ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿನಗರ ಅಖಾಡದಲ್ಲೊಂದು ಸುತ್ತು| ಕಾಂಗ್ರೆಸ್‌–ಬಿಜೆಪಿ ನೇರ ಪೈಪೋಟಿ

ಶಿವಾಜಿನಗರ ಕಾಂಗ್ರೆಸ್‌ ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಹರ ಸಾಹಸ
Last Updated 1 ಡಿಸೆಂಬರ್ 2019, 10:21 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ– ಪುಟ್ಟ ವ್ಯಾಪಾರಿಗಳು, ಬಡ ಮತ್ತು ಕೆಳ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯ ಮತದಾರರಿರುವ ಕ್ಷೇತ್ರವಿದು. ತಮಿಳು ಭಾಷಿಕರು, ಮುಸ್ಲಿಂ ಮತ್ತು ಕ್ರೈಸ್ತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಶಿವಾಜಿನಗರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎನಿಸಿದೆ.

ಈ ಬಾರಿ ಕಾಂಗ್ರೆಸ್‌ ಕೋಟೆಗೆ ಲಗ್ಗೆ ಹಾಕಿ, ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ತನ್ನ ರಣತಂತ್ರ ಬದಲಿಸಿಕೊಂಡಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಟಿಕೆಟ್‌ ನೀಡದೇ, ಪಕ್ಷಕ್ಕೆ ಹೊಸಬರಾದ ಎಂ.ಸರವಣ ಅವರನ್ನು ಕಣಕ್ಕಿಳಿಸಿದೆ. ಇವರು ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದು ಪಳಗಿದವರು. ಕ್ಷೇತ್ರದಲ್ಲಿರುವ ಸುಮಾರು 35 ಸಾವಿರ ತಮಿಳು ಭಾಷಿಕ ಮತದಾರರ ಮೇಲೆ ಕಣ್ಣಿಟ್ಟು ಇವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಎಲ್ಲೆಡೆ ಇದೆ. ಹಿಂದು ಮತ್ತು ತಮಿಳು ಮತದಾರರ ನೆಲೆಯಲ್ಲಿ ಅದೃಷ್ಟ ಪರೀಕ್ಷಿಸಲು ಬಿಜೆಪಿ ಮುಂದಾಗಿದೆ.

ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್ ಅರ್ಷದ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಹಿಂದೆ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದ ರಿಜ್ವಾನ್‌ ಈಗ ವಿಧಾನಸಭೆ ಪ‍್ರವೇಶಿಸುವ ಪರೀಕ್ಷೆಗೆ ಒಡ್ಡಿ ಕೊಂಡಿದ್ದಾರೆ. ಬೇಗ್‌ ಹಿಡಿತದಲ್ಲಿರುವ ಶಿವಾಜಿನಗರವನ್ನು ಗೆಲ್ಲಬೇಕಾದರೆ ಮುಸ್ಲಿಂ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬ ಕಾರಣದಿಂದ ರಿಜ್ವಾನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಏಳು ಬಿಬಿಎಂಪಿ ವಾರ್ಡ್‌ಗಳಿದ್ದು, ಅದರಲ್ಲಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್‌ ಐದು ಸದಸ್ಯರನ್ನು ಹೊಂದಿದೆ. ಐವರಲ್ಲಿ ನಾಲ್ಕು ಮಂದಿ ಬೇಗ್‌ ಅವರ ಪರವಾಗಿದ್ದು, ಇವರಲ್ಲಿ ಮೂವರು ತೆರೆಯ ಮರೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ತಟಸ್ಥರಾಗಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬೇಗ್‌ ವಿರುದ್ಧ ಕ್ಷೇತ್ರದ ಮತದಾರರು ಆಕ್ರೋಶಗೊಂಡಿದ್ದಾರೆ. ಅದನ್ನು ತನ್ನ ಪರ ಮತವಾಗಿ ತಿರುಗಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ. ಸ್ಥಳೀಯರಲ್ಲದ ಅರ್ಷದ್‌ಗೆ ಟಿಕೆಟ್‌ ನೀಡಿದ ಬಗ್ಗೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ನಾಯಕರು ಅದಕ್ಕೆ ಸೊಪ್ಪು ಹಾಕಿಲ್ಲ. ರೋಷನ್‌ ಬೇಗ್‌ ವಿರುದ್ಧ ಮತದಾರರಲ್ಲಿ ಆಕ್ರೋಶ ಇರುವುದರಿಂದ ಮುಸ್ಲಿಂ ಸಮುದಾಯ ರಿಜ್ವಾನ್‌ ಅವರನ್ನು ಬೆಂಬಲಿಸುತ್ತಾರೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಬಿಜೆಪಿ ಅಭ್ಯರ್ಥಿ ಸರವಣ ಅವರ ಪತ್ನಿ ಬಿಬಿಎಂಪಿಯಲ್ಲಿ ಪಕ್ಷೇತರ ಸದಸ್ಯೆ. ಇವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ತಮಿಳು ಮತದಾರರಲ್ಲಿ ಸರವಣ ಸಾಕಷ್ಟು ಹಿಡಿತ ಹೊಂದಿರುವುದರಿಂದ ಪಕ್ಷಕ್ಕೆ ಕರೆ
ತಂದು ಟಿಕೆಟ್‌ ನೀಡಲಾಗಿದೆ. 2001 ರಿಂದ 2006 ರವರೆಗೆ ಹಲ ಸೂರು ವಾರ್ಡ್‌ನ ಬಿಬಿಎಂಪಿ ಸದಸ್ಯರೂ ಆಗಿದ್ದರು. ಆ ಬಳಿಕ ವಾರ್ಡ್‌ ಮೀಸಲಾತಿ ಬದಲಾಗಿದ್ದರಿಂದ ತಮ್ಮ ಸಹಾಯಕರೊಬ್ಬರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದರು. 2016 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದಾಗ, ತಮ್ಮ ಪತ್ನಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಕಾಂಕ್ಷಿಯಾಗಿದ್ದರು. ಆದರೆ, ಗೆಲ್ಲುವುದು ಕಷ್ಟ ಎಂಬ ಕಾರಣಕ್ಕೆ ತಂತ್ರಗಾರಿಕೆ ಬದಲಿಸಲಾಗಿದೆ. ಅದನ್ನು ಅವರಿಗೆ ಮನವರಿಕೆ ಮಾಡಿದ್ದರಿಂದ ಸರವಣಗೆ ಸ್ಪರ್ಧೆಗೆ ಒಪ್ಪಿಗೆ ನೀಡಿದರು.

ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ನೆರವು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೋಷನ್‌ ಬೇಗ್‌ ಅವರಲ್ಲಿ ಮನವಿ ಮಾಡಿದ್ದು, ಅದಕ್ಕೆ ಬೇಗ್‌ ಸಕಾರಾತ್ಮಕ ವಾಗಿ ಸ್ಪಂದಿಸಿ, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಜೆಡಿಎಸ್‌ನಿಂದ ತನ್ವೀರ್ ಅಹಮ್ಮದ್‌ ಉಲ್ಲಾ ಅವರನ್ನು ಕಣಕ್ಕೆ ಇಳಿಸಿದೆ. ಇವರು ಜೆಡಿಎಸ್‌ನ ರಾಷ್ಟ್ರೀಯ ವಕ್ತಾರ. ರಾಷ್ಟ್ರೀಯ ಇಂಗ್ಲಿಷ್‌ ಚಾನೆಲ್‌ಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.

ನೆಲೆ ಕಂಡುಕೊಳ್ಳದ ಜೆಡಿಎಸ್

ಕಾಂಗ್ರೆಸ್‌ ಮತ್ತು ಬಿಜೆಪಿ ಜತೆ ನೇರಾ ಹಣಾಹಣಿ ಏರ್ಪಟ್ಟಿದೆ. ಮುಸ್ಲಿಂ ಮತ್ತು ಕ್ರೈಸ್ತ ಮತದಾರರ ಸಂಖ್ಯೆ ಅಧಿಕವಾಗಿದ್ದರೂ ಜೆಡಿಎಸ್‌ ಈವರೆಗೂ ಇಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಶೇ 6 ಕ್ಕಿಂತ ಹೆಚ್ಚು ಮತವನ್ನು ಪಡೆಯಲು ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಈ ಬಾರಿ ಹೊಸಮುಖವನ್ನು ಪರಿಚಯಿಸಿದ್ದು ಇದರಿಂದ ತನ್ನ ಮತ ಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆ ಕೇಳಿಬಂದಿದೆ.

ಮತದಾರರ ಸಂಖ್ಯೆ

ಒಟ್ಟು ಮತದಾರರು;1,96,776

ಪುರುಷರು;99,969

ಮಹಿಳೆಯರು96,803

ಇತರೆ;4

2018 ರ ಫಲಿತಾಂಶ

ರೋಷನ್‌ ಬೇಗ್‌ (ಕಾಂಗ್ರೆಸ್‌);59,742(ಶೇ.55.06)

ಕಟ್ಟಾ ಸುಬ್ರಹ್ಮಣ್ಯನಾಯ್ಡು (ಬಿಜೆಪಿ);44,702(ಶೇ.41.20)

ಶೇಖ್‌ ಮಸ್ತಾನ್‌ ಅಲಿ (ಜೆಡಿಎಸ್‌);1,313(ಶೇ1.21)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT