ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣ: ಯೋಜನಾ ವೆಚ್ಚ ₹150 ಕೋಟಿಗೆ ಏರಿಕೆ?

ಕಾಮಗಾರಿಗೆ 4 ಜಿ ವಿನಾಯ್ತಿ
Last Updated 14 ಡಿಸೆಂಬರ್ 2019, 21:39 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನಾ ವೆಚ್ಚವನ್ನು ₹40 ಕೋಟಿಗಳಿಂದ ₹150 ಕೋಟಿಗೆ ಏರಿಸುವ ಜತೆಯಲ್ಲಿ, ಗುತ್ತಿಗೆದಾರರಿಗೆ 4 ಜಿ ವಿನಾಯಿತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತ ಸಭೆಯಲ್ಲಿ ವಿಮಾನ ನಿಲ್ದಾಣ, ರಸ್ತೆ, ರೈಲ್ವೆ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಭೆಯಲ್ಲಿ ಯೋಜನಾ ವೆಚ್ಚ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ರೂಪುಗೊಂಡಿತ್ತು. 2011ರಲ್ಲಿ ₹40 ಕೋಟಿ ಇದ್ದ ಮೊತ್ತವನ್ನು 8 ವರ್ಷಗಳಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಪ್ರವಾಹ, ಭೂಕಂಪ, ಚಂಡಮಾರುತ, ಬೆಂಕಿ ಅವಘಡದಂತಹ ನೈಸರ್ಗಿಕ ವಿಕೋಪ ಸಂಭವಿಸಿದಾಗ ತುರ್ತು ಪರಿಹಾರ ಕೈಗೊಳ್ಳಲಾಗುತ್ತದೆ. ಯಾವುದಾದರೂ ಕಾಮಗಾರಿಗಳನ್ನು ಅತಿ ತುರ್ತಾಗಿ ಕೈಗೊಳ್ಳಬೇಕಾಗುತ್ತದೆ.

ಅಂತಹ ಹೊತ್ತಿನಲ್ಲಿ ಟೆಂಡರ್‌, ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ ಕಾಯ್ದೆಯ ನಿಯಮಗಳ ಅಡೆತಡೆ ಬರಬಾರದು ಎಂಬ ಕಾರಣಕ್ಕೆ 4 ಜಿ ಅಡಿ ವಿನಾಯ್ತಿ ನೀಡುವ ಪರಿಪಾಟ ಇದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಈ ಹೊತ್ತಿನಲ್ಲಿ 4 ಜಿ ವಿನಾಯಿತಿ ನೀಡುವ ತುರ್ತು ಏನಿದೆ ಎಂಬ ಪ್ರಶ್ನೆಗಳೂ ಎದ್ದಿವೆ.

ರನ್‌ವೇ ಉದ್ದವನ್ನು ಈ ಹಿಂದೆ ಉದ್ದೇಶಿಸಿದ್ದ 1.20 ಕಿ.ಮೀ ಯಿಂದ 2.10 ಕಿ.ಮೀಗೆ ಹೆಚ್ಚಿಸಲು ಹಾಗೂ ಇದಕ್ಕೆ ಆಗಲಿರುವ ವೆಚ್ಚವನ್ನು ರಾಜ್ಯ ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಯಿತು.

₹45 ಕೋಟಿ ವೆಚ್ಚದಲ್ಲಿ ‘ಸ್ವಾತಂತ್ರ್ಯ ಉದ್ಯಾನ’
ಶಿವಮೊಗ್ಗ ನಗರದಲ್ಲಿರುವ ಹಳೆ ಜೈಲಿನ ಆವರಣದಲ್ಲಿ ಬೆಂಗಳೂರಿನ ಮಾದರಿಯಲ್ಲಿ ಸ್ವಾತಂತ್ರ್ಯ ಉದ್ಯಾನ ನಿರ್ಮಿಸುವ ಯೋಜನೆಗೆ ಸಭೆ ಅನುಮೋದನೆ ನೀಡಿದೆ.

ಈ ಯೋಜನೆಗೆ ₹45 ಕೋಟಿ ವೆಚ್ಚವಾಗಲಿದ್ದು, ಹಳೆ ಜೈಲು ಆವರಣವನ್ನು ಜನಾಕರ್ಷಣೆಯ ಕೇಂದ್ರವಾಗಿ ರೂಪಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT