ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪರಿಣಾಮಕಾರಿ ಅನುಷ್ಠಾನವಾಗಲಿ: ನಿವೃತ್ತ ನ್ಯಾ.ಎಚ್‌.ಎನ್. ನಾಗಮೋಹನ್‌ದಾಸ್

ಬೆಳಗಾವಿ ವಿಭಾಗ ಮಟ್ಟದ ಅಹವಾಲು ಸ್ವೀಕಾರ, ಸಮಾಲೋಚನಾ ಸಭೆ
Last Updated 10 ಜನವರಿ 2020, 11:22 IST
ಅಕ್ಷರ ಗಾತ್ರ

ಬೆಳಗಾವಿ: ‘ಮೀಸಲಾತಿ ಸಾಂವಿಧಾನಿಕ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಹೌದು. ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್‌ ಹೇಳಿದರು.

ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಿಸುವ ಕುರಿತು ನಗರದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಅಹವಾಲು ಸ್ವೀಕಾರ ಮತ್ತು ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿ ಬಗ್ಗೆ ಯುವ ಸಮುದಾಯದಲ್ಲಿ ವಿರೋಧ ಭಾವ ವ್ಯಕ್ತವಾಗುತ್ತಿದೆ. 10 ವರ್ಷ ಮೀಸಲಾತಿ ನೀಡಬೇಕು ಎಂದು‌ ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದರು, ಈಗಲೂ ಮೀಸಲಾತಿ ಏಕೆ? ನೇಮಕಾತಿಗೆ ನೀಡುವ ಮೀಸಲಾತಿ ಬಡ್ತಿಗೇಕೆ ಎಂದು ಕೇಳುತ್ತಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೀಸಲಾತಿಯ ಅಗತ್ಯತೆ ಬಗ್ಗೆ ವಿರೋಧಿಸುವವರಿಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಜಾತಿ ಜಾತಿ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಸಮತೋಲನಗಳಿವೆ. ಕೆಲವರಿಗೆ ಬಹಳ ಅನುಕೂಲವಾದರೆ ಕೆಲ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ’ ಎಂದು ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಿಸಲಿ

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಹೊಸ ಜಾತಿ ಸೇರಿಸಿದರೆ ಜೊತೆಗೆ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಮನವಿ ಸಲ್ಲಿಸಿದರು.

‘ಮೀಸಲು ಹೆಚ್ಚಿಸದಿದ್ದರೆ ಈಗಾಗಲೇ ಪಟ್ಟಿಯಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗುತ್ತದೆ’ ಎಂದರು.

412 ಅಹವಾಲು ಸಲ್ಲಿಕೆ

ಆಯೋಗದ ಸದಸ್ಯ ಅನಂತ ನಾಯ್ಕ ಮಾತನಾಡಿ, ‘ಚಿಂತಕರು, ಸಾಹಿತಿಗಳು ಹಾಗೂ ಸಂಘಟಕರು 412 ಅಹವಾಲುಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. 33 ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಜಾತಿಗಳ ಸಂಖ್ಯೆ ಏರುತ್ತಿದೆ. 50ಕ್ಕೂ ಹೆಚ್ಚಿನ ಜಾತಿಗಳು ಸೇರಿವೆ. ಆಯೋಗದ ವರದಿ ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಜೂನ್‌ವರೆಗೆ ಆಯೋಗದ ಅವಧಿ ಇರುವುದರಿಂದ ಅಹವಾಲು ಸಲ್ಲಿಸಬಹುದು’ ಎಂದು ತಿಳಿಸಿದರು.

ಹೊಸ ಜಾತಿ ಸೇರ್ಪಡೆ ಬೇಡ

ಹಾವೇರಿಯ ಮಾಲತೇಶ ಅಂಗೂರ, ‘ವಾಲ್ಮೀಕಿ ಸಮಾಜದವರ ಸಂಖ್ಯೆ ಆಧರಿಸಿ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಬಾಗಲಕೋಟೆಯ ಮಾದಿಗ ಮಹಾಸಭಾದ ಮುತ್ತಣ್ಣ ಬೆಣ್ಣೂರ, ‘101 ಜಾತಿಗಳಿಗೂ ಮೀಸಲಾತಿ ಸಿಗುವಂತೆ ಆಯೋಗ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.

ಆಯೋಗದ ಸದಸ್ಯರಾದ ಡಾ.ಚಂದ್ರಶೇಖರ, ರಾಜಶೇಖರ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ಇದ್ದರು. ಸದಸ್ಯ ಕಾರ್ಯದರ್ಶಿ ಸಮೀರ್ ಅಹ್ಮದ್ ಮುಲ್ಲಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT