ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆಗೆ ಭಾರಿ ವಿರೋಧ: ಎಲ್ಲೆಲ್ಲೂ ಕಂಗೊಳಿಸಿದ ರಾಷ್ಟ್ರಧ್ವಜ

ನರೇಂದ್ರ ಮೋದಿ–ಅಮಿತ್‌ ಶಾ ವಿರುದ್ಧ ಧಿಕ್ಕಾರ
Last Updated 24 ಡಿಸೆಂಬರ್ 2019, 0:58 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ರಾಜ್ಯದ ಕೆಲವು ಕಡೆಗಳಲ್ಲಿ ಸೋಮವಾರವೂ ಬಂದ್‌ ಹಾಗೂ ಪ್ರತಿಭಟನೆಗಳು ಮುಂದುವರಿದಿದ್ದು, ರಾಜಧಾನಿಯಲ್ಲಿ 35ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಕೋಮುಸೌಹಾರ್ದ ಸಭೆಗೆ ಭಾರಿ ಬೆಂಬಲ ವ್ಯಕ್ತವಾಯಿತು.

ಮಿಲ್ಲರ್ಸ್‌ ರಸ್ತೆಯಲ್ಲಿರುವ ಖುದ್ದೂಸ್‌ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆದ ಸಭೆಗೆ ಬೆಂಗಳೂರು ನಗರ ಮೂಲೆ ಮೂಲೆಗಳಿಂದ ಭಾರಿ
ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಹಾಗೂ 20ಕ್ಕೂ ಹೆಚ್ಚು ಮುಸ್ಲಿಂ ಧರ್ಮಗುರುಗಳು ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

‘ಹಿಂದೂಸ್ತಾನ್ ಹಮಾರ’, ‘ಐ ಆ್ಯಮ್ ಇಂಡಿಯನ್’ ಎಂಬ ಘೋಷಣೆ ಕೂಗಿದ ಜನರು, ‘ಮನುಕುಲಕ್ಕಾಗಿ ಹೋರಾಟ ಮಾಡಿದ ಮೈಸೂರು ಹುಲಿ ಟಿಪ್ಪುಸುಲ್ತಾನ್‌ ಹುಟ್ಟಿದ ಭೂಮಿ ಇದು. ಇಲ್ಲಿಯೇ ಹುಟ್ಟಿ ಬೆಳೆದ ನಾವು ಎಲ್ಲಿಗೂ ಹೋಗುವುದಿಲ್ಲ. ಸಂವಿಧಾನ ಉಳಿವಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ’ ಎಂದು ಪ್ರತಿಪಾದಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು.

ರಾಷ್ಟ್ರಧ್ವಜ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳು ಪ್ರತಿಭಟನಕಾರರ ಕೈಯಲ್ಲಿ ರಾರಾಜಿಸಿದವು. ಬೆಂಗಳೂರಿನ ಬೀದಿಯ ತುಂಬೆಲ್ಲ ತ್ರಿವರ್ಣ ಧ್ವಜದ ರಂಗು ಕಂಗೊಳಿಸಿತು.

ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಚಾಮರಾಜನಗರ, ಬಳ್ಳಾರಿ, ಬೀದರ್, ಬಸವಕಲ್ಯಾಣ ಹಾಗೂ ಹುಮನಾಬಾದ್‌, ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಸೇಡಂ ಮತ್ತು ಜೇವರ್ಗಿ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಭಟ್ಕಳ, ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಚಿಂಚೋಳಿಯಲ್ಲಿ ಬಂದ್ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT