ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ನೌಕರರ ಬಡ್ತಿಗೆ ತರಾತುರಿ: ಹಿಂಬಡ್ತಿ ಭೀತಿಯ ಐಎಎಸ್ ಅಧಿಕಾರಿಯಿಂದ ಪ್ರಕ್ರಿಯೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರಕ್ರಿಯೆ
Last Updated 2 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ನಡುವೆಯೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 400 ಹಾಸ್ಟೆಲ್‌ ಮೇಲ್ವಿಚಾರಕರಿಗೆ
ತರಾತುರಿಯಲ್ಲಿ ಮುಂಬಡ್ತಿ ನೀಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನೌಕರರಿಗೆ ಮುಂಬಡ್ತಿ ನೀಡುವ ಕುರಿತಂತೆ, ಇಲಾಖೆಯ ಆಯುಕ್ತ ಪಿ. ವಸಂತಕುಮಾರ್‌ ಅವರು ನ. 26ರಂದು ಎಲ್ಲ ಜಿಲ್ಲೆಗಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಿಂಬಡ್ತಿ ಭೀತಿ ಎದುರಿಸುತ್ತಿರುವ 11 ಐಎಎಸ್‌ ಅಧಿಕಾರಿಗಳಲ್ಲಿ ವಸಂತಕುಮಾರ್‌ ಕೂಡಾ ಒಬ್ಬರಾಗಿದ್ದು, ಅವರ ಈ ನಡೆ ಇಲಾಖೆಯ ಒಳಗೆ ಚರ್ಚೆಗೆ ಗ್ರಾಸವಾಗಿದೆ.

ಮುಂಬಡ್ತಿಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ನೌಕರರಿಗೆ ಸಂಬಂಧಿಸಿದ ವಿವರಗಳನ್ನು ‘ಜರೂರು’ (ಕೇವಲ ಮೂರು ದಿನಗಳಲ್ಲಿ) ಆಗಿ ಕಳುಹಿಸುವಂತೆ ವಸಂತ ಕುಮಾರ್‌ ಸೂಚಿಸಿದ್ದಾರೆ. ಆದರೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಡ್ತಿ ಪ್ರಕ್ರಿಯೆ ಆರಂಭವಾಗಿರುವ ಬಗ್ಗೆ ಹಿಂದುಳಿದ ವರ್ಗಗಳ ಸಚಿವ ಬಿ. ಶ್ರೀರಾಮುಲು ಮತ್ತು ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್‌ ಅವರಿಗೆ ಮಾಹಿತಿಯೇ ಇಲ್ಲ.

ಹಾಸ್ಟೆಲ್‌ ಮೇಲ್ವಿಚಾರಕ ಹುದ್ದೆಯಿಂದ ವ್ಯವಸ್ಥಾಪಕ ಮತ್ತು ವಿಸ್ತರಣಾಧಿಕಾರಿ ಹುದ್ದೆಗಳಿಗೆ ಬಡ್ತಿಗೆ ಅರ್ಹರಾದವರ ಪಟ್ಟಿಯನ್ನು ಆಯುಕ್ತಾಲಯ ಸಿದ್ಧಪಡಿಸಿದೆ. ನ. 29ರ ಒಳಗಾಗಿ ಈ ನೌಕರರ ಸೇವಾ ಪುಸ್ತಕ, ಇಲಾಖಾ ಪರೀಕ್ಷೆ ಉತ್ತೀರ್ಣರಾಗಿರುವ ಪ್ರಮಾಣ ಪತ್ರ, ಇಲಾಖಾ ವಿಚಾರಣೆ, ಲೋಕಾಯುಕ್ತ ಮೊಕದ್ದಮೆ ಸೇರಿದಂತೆ ಎಲ್ಲ ವಿವರಗಳನ್ನು ದೃಢೀಕರಿಸಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಈ ನೌಕರರ 2014ರಿಂದ 2019ರವರೆಗಿನ ಐದು ವರ್ಷಗಳ ಕಾರ್ಯನಿರ್ವಹಣಾ ವರದಿಯನ್ನೂ ಪ್ರಸ್ತಾವನೆಯ ಜೊತೆಗೆ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಆಶ್ಚರ್ಯವೆಂದರೆ, ಬಡ್ತಿಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹುದ್ದೆಯಿಂದ ಈಗಾಗಲೇ ನಿವೃತ್ತಿಯಾದವರು ಮತ್ತು ಮೃತಪಟ್ಟವರು ಇದ್ದಾರೆ. ಕೆಲವರು ಇಲಾಖಾ ವಿಚಾರಣೆ ಎದುರಿಸುತ್ತಿದ್ದಾರೆ. ಪಟ್ಟಿಯನ್ನು ಪರಿಶೀಲಿಸದೆ ತರಾತುರಿಯಲ್ಲಿ ಬಡ್ತಿ ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಸಂದೇಹಗಳನ್ನು ಹುಟ್ಟುಹಾಕಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯ ಬಗ್ಗೆಯೂ ಇಲಾಖೆಯ ಒಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಹೆಸರೂ ಪಟ್ಟಿಯಲ್ಲಿದೆ. ಹೀಗಾಗಿ, ಈ ಪ್ರಕ್ರಿಯೆ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇಲಾಖೆಯ ಆಯುಕ್ತ ವಸಂತಕುಮಾರ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು, ಕರೆ ಸ್ವೀಕರಿಸಲಿಲ್ಲ.

ಹಳೆ ನಿಯಮದಲ್ಲಿ ಮುಂಬಡ್ತಿ?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಸೆ. 30ರಂದು ಗೆಜೆಟ್‌ ಹೊರಡಿಸಲಾಗಿದೆ. ಈ ತಿದ್ದುಪಡಿ ಪ್ರಕಾರ, ಮುಂಬಡ್ತಿ ನೀಡಲು ಹುದ್ದೆಯಲ್ಲಿ ಐದು ವರ್ಷ ಕರ್ತವ್ಯ ನಿರ್ವಹಿಸಿರಬೇಕು. ಆದರೆ, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಯಿಂದ ಬಡ್ತಿ ನೀಡಲು ಹಳೆಯ ವೃಂದ ಮತ್ತು ನೇಮಕಾತಿ ನಿಯಮದ (ಮೂರು ವರ್ಷ ಕರ್ತವ್ಯ ನಿರ್ವಹಿಸಬೇಕು) ಪ್ರಕಾರ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

***

ಇಲಾಖೆಯಲ್ಲಿರುವ ನೌಕರರಿಗೆ ಬಡ್ತಿ ನೀಡುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಬೇಕಾಗಿದೆ

– ಮೊಹಮ್ಮದ್‌ ಮೊಹಿಸಿನ್‌, ಕಾರ್ಯದರ್ಶಿ, ಹಿಂದುಳಿದ ರ್ವಗಗಳ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT