ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಕೋವಿಡ್‌ ಪರೀಕ್ಷೆಯ ದಿನವೇ ಫಲಿತಾಂಶ: ಸುಧಾಕರ್‌ ಭರವಸೆ

ಸಚಿವ ಡಾ.ಸುಧಾಕರ್ ಭರವಸೆ
Last Updated 9 ಜುಲೈ 2020, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ವಾರದಿಂದೀಚೆಗೆ ಒಮ್ಮಿಂದೊಮ್ಮೆಲೆ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದಕ್ಕೆ ಪರೀಕ್ಷಾ ವರದಿ ಬರುವುದು ವಿಳಂಬವಾಗಿದೆ. ಇನ್ನು ಎರಡು ದಿನದೊಳಗೆ ಬಾಕಿ ಫಲಿತಾಂಶವನ್ನೆಲ್ಲಾ ನೀಡಲಿದ್ದು, ಮುಂದೆ ಫಲಿತಾಂಶ ಬಾಕಿಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘ಆ್ಯಂಟಿಜಿನ್ ಪರೀಕ್ಷೆಯನ್ನು ಎಲ್ಲ 800 ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಆದ್ಯತೆ ಮೇಲೆ ನಡೆಸಲಾಗುವುದು. ದಿನಕ್ಕೆ 30 ಸಾವಿರದಿಂದ 40 ಸಾವಿರ ಪರೀಕ್ಷೆ ನಡೆಸಿ ಹತ್ತೇ ನಿಮಿಷದಲ್ಲಿ ಫಲಿತಾಂಶ ಪಡೆಯುವ ವ್ಯವಸ್ಥೆ ಇಲ್ಲಿದೆ. ಹೀಗಾಗಿ ಇನ್ನು ಮುಂದೆ ಹಲವಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

‘ಬೆಂಗಳೂರಿನಲ್ಲಿ ಗುಣಮುಖರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಸಾಕಷ್ಟು ಆರೈಕೆ ಕೇಂದ್ರಗಳೂ ಆರಂಭವಾಗಿವೆ. ಬಿಐಇಸಿಯಲ್ಲಿ 10,100 ಹಾಸಿಗೆಗಳ ಸೌಲಭ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿವೆ. ಜನ ಮುಖಗವಸು ಹಾಕಿಕೊಳ್ಳುವುದು, ಕೈತೊಳೆದುಕೊಳ್ಳುವುದು, ಕನಿಷ್ಠ 1 ಮೀಟರ್ ಅಂತರ ಕಾಪಾಡುವ ಶಿಸ್ತನ್ನು ಪಾಲಿಸಿದ್ದೇ ಆದರೆ ಶೇ 80ರಷ್ಟು ಸೋಂಕು ಪಕ್ಕಕ್ಕೆ ಸುಳಿಯದಂತೆ ಮಾಡಬಹುದು’ ಎಂದು ಸಲಹೆ ನೀಡಿದರು.

‌ಪರೀಕ್ಷೆ ಬೇಡ: ‘ನವದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಂಜಿತ್ ಬುಲೇರಿಯಾ ಸಲಹೆಯಂತೆ, ಆರೈಕೆ ಕೇಂದ್ರದಲ್ಲಿರುವವರಿಗೆ 10 ದಿನಗಳಲ್ಲಿ ಯಾವುದೇ ರೋಗ ಲಕ್ಷಣ ಕಾಣಿಸದಿದ್ದರೆ ಅವರು ಮತ್ತೊಮ್ಮೆ ಪರೀಕ್ಷೆ ನಡೆಸದೆಯೇ ಮನೆಗೆ ತೆರಳಬಹುದಾಗಿದೆ. ಏಕೆಂದರೆ ಅವರ ದೇಹದಲ್ಲಿ ಇರಬಹುದಾದ ಕೊರೊನಾ ವೈರಸ್‌ ಆ ವೇಳೆಗೆ ಸತ್ತಿರುತ್ತದೆ ಅಥವಾ ಶಕ್ತಿ ಕಳೆದುಕೊಂಡಿರುತ್ತದೆ. ಹೀಗಾಗಿ ಅದು ಇನ್ನೊಬ್ಬರ ದೇಹ ಸೇರುವ ತಾಕತ್ತು ಹೊಂದಿರುವುದಿಲ್ಲ. ಈ ವೈಜ್ಞಾನಿಕ ಅಂಶ ಮುಂದಿನ ದಿನಗಳಲ್ಲಿ ಬಹಳ ಮಟ್ಟಿಗೆ ನೆರವಿಗೆ ಬರಲಿದೆ’ ಎಂದು ಡಾ.ಸುಧಾಕರ್ ಹೇಳಿದರು.

ಸಾವಿನ ಪ್ರಮಾಣ ಕನಿಷ್ಠ

‘ಕೋವಿಡ್‌ನಿಂದ ರಾಜ್ಯದಲ್ಲಿ ಸರಾಸರಿ ಸಾವಿನ ಪ್ರಮಾಣ ಶೇ 1.49ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ 1.28ರಷ್ಟಿದೆ. ಇದನ್ನು ಶೇ 1ಕ್ಕಿಂತ ಕನಿಷ್ಠಗೊಳಿಸುವ ಗುರಿ ಸರ್ಕಾರದ್ದು. ಜಗತ್ತಿನಲ್ಲಿ ಸಾವಿನ ಪ್ರಮಾಣ ಶೇ 4.5ರಷ್ಟಿದೆ. ಸ್ಪೇನ್‌ನಲ್ಲಿ ಶೇ 9.48ರಷ್ಟಿದೆ. ಭಾರತದ ಸರಾಸರಿ ಶೇ 2.74’ ಎಂದು ಸಚಿವ ಸುಧಾಕರ್ ತಿಳಿಸಿದರು.

ದೇಶದಲ್ಲೇ ದೊಡ್ಡ ಕೇಂದ್ರ: ಲಕ್ಷಣರಹಿತ ಹಾಗೂ ಅಲ್ಪಲಕ್ಷಣವುಳ್ಳ ಕೋವಿಡ್ ಸೋಂಕಿತರಿಗಾಗಿ ಬೆಂಗಳೂರಿನ ನೆಲಮಂಗಲದಲ್ಲಿ ದೇಶದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸೇವೆಗೆ ಸಿದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು 10,100 ಹಾಸಿಗೆಯನ್ನು ಒಳಗೊಂಡ ಈ ಕೋವಿಡ್ ಕೇರ್ ಸೆಂಟರ್ 100 - 200 ಜನರಿಗೆ ಒಬ್ಬ ವೈದ್ಯರಂತೆ 600 ವೈದ್ಯರು, 1000 ನರ್ಸ್‌ಗಳು ಇನ್ನಿತರ ಆರೋಗ್ಯ ಯೋಧರು ಬೇಕಾಗಿದ್ದು ಎಲ್ಲವನ್ನೂ ಸರ್ಕಾರ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.

ಕೊರೋನ ಸರಪಳಿ ಮುರಿಯಲು ಅಂತರವೇ ಲಕ್ಷ್ಮಣರೇಖೆ: ರಾವಣನಂತಹ ಅಪಾಯದಿಂದ ಪಾರಾಗಲು ಒಂಟಿಯಾಗಿರುವ ಸೀತೆಯ ರಕ್ಷಣೆಗಾಗಿ ಲಕ್ಷ್ಮಣ ಒಂದು ದಿವ್ಯ ರೇಖೆಯನ್ನು ಎಳೆಯುತ್ತಾನೆ. ಅದೇ ಲಕ್ಷ್ಮಣ ರೇಖೆ. ಆ ಲಕ್ಶ್ಮಣ ರೇಖೆಯ ಒಳಗೆ ಇರುವವರೆಗೂ ಸೀತೆಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸಾಧ್ಯತೆಯೇ ಇರಲಿಲ್ಲ. ಆದರೆ ದುರಾದೃಷ್ಟವಶಾತ್ ಸೀತೆ ಆ ಲಕ್ಷ್ಮಣ ರೇಖೆಯನ್ನು ದಾಟಿದ್ದಕ್ಕೆ ಎಂತಹ ಅನಾಹುತ ನಡೆಯಿತು ಎಂದು ನಮಗೆಲ್ಲಾ ಗೊತ್ತಿದೆ. ಇಂದು ನಮಗೆ ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯಲು ಇರುವ 3 ಸಿದ್ದ ಸೂತ್ರವೆಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪದೇ ಪದೇ ಸಾಬೂನಿನಿಂದ ಕೈತೊಳೆಯುವುದು ಮತ್ತು ಕಡ್ಡಾಯ ಮಾಸ್ಕ್ ಧರಿಸುವುದು. ಇವೇ ಲಕ್ಷ್ಮಣ ರೇಖೆಗಳು. ಇವು ನಮ್ಮ ಕೈಯಲ್ಲೇ ಇವೆ. ಇವುಗಳನ್ನು ದಾಟಿದರೆ ಕೊರೋನ ಎಂಬ ರಾವಣನ ಕೈಗೆ ಸಿಕ್ಕಿಹಾಕಿಕೊಳ್ಳುವುದು ಖಚಿತ ಎಂದು ಸಚಿವ ಸುಧಾಕರ್ ತಿಳಿಸಿದರು

ಅಂಕಿ ಅಂಶ

1526:ರೋಗಲಕ್ಷಣ ಇಲ್ಲದವರಿಗೆ ಮೊದಲಿಗೆ ಸಿದ್ಧಗೊಂಡ ಹಾಸಿಗೆಗಳು

1,409:ಭರ್ತಿಯಾಗಿರುವ ಹಾಸಿಗೆಗಳು

‌5,144:ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾದ ಆರೈಕೆ ಹಾಸಿಗೆಗಳು

4,137:ಭರ್ತಿಯಾಗಿರುವ ಹಾಸಿಗೆಗಳು

408:ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಾಲಕರ ಹಾಸ್ಟೆಲ್‌ನಲ್ಲಿ 1 ದಿನದಲ್ಲಿ ಲಭ್ಯವಾಗುವ ಹಾಸಿಗೆ

450:ಜ್ಞಾನಭಾರತಿ ಬಾಲಕಿಯರ ಹಾಸ್ಟೆಲ್‌ನಲ್ಲಿ 2 ದಿನದಲ್ಲಿ ಲಭ್ಯವಾಗುವ ಹಾಸಿಗೆ

7,000: ಖಾಸಗಿ ಆಸ್ಪತ್ರೆಗಳಲ್ಲಿ ಒಂದೆರಡು ದಿನಗಳಲ್ಲಿ ಲಭ್ಯವಾಗಲಿರುವ ಹಾಸಿಗೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT