸ್ ಗೆಲುವು 13,928
2008 ಕನಕಪುರ ಕಾಂಗ್ರೆಸ್‌ ಗೆಲುವು 7,179
2013 ಕನಕಪುರ ಕಾಂಗ್ರೆಸ್ ಗೆಲುವು 31,424
2018 ಕನಕಪುರ ಕಾಂಗ್ರೆಸ್ ಗೆಲುವು 79,909

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT