ಶಾಮನೂರು - ಪಾಟೀಲ ಬೈಗುಳ ಜಗಳಬಂದಿ

7
ಅಕ್ರಮ ಹಣದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಹೇಳಿಕೆಗೆ ತೀವ್ರ ವಿರೋಧ

ಶಾಮನೂರು - ಪಾಟೀಲ ಬೈಗುಳ ಜಗಳಬಂದಿ

Published:
Updated:

ಹುಬ್ಬಳ್ಳಿ: 'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಅಕ್ರಮ, ಲಂಚದ ಹಣದಲ್ಲಿ ನಡೆದಿದೆ' ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗೃಹ ಸಚಿವ ಎಂ.ಬಿ.ಪಾಟೀಲ ಭಾನುವಾರ ಇಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಸಮಾಜದ ಜನತೆಯ ಅಸ್ಮಿತೆಯ ಹೋರಾಟ; ರಾಜಕೀಯ ಪ್ರೇರಿತ ಹೋರಾಟವಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಶಾಮನೂರು ಅವರು ತಮ್ಮ ಕೊಳಕು ವ್ಯಕ್ತಿತ್ವ ಪ್ರದರ್ಶನ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿದ್ದ ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ’ ಎಂದು ಶಾಮನೂರು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಇವರ ಮಗ ಮಲ್ಲಿಕಾರ್ಜುನ ಯಾವ ಕಾರಣಕ್ಕಾಗಿ ಸೋತರು? ಇವರ ವೀರಶೈವ ಬಲ ಎಲ್ಲಿ ಹೋಗಿತ್ತು?’ ಎಂದು ಕಿಡಿ ಅವರು ಕಾರಿದರು.

‘ಹೋರಾಟದ ಬಗ್ಗೆ ಹಾಗೂ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಶಾಮನೂರು ನಿಲ್ಲಿಸದಿದ್ದರೆ ಅವರ ವಿರುದ್ಧ ಮಾತನಾಡಲು ನಾವು ಹಿಂಜರಿಯುವುದಿಲ್ಲ’ ಎಂದು ಪಾಟೀಲ ಎಚ್ಚರಿಕೆನೀಡಿದರು.

**
ಮೋಸದಿಂದ ಅಧ್ಯಕ್ಷ
‘ದಾವಣಗೆರೆ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಕೊಟ್ಟೂರು ಬಸಪ್ಪ ಅವರು ವಿದೇಶಕ್ಕೆ ಹೋಗಿದ್ದಾಗ, ಮೋಸದಿಂದ ಶಾಮನೂರು ಅದರ ಅಧ್ಯಕ್ಷರಾಗಿರುವುದು ನಮಗೂ ತಿಳಿದಿದೆ’ ಎಂದು ಎಂ.ಬಿ.ಪಾಟೀಲ ಕುಟುಕಿದರು.

‘ಶಾಮನೂರು ಅವರಿಗೆ ರಾಜಕೀಯವಾಗಿ ನನ್ನ ಬೆಳವಣಿಗೆ ಸಹಿಸಲಾಗುತ್ತಿಲ್ಲ. ಸಂಕುಚಿತ ಮನೋಭಾವದ ಅವರಿಗೆ ನನ್ನ ಬಗ್ಗೆ ಅಸೂಯೆ ಹೆಚ್ಚಾಗಿದೆ. ನನ್ನ ಬಗ್ಗೆ ಕೀಳಾಗಿ ಮಾತನಾಡುವುದನ್ನು ಬಿಟ್ಟು ಹಾರೈಸುವ ಕೆಲಸ ಮಾಡಬೇಕಾಗಿತ್ತು. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ’ ಎಂದರು.

ಇದನ್ನೂ ಓದಿ: ಪಾಟೀಲನ ಉದ್ಧಾರ ಮಾಡಿದ್ದೇ ನಾವು: ಶಾಮನೂರು ಶಿವಶಂಕರಪ್ಪ ತಿರುಗೇಟು

ಘರ್ಷಣೆಗೆ ಅವಕಾಶ ಬೇಡ: ಹೊರಟ್ಟಿ
‘ಶಾಮನೂರು ಶಿವಶಂಕರಪ್ಪ ಹಿರಿಯರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವಿಷಯದಲ್ಲಿ ಈ ರೀತಿ ಮಾತನಾಡಬಾರದು. ಅನಗತ್ಯ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು. ಹೋರಾಟದ ಮುಂಚೂಣಿಯಲ್ಲಿದ್ದ ಗೃಹ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಪ್ರಮುಖರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಕ್ಷಮೆ ಕೇಳದಿದ್ದರೆ ಹೋರಾಟ: ಎಚ್ಚರಿಕೆ
‘ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಗ್ಗೆ ಹಗುರವಾಗಿ ಮಾತನಾಡಿರುವ ಗೃಹ ಸಚಿವ ಎಂ.ಬಿ. ಪಾಟೀಲ 24 ಗಂಟೆಯೊಳಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಹೋರಾಟ ನಡೆಸಲಾಗುವುದು’ ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ ಎಚ್ಚರಿಕೆ ನೀಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಶನಿವಾರ ವೀರಶೈವ ಧರ್ಮ ರತ್ನ ಪ್ರಶಸ್ತಿ ಸ್ವೀಕರಿಸಿದ ವೇಳೆ ಶಾಮನೂರು ಅವರು ಯಾರ ಹೆಸರನ್ನೂ ಉಲ್ಲೇಖಿಸಿ, ದುಡ್ಡು ಮಾಡಿದ್ದಾರೆ ಎಂದು ಹೇಳಿಲ್ಲ. ಗೃಹ ಖಾತೆಯಂತಹ ಉನ್ನತ ಜವಾಬ್ದಾರಿ ಹೊತ್ತಿರುವ ಎಂ.ಬಿ. ಪಾಟೀಲ ಸಮಾಜದ ಹಿರಿಯ ಮುಖಂಡರನ್ನು ನಿಂದಿಸಿರುವುದನ್ನು ವೀರಶೈವ ಲಿಂಗಾಯತ ಸಮಾಜ ಖಂಡಿಸುತ್ತದೆ’ ಎಂದು ಹೇಳಿದರು.

ಬಳಗದ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ರಾಜೇಶ್‌ ಹಾಗರಗಿ, ‘ಶಾಮನೂರು ಶಿವಶಂಕರಪ್ಪ ಅವರು ಪಕ್ಷಕ್ಕೆ ಏನು ಮಾಡಿದ್ದಾರೆ ಎಂದು ಪದೇ ಪದೇ ಪಾಟೀಲರು ಪ್ರಶ್ನಿಸುತ್ತಿದ್ದಾರೆ. ಗೃಹ ಸಚಿವ ಸ್ಥಾನ ಅವರು ಕೊಟ್ಟ ಭಿಕ್ಷೆ ಎಂಬುದನ್ನು ಪಾಟೀಲ ಮರೆಯಬಾರದು. ಅಧಿಕಾರಕ್ಕಾಗಿ ಧರ್ಮವನ್ನು ಕಡೆಗಣಿಸಿದವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೃಹ ಸಚಿವ ಸ್ಥಾನ ಕೊಟ್ಟಿರುವುದು ಸರಿಯಲ್ಲ. ಕ್ಷಮೆ ಕೇಳದಿದ್ದರೆ, ಸಚಿವ ಸ್ಥಾನದಿಂದ ಕೈಬಿಡುವಂತೆ ಕುಮಾರಸ್ವಾಮಿ ಮನೆ ಮುಂದೆ ಧರಣಿ ನಡೆಸಲಾಗುವುದು’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡ ಆರ್‌.ಟಿ. ಪ್ರಶಾಂತ್‌, ಕಾರ್ತಿಕ್‌ ಮಠಪತಿ, ರಾಜೇಶ್‌ ಹಾಗರಗಿ, ಹದಡಿ ರವಿಕುಮಾರ್‌ ಇದ್ದರು.

‘ಶಾಮನೂರು ರಾಜೀನಾಮೆ ನೀಡಲಿ’
‘ಶಾಮನೂರು ಸ್ವಂತ ಹಣದಿಂದ ಕಾಂಗ್ರೆಸ್‌ ಸಂಘಟಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಉಳಿಯಲು ವೀರಶೈವ–ಲಿಂಗಾಯತರೇ ಕಾರಣ. ಧರ್ಮ ಇಬ್ಭಾಗ ಮಾಡಿದವರಿಗೆ ಸಚಿವ ಸ್ಥಾನ ನೀಡಿ, ಶಾಮನೂರು ಅವರನ್ನು ಕಡೆಗಣಿಸಿರುವುದು ಸಮಾಜಕ್ಕೆ ನೋವು ತಂದಿದೆ. ಹೀಗಾಗಿ ಶಾಮನೂರು ಅವರು ಕೂಡಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಪಕ್ಷಕ್ಕೆ ಪಾಠ ಕಲಿಸಬೇಕು. ಇಲ್ಲದಿದ್ದರೆ ಶಾಮನೂರು ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವ ಬಗ್ಗೆ ವೀರಶೈವ ಮುಖಂಡರ ಸಭೆ ಕರೆದು ತೀರ್ಮಾನಿಸುತ್ತೇವೆ’ ಎಂದು ದಿವ್ಯಾ ರಾಜೇಶ್‌ ಹಾಗರಗಿ ತಿಳಿಸಿದರು.

ಇದನ್ನೂ ಓದಿ:  ಉಲ್ಟಾ ಹೊಡೆದ ಶಾಮನೂರು ಜಯಮೃತ್ಯುಂಜಯ ಶ್ರೀ ಅಚ್ಚರ

ಗೊರಿಲ್ಲಾ ಎನ್ನಲಾಗುವುದಿಲ್ಲ: ಸಚಿವ ಎಂ.ಬಿ. ಪಾಟೀಲ
‘ಶಾಮನೂರು ಶಿವಶಂಕರಪ್ಪ ನನ್ನ ಬಗ್ಗೆ ‘ಮಂಗ’ ಎಂಬ ಶಬ್ದ ಬಳಸಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಹಾಗೆಂದು ನಾನು ಅವರನ್ನು ದೊಡ್ಡ ಮಂಗ್ಯಾ ಅಥವಾ ಗೊರಿಲ್ಲಾ ಎನ್ನಲಾಗುವುದಿಲ್ಲ. ಅದು ಅವರ ಸಂಸ್ಕೃತಿ, ಸಣ್ಣತನ, ಚಿಲ್ಲರೆ ಬುದ್ಧಿ ಬಿಂಬಿಸುತ್ತದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಇಲ್ಲಿ ತಿರುಗೇಟು ನೀಡಿದರು.

‘ಶಿವಶಂಕರಪ್ಪ ಹೇಳಿದಂತೆ ಅವರಾಗಲೀ, ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಆಗಲಿ ನನ್ನನ್ನು ಬೆಳೆಸಿಲ್ಲ. ಬದಲಿಗೆ ನನ್ನ ತಂದೆಯ ಆಶೀರ್ವಾದದಿಂದ ನಾನು ಬೆಳೆದಿದ್ದೇನೆ’ ಎಂದರು.

‘ಬಸವಣ್ಣನವರು ಸಪ್ತಶೀಲಗಳಲ್ಲಿ, ಇದಿರ ಹಳಿಯಲು ಬೇಡ ಎಂದಿದ್ದಾರೆ. ಹಾಗಾಗಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಬೈದರೂ ಅದನ್ನು ಆಶೀರ್ವಾದ ಎಂದು ತೆಗೆದುಕೊಳ್ಳುತ್ತೇನೆ’ ಎಂದರು.

**

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಅಂಜಿರುವ ಪ್ರಧಾನಿ ಮೋದಿ, ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಬರಬಾರದು ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ
–ಎಂ.ಬಿ.ಪಾಟೀಲ, ಗೃಹ ಸಚಿವ

**

ಪ್ರಧಾನಿ ಸ್ಥಾನದಲ್ಲಿರುವ ಮೋದಿ, ಒಂದು ರಾಜ್ಯದ ಮುಖ್ಯಮಂತ್ರಿ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಸರ್ಕಾರ ಮಾಡಿದ್ದಾಗ ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇತ್ತು ಎಂಬುದನ್ನು ಮರೆಯಬಾರದು
–ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !