ಮಂಗಳವಾರ, ಮೇ 26, 2020
27 °C

ರಾಜ್ಯದ ಹಲವೆಡೆ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರಿನಲ್ಲಿ ಸಿಡಿಲು ಬಡಿದು ಕುರಿಗಾಹಿ ಗುಂಡಪ್ಪ ಶಂಕ್ರಪ್ಪ ಚಬನೂರ(60) ಮೃತಪಟ್ಟರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಬಿರುಸಿನ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ ಹಾಗೂ ಇಳಕಲ್‌ನಲ್ಲಿ ಮಳೆ ಬಿದ್ದಿದೆ.

ಆಲಿಕಲ್ಲು ಮಳೆ: ಬಳ್ಳಾರಿಯ ಸಂಡೂರು ತಾಲ್ಲೂಕಿನ ಹಲವೆಡೆ ಗುಡುಗು ಸಹಿತ ಆಲಿಕಲ್ಲಿನ ಮಳೆ ಸುರಿದರೆ, ಬೆಳಗಾವಿಯಲ್ಲಿ ಬೆಳಗಿನಜಾವ ಒಂದೂವರೆ ತಾಸಿಗಿಂತಲೂ ಹೆಚ್ಚು ಮಳೆ ಸುರಿಯಿತು. ಗದಗ ಜಿಲ್ಲೆಯ ನರೇಗಲ್‌, ಡಂಬಳದಲ್ಲಿ ಗುಡುಗು–ಸಿಡಿಲು ಸಹಿತ ಮಳೆಯಾಯಿತು.

ಮಡಿಕೇರಿ ನಗರದಲ್ಲಿ ಗುಡುಗು ಸಹಿತ ಮಳೆ ಸುರಿದು ತಂಪೆರೆಯಿತು. ಸುಂಟಿಕೊಪ್ಪ, ನಾಪೋಕ್ಲು, ಬಲಮುರಿ, ಕೈಕಾಡು, ಮಾದಾಪುರ, ಹರದೂರು, ಚೆಟ್ಟಳ್ಳಿ, ಗಾಳಿಬೀಡು ಸುತ್ತಮುತ್ತಲೂ ಉತ್ತಮ ಮಳೆಯಾಗಿದೆ.

ಬಿರುಸಿನ ಗಾಳಿಗೆ ಅಲ್ಲಲ್ಲಿ ಮರದ ರೆಂಬೆಗಳು ಮುರಿದುಬಿದ್ದವು. ಕೆಲವು ಗ್ರಾಮಗಳಲ್ಲಿ ಇದೇ ಮೊದಲ ಬಾರಿಗೆ ಮಳೆ ಸುರಿದಿದ್ದು ಬಿಸಿಲಿನ ತಾಪದಿಂದ ಬಾಡಿದ್ದ ಕಾಫಿ ಗಿಡಗಳಿಗೆ ತಂಪೆರೆದಂತಾಗಿದೆ.

ಚಾಮರಾಜನಗರದಲ್ಲಿ ಸುಮಾರು 15 ನಿಮಿಷ ಬಿರುಸಿನ ಮಳೆಯಾಯಿತು.

ತುಮಕೂರು ನಗರದಲ್ಲಿ ಹದವಾದ ಮಳೆ ಸುರಿಯಿತು. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು, ಬಿರುಸಿನ ಗಾಳಿ ಸಹಿತ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲೂ ಉತ್ತಮ ಮಳೆಯಾಯಿತು. ಶಿವಮೊಗ್ಗ ನಗರದಲ್ಲಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಗುಡುಗು, ಮಿಂಚು ಸಹಿತ ಸುರಿದ ಬಿರುಸಿನ ಮಳೆಯು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣ ಹಾಗೂ ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ಬಿರುಸಿನ ಗಾಳಿಯೊಂದಿಗೆ ಮಳೆ ಸುರಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು