ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮುಖಂಡರ ಹತ್ಯೆ ಯತ್ನ: ಎಸ್‌ಡಿಪಿಐನಿಂದ ₹ 10 ಸಾವಿರ ಸಂಬಳ!

ಮೊಬೈಲ್‌ ಮನೆಯಲ್ಲಿಟ್ಟು ಸಂಚು * ಪೂರ್ಣತಯಾರಿ ನಡೆಸಿದ್ದ ಆರೋಪಿಗಳು: ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್‌ ಮಾಹಿತಿ
Last Updated 18 ಜನವರಿ 2020, 4:09 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ಆರ್‌ಎಸ್‌ಎಸ್‌ ಕಾರ್ಯಕರ್ತ ವರುಣ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳು ಹಿಂದೂ ಮುಖಂಡರ ಹತ್ಯೆಗೆ ಪೂರ್ಣಸಿದ್ಧತೆ ಮಾಡಿಕೊಂಡಿದ್ದರು’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್‌ ಮಾಹಿತಿ ನೀಡಿದ್ದಾರೆ.

‘ಆರೋಪಿಗಳು ಎಸ್‌ಡಿಪಿಐನ ಸಕ್ರಿಯ ಸದಸ್ಯರು. ಬೆಂಗಳೂರಿನಲ್ಲಿ ಎಸ್‌ಡಿಪಿಐ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ, ತರಬೇತಿ, ಗಲಭೆಸೃಷ್ಟಿಸುವ ಹಾಗೂ ಕೊಲೆ ಕೃತ್ಯಗಳ ಕಾರ್ಯರೂಪಕ್ಕಿಳಿಸುವ ಕೆಲಸವನ್ನು ಈ ಆರು ಮಂದಿಗೆ ಸಂಘಟನೆ ಮುಖಂಡರು ವಹಿಸಿದ್ದರು. ಈ ಕೆಲಸಕ್ಕಾಗಿ ಅವರಿಗೆ ತಿಂಗಳಿಗೆ ಅವರಿಗೆ ₹ 10 ಸಾವಿರ ಸಂಬಳ ಸಿಗುತ್ತಿತ್ತು’ ಎಂದು ಕಮಿಷನರ್‌ ತಿಳಿಸಿದ್ದಾರೆ.

ಮೊಬೈಲ್‌ ಮನೆಯಲ್ಲಿಟ್ಟು ಸಂಚು:‘ಕೃತ್ಯದ ವೇಳೆ ತಮ್ಮ ಇರುವಿಕೆ ಮರೆಮಾಚುವ ದೃಷ್ಟಿಯಿಂದ ಆರೋಪಿಗಳು ತಮ್ಮ ಮೊಬೈಲ್‌ಗಳನ್ನು ಮನೆಯಲ್ಲಿಯೇ ಆನ್ ಮಾಡಿ ಇಟ್ಟಿದ್ದರು. ಕೃತ್ಯದ ವೇಳೆ ಹೆಲ್ಮೆಟ್ ಧರಿಸಿದ್ದ ಅವರು, ಬೈಕ್‌ಗಳ ನೋಂದಣಿ ಸಂಖ್ಯೆ ಫಲಕಕ್ಕೆ ಕಪ್ಪುಬಣ್ಣ ಬಳಿದಿದ್ದರು’ ಎಂದು ಕಮಿಷನರ್‌ ತಿಳಿಸಿದ್ದಾರೆ.

‘ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ನಡೆದ ಸಮಾವೇಶಕ್ಕೆ (ಡಿ. 22) ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಹೀಗಾಗಿ, ಅಂದು ಹಿಂದೂ ಮುಖಂಡರನ್ನು ಹತ್ಯೆ ಮಾಡುವ ಆರೋಪಿಗಳ ಸಂಚು ವಿಫಲವಾಗಿದೆ. ಹಿಂದೂ ಸಂಘಟನೆಯ ಯಾರನ್ನಾದರೂ ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ ವರುಣ್ ಹತ್ಯೆಗೆ ಯತ್ನಿಸಿದ್ದರು.’

‘ವರುಣ್‌ ಮೇಲೆ ಹಲ್ಲೆ ನಡೆದ ದಿನ ಬೆಳಿಗ್ಗೆ 8.30ಕ್ಕೆ ಕೆ. ಜಿ. ಹಳ್ಳಿಯ ರಿಚರ್ಡ್ ಪಾರ್ಕ್‌ನಲ್ಲಿ ಗುಂಪುಗೂಡಿ ರೂ ಮಂದಿ ಚರ್ಚೆ ನಡೆಸಿದ್ದಾರೆ. ಈ ಪೈಕಿ, ಸನಾವುಲ್ಲಾ ಮತ್ತು ಸಾದಿಕ್ ಕೃತ್ಯ ನಡೆದ ಬಳಿಕ ಪರಾರಿಯಾಗುವ ದಾರಿಯ ನೀಲನಕ್ಷೆ ಸಿದ್ಧಪಡಿಸಿದ್ದರು. ಉಳಿದವರು, ಸಂಚು ಕಾರ್ಯಗತಗೊಳಿಸುವ ಕೆಲಸಕ್ಕೆ ನಿಯೋಜಿತರಾಗಿದ್ದರು. ಬೆಳಿಗ್ಗೆ 11 ಗಂಟೆಗೆ ಪುರಭವನ ಬಳಿಗೆ ಆರೋಪಿಗಳು ಬಂದಿದ್ದರು. ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಭಾಷಣಕಾರರಾಗಿದ್ದರು. ಕಲ್ಲು ಎಸೆದು, ಗುಂಪು ಚದುರಿ
ದಾಗ ಮುಖಂಡರ ಹತ್ಯೆ ಮಾಡುವುದು ಆರೋಪಿಗಳ ಸಂಚು ಆಗಿತ್ತು.’

‘ಸಮಾವೇಶ ವೇಳೆಯಲ್ಲಿ ಏಳು ಬಾರಿ ಆರೋಪಿಗಳು ಕಲ್ಲು ತೂರಿದ್ದಾರೆ. ಪೊಲೀಸರ ಬಿಗಿ ಭದ್ರತೆ ಕಾರಣಕ್ಕೆ ನುಗ್ಗಿ ಕೃತ್ಯ ಎಸಗಲು ಆರೋಪಿಗಳು ಹಿಂಜರಿದಿದ್ದಾರೆ. ಈ ವೇಳೆ, ಮುಖಂಡರ ಬದಲಿಗೆ ಬೇರೆ ಯಾರನ್ನಾದರೂ ಕೊಲ್ಲಲೇಬೇಕು ಎಂದು ನಿರ್ಧರಿಸಿದ್ದಾರೆ. ಸಭೆಯಲ್ಲಿ ಕೇಸರಿ ಕುರ್ತಾ ಧರಿಸಿ, ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ವರುಣ್ ಕಾಣಿಸಿದ್ದಾರೆ’ ಎಂದು ಕಮಿಷನರ್‌ ಹೇಳಿದ್ದಾರೆ.

‘ಸಮಾವೇಶ ಮುಗಿದ ಬಳಿಕ ‘ಬೌನ್ಸ್’ ಸ್ಕೂಟರ್‌ನಲ್ಲಿ ವರುಣ್‌ ಮನೆಗೆ ಮರಳುತ್ತಿದ್ದರು. ಹಿಂಬಾಲಿಸಿಕೊಂಡು ಹೋದ ಆರೋಪಿಗಳು, ಕುಂಬಾರ ಗುಂಡಿ ರಸ್ತೆಯಲ್ಲಿ ಹಲ್ಲೆ ನಡೆಸಿದ್ದರು. ಕೃತ್ಯದ ಬಳಿಕ ಸನಾವುಲ್ಲಾ ಹಾಗೂ ಸಾದಿಕ್ ಶಿವಾಜಿನಗರಕ್ಕೆ ಹೋಗಿದ್ದಾರೆ. ಉಳಿದವರು ಬಿಡದಿಗೆ ಕಡೆ ತೆರಳಿದ್ದಾರೆ. 12 ಗಂಟೆಗೆ ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಪ್ರವೇಶದ ದ್ವಾರದ ಬಳಿಗೆ ಬಂದಿದ್ದಾರೆ. ಅಲ್ಲಿ ಬಟ್ಟೆ ಬದಲಿಸಿದ ಆರೋಪಿಗಳು, ನಂತರ ಬಿಡದಿಗೆ ತೆರಳಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಮಾಜ್‌ನಲ್ಲಿ ಭಾಗವಹಿಸಿದ ನಾಲ್ವರೂ, ಬಿಡದಿ ಬಳಿ ಬಟ್ಟೆ ಬದಲಿಸಿ ಕೃತ್ಯದ ವೇಳೆ ಧರಿಸಿದ್ದ ಟೀ ಶರ್ಟ್ ಹಾಗೂ ಶರ್ಟ್‌ಗಳನ್ನು ಸುಟ್ಟು ಹಾಕಿದ್ದಾರೆ’

‘ಕೃತ್ಯದ ವೇಳೆಯಲ್ಲಿ ಆರೋಪಿಗಳು ಎರಡು ಜೊತೆ ಶರ್ಟ್‌ ಹಾಕಿಕೊಂಡಿದ್ದರು. ನೈಸ್ ರಸ್ತೆ ಮಾರ್ಗವಾಗಿ ತುಮಕೂರು ರಸ್ತೆಯ ಅಂಚೆ ಪಾಳ್ಯಕ್ಕೆ ಮಧ್ಯಾಹ್ನ 3 ಗಂಟೆಗೆ ಬಂದ ಅವರು, ಅಲ್ಲಿನ ಕೆರೆಗೆ ಮಚ್ಚು, ಲಾಂಗು ಎಸೆದಿದ್ದಾರೆ. ನಾಲ್ಕು ಗಂಟೆಗೆ ರಾಮಮೂರ್ತಿ ನಗರದ ಹೊಂಡವೊಂದಕ್ಕೆ ಶೂ ಮತ್ತು ಹೆಲ್ಮೆಟ್‌ ಎಸೆದಿದ್ದಾರೆ. ಸಂಜೆ ಏಳು ಗಂಟೆಗೆ ಹೆಗಡೆ‌ನಗರ ಸಮೀಪ ನಿರ್ಜನ ಪ್ರದೇಶದಲ್ಲಿ ಒಂದು ಬೈಕ್ ನಿಲ್ಲಿಸಿದರೆ, ಕೊತ್ತನೂರು ಪೊಲೀಸ್ ಠಾಣೆ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಬೈಕ್ ನಿಲ್ಲಿಸಿದ್ದಾರೆ. ಅಲ್ಲಿಂದ ಬಿಎಂಟಿಸಿ ಬಸ್ಸಿನಲ್ಲಿ ರಾತ್ರಿ 7 ಗಂಟೆಗೆ ಮನೆ ತಲುಪಿದ್ದಾರೆ’ ಎಂದು ಕಮಿಷನರ್‌ ವಿವರಿಸಿದ್ದಾರೆ.

‘ಸಿಘಟನೆ ನಡೆದ ಸ್ಥಳದಿಂದ ಆರಂಭಿಸಿ ಸುಮಾರು ಒಂದು ಸಾವಿರ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 700 ಸಿಸಿ ಟಿವಿ ಕ್ಯಾಮೆರಾಗಳ 850 ಗಂಟೆ ವಿಡಿಯೊಗಳನ್ನು ಸೂಕ್ಷ್ಮವಾಗಿ ವೀಕ್ಷಿಸಲಾಯಿತು. ಡಿ. 23ರಂದು ಕುದುಸಾಬ್ ದರ್ಗಾ ಬಳಿ ಸಿಎಎ ಹಾಗೂ ಎನ್‍ಆರ್‌ಸಿ ವಿರೋಧಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಅಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಸಂಭ್ರಮಾಚರಣೆ ಮಾಡುವ ಯೋಜನೆ ಸಿದ್ಧಗೊಂಡಿತ್ತು. ಆರೋಪಿಗಳು ಹಿಂದಿನ ದಿನ ಸಂಜೆ 5.30 ಮತ್ತು ರಾತ್ರಿ 8.30ಕ್ಕೆ ಸಭೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು

ಮಾರಕಾಸ್ತ್ರಗಳು, ಮೂರು ಬೈಕ್‌ ವಶ

‘ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರ ಕಾಸ್ತ್ರಗಳು ಮತ್ತು ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ, ಒಂದು ಬೈಕ್ ಕದ್ದದ್ದಾಗಿದೆ. ಕೃತ್ಯಕ್ಕೆ ಮುನ್ನ ಆರೋಪಿಗಳು, ಕೆ.ಜಿ. ಹಳ್ಳಿ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದಾರೆ. ಈ ಕಳ್ಳತನ ಕುರಿತು ಪ್ರತ್ಯೇಕ ತನಿಖೆ ನಡೆಸಲಾಗುತ್ತದೆ’ ಎಂದು ಪೊಲೀಸರು ಹೇಳಿದ್ದಾರೆ.
***
ಎಸ್‌ಡಿಪಿಐ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿಯ ಎಟಿಎಸ್‌ಗೆ ವಹಿಸಲಾಗಿದೆ

– ಭಾಸ್ಕರ್ ರಾವ್, ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT