ಶುಕ್ರವಾರ, ಜೂನ್ 5, 2020
27 °C
ಕೊರೊನಾ ಸೋಂಕು ಸಂಬಂಧಿತ ಮಾಹಿತಿ ನೀಡುವ ಸುತ್ತೋಲೆಗಳು ಇಂಗ್ಲಿಷ್‌ನಲ್ಲೇ ಜಾಸ್ತಿ

ಕೋವಿಡ್‌ ಮಾಹಿತಿ ಕನ್ನಡದಲ್ಲೇ ನೀಡಲು ಒತ್ತಾಯಿಸಿ ಟ್ವಿಟರ್‌ನಲ್ಲಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿನ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಮಾಹಿತಿ ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಒತ್ತಾಯಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಯುತ್ತಿದೆ. 

ಕನ್ನಡ ಗ್ರಾಹಕರ ಕೂಟವು ಗುರುವಾರದಿಂದ ಈ ಅಭಿಯಾನ ಆರಂಭಿಸಿದ್ದು, #ಕನ್ನಡದಲ್ಲಿ_ಮಾಹಿತಿಕೊಡಿ ಮತ್ತು #ServeInMyLanguage ಹ್ಯಾಶ್‌ಟ್ಯಾಗ್‌ಗಳು ಶುಕ್ರವಾರ ‘ಟಾಪ್‌ ಟ್ರೆಂಡಿಂಗ್‌’ನಲ್ಲಿದ್ದವು. 

ಶುಕ್ರವಾರ ಸಂಜೆಯ ವೇಳೆಗೆ, ಕನ್ನಡ_ಮಾಹಿತಿ ಕೊಡಿ ಹ್ಯಾಶ್‌ಟ್ಯಾಗ್‌ ಅಡಿ ಏಳೂವರೆ ಸಾವಿರ, #ServeInMyLanguage ಹ್ಯಾಶ್‌ಟ್ಯಾಗ್‌ ಅಡಿ ಏಳು ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ.

‘ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ರೋಗಿಯ ವಿವರಗಳನ್ನು ಬಿಟ್ಟರೆ, ಯಾವುದೇ ಮುಖ್ಯವಾದ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಓಡಾಡುವ ಬಗ್ಗೆ, ಬೇರೆ ಕಡೆಯಿಂದ ಬಂದರೆ ಕ್ವಾರಂಟೈನ್‌ ಆಗುವ ಕುರಿತು ಕನ್ನಡದಲ್ಲಿ ಸರಿಯಾಗಿ ಮಾಹಿತಿಯೇ ನೀಡುತ್ತಿಲ್ಲ. ಅದಕ್ಕೆ ಈ ಅಭಿಯಾನ ಆರಂಭಿಸಿದ್ದೇವೆ’ ಎಂದು ಕೂಟದ ಅರುಣ್‌ ಜಾವಗಲ್ ‘ಪ್ರಜಾವಾಣಿ’ ತಿಳಿಸಿದರು. 

‘ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಹಿಂದಿ ಮತ್ತು ಇಂಗ್ಲಿಷ್‌ ಹೊರತು ಪಡಿಸಿದರೆ ಬೇರೆ ಯಾವುದೇ ಭಾಷೆಯಲ್ಲಿ ಮಾಹಿತಿ ನೀಡುವುದಿಲ್ಲ. ಕರ್ನಾಟಕ ಸರ್ಕಾರವೂ ಕನ್ನಡದಲ್ಲಿ ಮಾಹಿತಿ ನೀಡದಿದ್ದರೆ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ. 

‘ಈ ಕುರಿತು ಅಭಿಯಾನ ನಡೆಸುತ್ತೇವೆ ಎಂದು ಹೇಳುತ್ತಿದ್ದಂತೆ ನೂರಾರು ಜನ ಇದಕ್ಕೆ ಸ್ಪಂದಿಸಿದ್ದಾರೆ. ಟ್ವೀಟ್‌ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು. 

‘#ServeInMyLanguage ಹ್ಯಾಶ್‌ಟ್ಯಾಗ್‌ ಅನ್ನು ಅಖಿಲ ಭಾರತ ಮಟ್ಟದಲ್ಲಿ ಬಳಸುತ್ತಿದ್ದೇವೆ. ಜನರಿಗೆ ಅವರ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯಡಿಯಲ್ಲಿ ಸೇವೆ ನೀಡಬೇಕು ಎಂದು ಸರ್ಕಾರಿ ಮತ್ತು ಖಾಸಗಿ ವಲಯವನ್ನು ಒತ್ತಾಯಿಸುತ್ತಾ ಬಂದಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು