ಭಾನುವಾರ, ಸೆಪ್ಟೆಂಬರ್ 20, 2020
22 °C

ಸಂವಿಧಾನ ಬದ್ಧವಾಗಿ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈವರೆಗೆ ರಾಜೀನಾಮೆ ನೀಡಿರುವ 14 ಶಾಸಕರಲ್ಲಿ, ಐವರು ಶಾಸಕರ ರಾಜೀನಾಮೆ ಮಾತ್ರ ಕ್ರಮ ಬದ್ಧವಾಗಿದೆ. ಉಳಿದ ಎಂಟು ಶಾಸಕರು ಕ್ರಮ ಬದ್ಧಗೊಳಿಸಿದ ರಾಜೀನಾಮೆ ಪತ್ರವನ್ನು ಮತ್ತೊಮ್ಮೆ ಸಲ್ಲಿಸಬಹುದು ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ತಿಳಿಸಿದರು.

ರಾಜೀನಾಮೆ ಪತ್ರಗಳ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾನು ಸಂವಿಧಾನ ಬದ್ಧವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತೇನೆ. ಯಾರಲ್ಲೂ ಸಂದೇಹಕ್ಕೆ ಅವಕಾಶ ಇರಬಾರದು’ ಎಂದರು.

‘ಇದೇ 6 ರಂದು ಮಧ್ಯಾಹ್ನ 12.30 ರವರೆಗೆ ಕಚೇರಿಯಲ್ಲೇ ಇದ್ದೆ. ಆವರೆಗೆ ಯಾವುದೇ ಶಾಸಕ ನನ್ನ ಬಳಿ ಬರಲಿಲ್ಲ. ಕಚೇರಿಯಿಂದ ಹೊರಗೆ ಹೋದ ಬಳಿಕ 13 ಶಾಸಕರು ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದರು. ಇವತ್ತು ಕಚೇರಿಗೆ ಬಂದ ನಂತರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದೆ. ಐವರು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿತ್ತು. ಉಳಿದವು ಕ್ರಮಬದ್ಧವಾಗಿರಲಿಲ್ಲ. ಅವರಿಗೆ ತಿಳಿವಳಿಕೆ ಪತ್ರಗಳನ್ನು ಕಳುಹಿಸಿದ್ದೇನೆ’ ಎಂದರು.

ಕ್ರಮಬದ್ಧವಾಗಿರುವ ಆನಂದ್‌ ಸಿಂಗ್‌, ಪ್ರತಾಪ ಗೌಡ ಪಾಟೀಲ, ನಾರಾಯಣಗೌಡ ಅವರಿಗೆ ಇದೇ 12 ರಂದು ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ. ರಾಮ ಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರಿಗೆ ಇದೇ 15 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ರಮೇಶ್‌ ಕುಮಾರ್‌ ಹೇಳಿದರು.

ಶಾಸಕರು ರಾಜೀನಾಮೆ ನೀಡಿರುವ ವಿಚಾರದಲ್ಲಿ ಅಸಮಾಧಾ ವ್ಯಕ್ತಪಡಿಸಿ, ಬಡವರು, ಬೀದಿ ವ್ಯಾಪಾರಿಗಳೂ ಬಂದು ದೂರು ನೀಡಿದ್ದಾರೆ. ‘ನಾವು ದುಡಿದು ತಿನ್ನುವವರು, ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಮುಂದಾದರೆ ತೆರಿಗೆ ಹಣ ವ್ಯರ್ಥವಾಗುತ್ತದೆ’ ಎಂದು ದೂರಿನಲ್ಲಿ ತಿಳಿಸಿದರೆ, ಇನ್ನು ಕೆಲವರು ‘ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಶಾಸಕರು ಕಣ್ಣಾ ಮುಚ್ಚಾಲೆ ಆಡುವುದು ಸರಿಯಲ್ಲ’ ಎಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ದೂರುಗಳ ವಿಚಾ ರಣೆ ನಡೆಸಲಾಗುವುದು ಎಂದು ಹೇಳಿ ದರು.

ರಮೇಶ್‌ ಜಾರಕಿಹೊಳಿ, ಮಹೇಶ ಕುಮಟಳ್ಳಿ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಸಂಬಂಧ ಕಾಂಗ್ರೆಸ್‌ ಪಕ್ಷ ಈ ಹಿಂದೆಯೇ ದೂರು ನೀಡಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತೊಮ್ಮೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇದೇ 11 ರಂದು ಸೂಕ್ತ ಸಾಕ್ಷ್ಯಗಳನ್ನೂ ಸಲ್ಲಿಸುವಂತೆ ತಿಳಿಸಿದ್ದೇನೆ. ಬಳಿಕ ಅನರ್ಹತೆ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅವರು ವಿವರಿಸಿದರು.

‘13 ಶಾಸಕರು ತಮ್ಮ ಬಳಿ ಬಂದು ರಾಜೀನಾಮೆ ನೀಡಿರುವ ಬಗ್ಗೆ ರಾಜ್ಯಪಾಲರು ನನಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪತ್ರದಲ್ಲಿ ಸೂಚಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ಉತ್ತರ ಬರೆದಿದ್ದು, ನಾನು ಇಲ್ಲದೇ ಇರುವ ಸಂದರ್ಭದಲ್ಲಿ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದೇನೆ’ ಎಂದರು. ‘ಪಕ್ಷೇತರ ಶಾಸಕ ಎನ್‌. ನಾಗೇಶ್ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿ, ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿರುವ ಬಗ್ಗೆ  ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದರು. ರಾಜ್ಯಪಾಲರು ಆ ಪತ್ರವನ್ನು ನನಗೆ ಕಳಿಸಿದ್ದರು.

ಅದನ್ನು ನನಗೆ ಯಾಕೆ ಕಳಿಸಿದ್ದಾರೆ ಎಂಬುದು ಗೊತ್ತಿಲ್ಲ. ಅದನ್ನು ಮುಖ್ಯಮಂತ್ರಿಗೆ ಕಳಿಸಬೇಕಿತ್ತು. ಇನ್ನೊಬ್ಬ ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರೂ ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಈ ವಿಷಯಗಳು ನನಗೆ ಸಂಬಂಧಪಟ್ಟಿದ್ದಲ್ಲ’ ಎಂದರು.

ಶಾಸಕರ ಅನರ್ಹತೆಗೆ ಕಾಂಗ್ರೆಸ್‌ ಮನವಿ
ಅತೃಪ್ತ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಉಳಿದ ಶಾಸಕರನ್ನು ಅನರ್ಹಗೊಳಿಸುವಂತೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಮನವಿ ಸಲ್ಲಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿಯೇ ಈ ಶಾಸಕರನ್ನು ಅನರ್ಹಗೊಳಿಸಬೇಕು. ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಅದರ ಫಲ ಅನುಭವಿಸಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು