ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪಗೆ ಅಧಿಕಾರ ದಾಹ: ಸಿದ್ದರಾಮಯ್ಯ

Last Updated 10 ಮೇ 2019, 18:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಿ.ಎಸ್.ಯಡಿಯೂರಪ್ಪಗೆ ಅಧಿಕಾರದ ಲಾಲಸೆ, ಹೆಚ್ಚಾಗಿದೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾನೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಚಿಂಚೋಳಿ ತಾಲ್ಲೂಕು ಕೊಂಚಾವರಂನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು ನಮ್ಮ ಸಂಖ್ಯಾಬಲ 109ಕ್ಕೆ ಏರಿಕೆಯಾಗಲಿದೆ’ ಎಂಬ ಯಡಿಯೂರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. 113 ಸ್ಥಾನಗಳಲ್ಲಿ ಗೆದ್ದರೆ ತಾನೇ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ನ 20 ಶಾಸಕರಿಗೆ ರಾಜ್ಯ ಸರ್ಕಾರದ ಬಗ್ಗೆ ಅತೃಪ್ತಿ ಇದ್ದು, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು’ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ನಮ್ಮಲ್ಲಿ ಅತೃಪ್ತರು ಯಾರೂ ಇಲ್ಲ. ಇರುವ ಅತೃಪ್ತರೆಲ್ಲರೂ ಬಿಜೆಪಿಯಲ್ಲೇ ಇದ್ದಾರೆ ಎಂದರು.

‘ಲಜ್ಜೆಗೆಟ್ಟ ಜಾಧವಗೆ ಮತ ಕೊಡಬೇಡಿ’
‘ಸಂತೆಗಳಲ್ಲಿ ಕೋಳಿ, ಕುರಿ, ದನಗಳನ್ನು ಮಾರಾಟ ಮಾಡೋದು, ಖರೀದಿ ಮಾಡುವುದನ್ನು ನಾನು ನೋಡಿದ್ದೇನೆ. ಆದರೆ, ಶಾಸಕರನ್ನೇ ಖರೀದಿ ಮಾಡಿದ್ದನ್ನು ನೋಡಿರಲಿಲ್ಲ. ಹಾಗೆ ಮಾರಾಟವಾದ, ಲಜ್ಜೆಗೆಟ್ಟ ಜಾಧವಗೆ ಯಾವ ಕಾರಣಕ್ಕೂ ಮತ ಕೊಡಬೇಡಿ. ಅವರ ಮಗನನ್ನು ಗೆಲ್ಲಿಸಬೇಡಿ’ ಎಂದು ಸಿದ್ದರಾಮಯ್ಯ ಹೇಳಿದರು.

‘2018ರಲ್ಲಿ ಯಾವ ಪಕ್ಷದ ವಿರುದ್ಧ ನಿಂತು ಗೆದ್ದು ಬಂದಿದ್ದನೋ ಈಗ ಅದೇ ಪಕ್ಷದ ಟಿಕೆಟ್ ಪಡೆದು ಚುನಾವಣೆಗೆ ನಿಂತಿದ್ದಾನಲ್ಲ, ಅವನಿಗೆ ಮಾನ ಮರ್ಯಾದೆ ಇದೆಯಾ’ ಎಂದು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ, ಖರ್ಗೆ ಬಿರುಸಿನ ಪ್ರಚಾರ
ಕಲಬುರ್ಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಪರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಂ.ಬಿ.ಪಾಟೀಲ,ಪ್ರಿಯಾಂಕ್ ಖರ್ಗೆ, ರಹೀಂಖಾನ್, ಪಿ.ಟಿ.ಪರಮೇಶ್ವರ ನಾಯಕ್ ಅವರು ಬಿರುಸಿನ ಪ್ರಚಾರ ನಡೆಸಿದರು.

ಕೊಂಚಾವರಂ, ಐನೋಳ್ಳಿ, ಚಿಮ್ಮನಚೋಡ್ ಹಾಗೂ ಕಾಳಗಿಯಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಡಾ.ಉಮೇಶ ಜಾಧವ ವಿರುದ್ಧ ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ಕಿವಿ ಹಿಂಡಿದ ಸಿದ್ದರಾಮಯ್ಯ!
ಭಾಷಣದ ವೇಳೆ ತಮ್ಮ ಪಕ್ಕದಲ್ಲೇ ನಿಂತಿದ್ದ ಸುಭಾಷ ರಾಠೋಡ ಕಿವಿ ಹಿಂಡಿದ ಸಿದ್ದರಾಮಯ್ಯ, ‘ಈತ ಮೊದಲು ಜೆಡಿಎಸ್‌ನಲ್ಲಿದ್ದ. ಆ ಬಳಿಕ ಕಾಂಗ್ರೆಸ್‌ಗೆ ಬಂದು, ಬಿಜೆಪಿಗೆ ಹೋದ. ಈಗ ಮತ್ತೆ ಕಾಂಗ್ರೆಸ್‌ ಪಕ್ಷ ಸೇರಿದ್ದಾನೆ. ಇನ್ನು ಮೇಲೆ ಇಲ್ಲಿಯೇ ಇರುತ್ತಾನೆ. ಹೀಗಾಗಿ ಇದೊಂದು ಬಾರಿ ಅವಕಾಶ ಮಾಡಿಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT