ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೊರೊನಾ ವೈರಸ್‌ ವಿರುದ್ಧ ಹೋರಾಡಲು ವೆಂಟಿಲೇಟರ್‌ಗಳ ಕೊರತೆ

ಕೋವಿಡ್–19 ವಿರುದ್ಧದ ಯುದ್ಧಕ್ಕೆ ಅತ್ಯಂತ ಅಗತ್ಯ
Last Updated 31 ಮಾರ್ಚ್ 2020, 6:02 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಇರುವುದು ಮಾರಕ ‘ಕೋವಿಡ್–19’ ಕಾಯಿಲೆಯ ವಿರುದ್ಧದ ಹೋರಾಟಕ್ಕೆ ಸವಾಲಾಗಿ ಪರಿಣಮಿಸಲಿದೆ.

ಜಿಲ್ಲೆಯಲ್ಲಿ ‘ನಿಗಾ’ ವ್ಯವಸ್ಥೆಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈವರೆಗೆ 376 ಮಂದಿ ವಿದೇಶ ಹಾಗೂ ಹೊರಗಿನಿಂದ ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 226 ಮಂದಿಗೆ ಮನೆಗಳಲ್ಲಿ ಐಸೋಲೇಷನ್ ವ್ಯವಸ್ಥೆಯಲ್ಲಿರುವಂತೆ ಸೂಚಿಸಲಾಗಿದೆ. ಐವರು ಆಸ್ಪತ್ರೆಯಲ್ಲಿದ್ದಾರೆ. 122 ಮಂದಿ 14 ದಿನಗಳ ಹಾಗೂ 23 ಮಂದಿ 28 ದಿನಗಳ ನಿಗಾ ವ್ಯವಸ್ಥೆ ಪೂರೈಸಿದ್ದಾರೆ. 21 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ರವಾನಿಸಲಾಗಿತ್ತು. ಈವರೆಗೆ 18 ವರದಿಗಳು ‘ನೆಗೆಟಿವ್’ ಎಂದು ಬಂದಿವೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆದರೆ, ಕೊರೊನಾದ ಭೀತಿ ಕಡಿಮೆಯಾಗಿಲ್ಲ. ಒಂದೊಮ್ಮೆ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ರೋಗಿಯ ಪ್ರಾಣ ಕಾಪಾಡಿಕೊಳ್ಳಲು ನಡೆಸುವ ಪ್ರಯತ್ನದಲ್ಲಿ ವೆಂಟಿಲೇಟರ್‌ಗಳ ಲಭ್ಯತೆ ಮಹತ್ವದ್ದಾಗಿದೆ.

ಇತರ ರೋಗಿಗಳೂ ಉಂಟು: ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಸಮೀಪದ ಮಹಾರಾಷ್ಟ್ರದಿಂದಲೂ ರೋಗಿಗಳು ಬರುವುದುಂಟು. ಅಲ್ಲಿ ಪ್ರಸ್ತುತ 17 ವೆಂಟಿಲೇಟರ್‌ಗಳಷ್ಟೇ ಇವೆ. ಇವುಗಳನ್ನು ಕೋವಿಡ್‌–19 ಬಂದವರಿಗಷ್ಟೇ ಮೀಸಲಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಇತರ ಸಮಸ್ಯೆಗಳುಳ್ಳ ರೋಗಿಗಳಿಗೂ ಬಳಸಬೇಕಾಗುತ್ತದೆ. ಅಂತೆಯೇ, 9 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ವೆಂಟಿಲೇಟರ್‌ ವ್ಯವಸ್ಥೆಯಷ್ಟೆ ಇದೆ. ಈ ಕೊರತೆಯು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಾಣು ಸೋಂಕು ಹರಡುವಿಕೆ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚುವರಿ ವೆಂಟಿಲೇಟರ್‌ಗಳ ಪೂರೈಕೆಗೆ ಕೋರಿ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಈವರೆಗೂ ಕ್ರಮ ಕೈಗೊಂಡಿಲ್ಲ!

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ.ಅಪ್ಪಾಸಾಬ ನರಟ್ಟಿ, ‘ಕೋವಿಡ್–19 ಕಾಣಿಸಿಕೊಂಡ ಎಲ್ಲರಿಗೂ ವೆಂಟಿಲೇಟರ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ. 100 ಹಾಸಿಗೆಗಳ ಐಸೊಲೇಷನ್‌ ಘಟಕವಿದ್ದರೆ ಐದು ಬೇಕಾಗಬಹುದು. ಹೀಗಾಗಿ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೊರತೆ ಉಂಟಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬಳಸಬಹುದಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ವಿಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲೆಂದು ಹೆಚ್ಚುವರಿಯಾಗಿ 310 ವೆಂಟಿಲೇಟರ್‌ಗಳನ್ನು ಪೂರೈಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT