ಮಂಗಳವಾರ, ಫೆಬ್ರವರಿ 7, 2023
25 °C
ಮೌಲ್ಯಮಾಪನದಲ್ಲಿ ಮತ್ತೊಂದು ಅಚಾತುರ್ಯ

ಪಿಯುಸಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಗೆ ಉನ್ನತ ಶ್ರೇಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದರೂ ಮೌಲ್ಯಮಾಪಕರ ಯಡವಟ್ಟಿನಿಂದ ಅನುತ್ತೀರ್ಣಗೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮರು ಮೌಲ್ಯಮಾಪನದ ಬಳಿಕ ಆ ವಿದ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಗೋಣಿಕೊಪ್ಪಲಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಎ. ಶೀತಲ್‌ಗೆ ಫಲಿತಾಂಶ ಪ್ರಕಟಗೊಂಡಾಗ ಜೀವಶಾಸ್ತ್ರ ವಿಷಯದಲ್ಲಿ ಕೇವಲ 16 ಅಂಕಗಳು ಬಂದಿದ್ದವು. ಉನ್ನತ ಶ್ರೇಣಿ ನಿರೀಕ್ಷೆ ಮಾಡಿದ್ದ ವಿದ್ಯಾರ್ಥಿನಿಗೆ ಫಲಿತಾಂಶ ಆಘಾತ ತಂದಿತ್ತು.

ಉಳಿದಂತೆ ಇಂಗ್ಲಿಷ್ 87, ಹಿಂದಿಯಲ್ಲಿ 93, ಭೌತಶಾಸ್ತ್ರ 86, ರಸಾಯನಶಾಸ್ತ್ರ 88, ಗಣಿತದಲ್ಲಿ 98 ಅಂಕಗಳು ಲಭಿಸಿದ್ದವು.

ಶೀತಲ್‌, ಜೀವಶಾಸ್ತ್ರ ವಿಷಯದ ಉತ್ತರ ಪತ್ರಿಕೆಗೆ ಶುಲ್ಕ ಕಟ್ಟಿ ತರಿಸಿಕೊಂಡಿದ್ದರು. ಬಳಿಕ ಉಪನ್ಯಾಸಕ ಮಾರ್ಗದರ್ಶನದಂತೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.

ಇದೀಗ ಜೀವಶಾಸ್ತ್ರದಲ್ಲಿ 16 ಅಂಕಕ್ಕೆ ಬದಲು 46 ಅಂಕಗಳು ಲಭಿಸಿವೆ. ಮೌಲ್ಯಮಾಪಕರು ಅಂಕಗಳನ್ನು ನಮೂದಿಸುವಾಗ 46ಕ್ಕೆ ಬದಲು 16 ಎಂದು ಉತ್ತರ ಪತ್ರಿಕೆ ಮುಖಪುಟದಲ್ಲಿ ಹಾಕಿದ್ದೇ ಈ ಪ್ರಮಾದಕ್ಕೆ ಕಾರಣವಾಗಿದೆ (ಆಂತರಿಕ ಅಂಕ ಸೇರಿ ಜೀವಶಾಸ್ತ್ರದಲ್ಲಿ 66 ಅಂಕ ಲಭಿಸಿದೆ). ಅಂಕಗಳು ಹೆಚ್ಚಾದ್ದರಿಂದ ಇದೀಗ ಒಟ್ಟು ಅಂಕ 528 ಆಗಿದ್ದು ವಿದ್ಯಾರ್ಥಿನಿಗೆ ಉನ್ನತ ಶ್ರೇಣಿ ಲಭಿಸಿದೆ.

‘ಫಲಿತಾಂಶ ಬಂದ ದಿನದಿಂದಲೂ ಮಗಳು ಊಟ ಮಾಡಿರಲಿಲ್ಲ. ಇದೀಗ ಸಂತೋಷವಾಗಿದೆ. ಆದರೆ, ಇಂತಹ ನಿರ್ಲಕ್ಷ್ಯದಿಂದ ಮೌಲ್ಯಮಾಪನ ಮಾಡುವ ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿ ತಂದೆ ತಡಿಯಪ್ಪನ ಅರುಣ್ ಉತ್ತಯ್ಯ ಒತ್ತಾಯಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು