ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿದ್ಯಾರ್ಥಿನಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ

ಬೀದಿಗಿಳಿದ ವಿದ್ಯಾರ್ಥಿಗಳು
Last Updated 19 ಏಪ್ರಿಲ್ 2019, 11:31 IST
ಅಕ್ಷರ ಗಾತ್ರ

ರಾಯಚೂರು/ ಬೆಂಗಳೂರು:ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ (23) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಂತ್ರಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಟ್ವೀಟ್‌ಗಳನ್ನು ಮಾಡಿದ್ದಾರೆ.

ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣ ಅತೀವ ನೋವು ತಂದಿದೆ. ಈ ಪ್ರಕರಣದ ಕುರಿತು ರಾಯಚೂರು ಎಸ್ ಪಿ ಯವರಿಂದ ಮಾಹಿತಿ ಪಡೆದಿದ್ದು ಒಬ್ಬನನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ ಎಂದುಟ್ವೀಟ್‌ ಮಾಡಿದ್ದರು. ನಂತರ ಮತ್ತೊಂದು ಟ್ವೀಟ್‌ ಮಾಡಿ ’‘ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಆಕೆಯ ಹೆತ್ತವರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ಕೊಡಲಿ. ಹೆಣ್ಣುಮಕ್ಕಳ ಮೇಲಿನ ಇಂತಹ ಪೈಶಾಚಿಕ ಕೃತ್ಯ ಖಂಡನೀಯ ಎಂದು ಟ್ವೀಟ್ ಮಾಡಿದ್ದರಾರೆ.

ವಿದ್ಯಾರ್ಥಿನಿ ಸಾವಿನ ಪ್ರಕರಣ ಸಂಬಂಧ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ರಾಜ್ಯವ್ಯಾಪಿ ಗಮನ ಸೆಳೆದಿರುವ ಈ ಪ್ರಕರಣ ಇದೀಗ #Justice_For_Madhu ಹ್ಯಾಷ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸದ್ದು ಮಾಡುತ್ತಿದೆ.

ನಗರದ ಮಾಣಿಕ್‌ಪ್ರಭು ದೇವಸ್ಥಾನದ ಹಿಂಭಾಗದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮಧು ಪತ್ತಾರ ಮೃತದೇಹಸೋಮವಾರ ಪತ್ತೆಯಾಗಿತ್ತು. ‘ಪರೀಕ್ಷೆಯಲ್ಲಿ ಪದೇಪದೇ ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದರ್ಶನ ಯಾದವ್ ಎಂಬುವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಅಗತ್ಯ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ.ಶನಿವಾರ ಬೆಳಿಗ್ಗೆ ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿ ಮನೆಗೆ ವಾಪಸ್‌ ಬಂದಿರಲಿಲ್ಲ. ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ದೊರಕಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ವಿದ್ಯಾರ್ಥಿಗಳು ತಹಶೀಲ್ದಾರ್‌ಗೆ ಸಲ್ಲಿಸಿದ್ದಾರೆ. ‘ಈ ಪ್ರಕರಣದಿಂದ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ತಪ್ಪಿತಸ್ಥರನ್ನು ಉಗ್ರ ಶಿಕ್ಷೆಗೆ ಗುರಿಪಡಿಸುವ ಮೂಲಕ ಇಂತಹ ಅನಾಹುತಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ದಯೆ– ದಾಕ್ಷಿಣ್ಯ ಇಲ್ಲದೇ ಶಿಕ್ಷೆ ನೀಡಬೇಕು’ಎಂದು ರಾಯಚೂರಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಮೃತ ದೇಹವನ್ನು ಸುಟ್ಟು ನೇಣಿಗೇರಿಸಿದ ಅನುಮಾನ ಮೂಡಿದ್ದು, ನಾಗರಿಕರಲ್ಲಿ ಆತಂಕ ಮೂಡಿದೆ. ಪಾಲಕರು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದರಿಂದ ಕೊಲೆ ಮಾಡಲಾಗಿದೆಯೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬುದು ತಿಳಿಯಲು ತನಿಖೆ ಅಗತ್ಯವಾಗಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ನಗರದ ತೀನ್ ಕಂದಿಲ್‌ ವೃತ್ತದಲ್ಲಿ ಬುಧವಾರ ರಾತ್ರಿ ನೂರಾರು ವಿದ್ಯಾರ್ಥಿಗಳು ಮೇಣದ ದೀಪಗಳಿಟ್ಟು ಶ್ರದ್ಧಾಂಜಲಿ ಸಲ್ಲಿಸಿ, ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೆ

ರಾಯಚೂರಿನಲ್ಲಿ ಯುವತಿಯ ಅನುಮಾಸ್ಪದ ಸಾವಿನ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸದ್ದು ಮಾಡಿದೆ. #Justice_For_Madhu ಹ್ಯಾಷ್‌ಟ್ಯಾಗ್‌ ಜೊತೆಗೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ‘ಚುನಾವಣೆಯ ಸುದ್ದಿಗಳಲ್ಲಿ ಈ ಸುದ್ದಿ ಮುಚ್ಚಿ ಹೋಗಬಾರದು’ ಎಂದು ಹೇಳಿರುವ ಹಲವರು, ‘ಇದುಇಡೀ ಭಾರತವೇ ತಲೆ ತಗ್ಗಿಸುವಂತ ಹೇಯ ಕೃತ್ಯ ರಾಯಚೂರು ನಗರದಲ್ಲಿ ನಡೆದಿರುವುದು ನಿಜಕ್ಕೂ ಅತ್ಯಂತ ಖೇದಕರ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಂದು ಗೌಡ ಎನ್ನುವವರು ‘ಈ ದೇಶದಲ್ಲಿ ಮತ್ತೆ ಹುಟ್ಟಿಬರಬೇಡ ಮಗಳೇ’ ಎಂದು ಆಕ್ರೋಶದ ಬರಹ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT