ಸರ್ಕಾರ ಬೀಳುತ್ತೆ ಎಂದಿಲ್ಲ: ಸಿದ್ದರಾಮಯ್ಯ

ಮಂಗಳವಾರ, ಏಪ್ರಿಲ್ 23, 2019
27 °C
‘ಸರ್ಕಾರ ಉರುಳಿಸುವುದು ಗೋಲಿ ಆಟ ಅಲ್ಲ’

ಸರ್ಕಾರ ಬೀಳುತ್ತೆ ಎಂದಿಲ್ಲ: ಸಿದ್ದರಾಮಯ್ಯ

Published:
Updated:
Prajavani

ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಹಿನ್ನಡೆಯಾದರೆ ಸರ್ಕಾರ ಬೀಳುತ್ತೆ ಎಂದಿಲ್ಲ. ಬಿಜೆಪಿಯು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತದೆ ಎಂದಷ್ಟೇ ಹೇಳಿದ್ದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಸೋಮವಾರ ಸ್ಪಷ್ಟನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ಮುಂದುವರಿಯಲಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಪ್ರಚಾರದ ವೇಳೆ ಮಾತನಾಡುವ ಸಂದರ್ಭ ಸಿದ್ದರಾಮಯ್ಯ ಅವರು, ‘ಲೋಕಸಭೆ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇಲ್ಲದಿದ್ದರೆ ಸರ್ಕಾರ ಇರುತ್ತಾ?’ ಎಂದಿದ್ದರು.

‘ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದಿದ್ದೇನೆ. ಅಲ್ಲಿನ ಜನರ ಋಣ ತೀರಿಸಿದ್ದೇನೆ. ಮುಂದಿನ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಇವೆ. ಆಗ ನೋಡೋಣ’ ಎಂದು ಹೇಳಿದರು.

ಕಾಲಾವಕಾಶ ಕೇಳಿದ್ದೇನೆ: ‘ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಕ್ಕೆ ನನಗೂ ನೋಟಿಸ್‌ ಕೊಟ್ಟಿದ್ದಾರೆ. ಚುನಾವಣೆ ಪ್ರಚಾರದಲ್ಲಿ ತೊಡಗಿರುವುದರಿಂದ ಉತ್ತರಿಸಲು ಆಗುತ್ತಿಲ್ಲ. ಉತ್ತರಿಸಲು 15 ದಿನ ಸಮಯಾವಕಾಶ ಕೊಡಬೇಕೆಂದು ಕೇಳಿದ್ದೇನೆ’ ಎಂದರು.

ಯಡಿಯೂರಪ್ಪ ಒಬ್ಬ ಲೀಡರಾ?: ‘ಮೈತ್ರಿ ಸರ್ಕಾರವನ್ನು ಉರುಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾ ಬಂದಿದ್ದಾನೆ. ಅವ ಹೇಗೆ ಉರುಳಿಸುತ್ತಾನೆ? ಸರ್ಕಾರ ಉರುಳಿಸುವುದೆಂದರೆ ಅದೇನು ಗೋಲಿ ಆಟನಾ, ಬಿಜೆಪಿಗೆ ತತ್ವ ಸಿದ್ಧಾಂತ ಇದೆನಾ, ಅದೊಂದು ರಾಜಕೀಯ ಪಕ್ಷನಾ, ಅವನೊಬ್ಬ ಲೀಡರಾ’ ಎಂದು ವಾಗ್ದಾಳಿ ನಡೆಸಿದರು.

‘ಮೂಡ್‌ ಬರೋದು ಬೇರೆ ಕೆಲಸಗಳಿಗೆ’

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಜತೆ ಜಂಟಿ ಪ್ರಚಾರ ನಡೆಸಿದ್ದರಿಂದ ಅಲ್ಲಿನ ಮತದಾರರ ಮೂಡ್‌ ಬದಲಾಗಿದೆಯೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ, ಮೂಡ್ ಎಂದರೇನು? ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲು ಮತದಾರರು ತೀರ್ಮಾನಿಸಿದ್ದಾರೆ. ಜನರ ಅಭಿಪ್ರಾಯ ಬದಲಾಗಿದೆ. ಅದನ್ನು ಮೂಡ್‌ ಅನ್ನಲ್ಲ. ಮೂಡ್‌ ಬರೋದು ಬೇರೆ ಬೇರೆ ಕೆಲಸಗಳಿಗೆ’ ಎಂದು ನಗು ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !