ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆಶೋತ್ತರಗಳಿಗೆ ಸ್ಪಂದನೆ: ಸಭಾಧ್ಯಕ್ಷರ ಆಶಯ

ಸಂವಿಧಾನ ಕುರಿತ ಚರ್ಚೆಗೆ ಚಾಲನೆ
Last Updated 3 ಮಾರ್ಚ್ 2020, 19:13 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ಆಶೋತ್ತರಗಳಿಗೆ ಸ್ಪಂದಿಸಲು ದೃಢ ಸಂಕಲ್ಪದೊಂದಿಗೆ ಸಂವಿಧಾನ ರಚನೆಕಾರರ ಆಶಯ ಈಡೇರಿಸುವುದು ನಮ್ಮ ಕರ್ತವ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಾಂಗ್ರಸ್‌ ಸದಸ್ಯರ ಧರಣಿ ಮತ್ತು ಪ್ರತಿಭಟನೆಯ ಮಧ್ಯೆ ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಾಸ್ತಾವಿಕ ಭಾಷಣದ ಪ್ರತಿ ಓದಿದ ಅವರು, ‘ಭ್ರಷ್ಟಾಚಾರ, ಅಸಮಾನತೆಯ ವಾತಾವರಣ ನಿಮೂರ್ಲನೆ ಮಾಡುವ ಜವಾಬ್ದಾರಿ ಮತ್ತು ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಬೇರೂರಿದೆ’ ಎಂದರು.

‘ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ’ ಎಂದರು.

‘ಜನಪ್ರತಿನಿಧಿಗಳಾದ ನಾವು ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕ ಗುಣಗಳಿಂದ ಕಾರ್ಯ ನಿರ್ವಹಿಸಿ ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸೋಣ’ ಎಂದು ಕಾಗೇರಿ ಸಲಹೆ ನೀಡಿದರು.

‘ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿಯವರೆಗೂ ಪಾಲಿಸಬೇಕಾಗಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆ ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ. ಶಾಸನ ಸಭೆಯಲ್ಲಿ ನಾವು ವ್ಯಕ್ತಪಡಿಸುವ ನೈತಿಕತೆ ಎಂತಹದು ಎಂಬುದನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.

‘ನಮ್ಮ ನೈತಿಕತೆ ಸಾಂವಿಧಾನಿಕ ಹಾಗೂ ಮಾನಸಿಕ ನಡವಳಿಕೆಗೆ ಪೂರಕವಾಗಿರಬೇಕು. ಇದು ನಮ್ಮೆಲ್ಲರ ಹೊಣೆ’ ಎಂದು ಕಾಗೇರಿ ತಿಳಿಸಿದರು.

‘ಸಂವಿಧಾನವು ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಜತೆಗೆ ರಾಜಕೀಯ ಭಾಗವಹಿಸುವಿಕೆಯ ಮೀಸಲಾತಿಯನ್ನು ನೀಡಿದೆ. ಇದು ಹೆಮ್ಮೆಯ ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳನ್ನು ಅವರ ಮೂಲಭೂತ ಸಂಕಷ್ಟಗಳಿಂದ ಹೊರತರಲು ಸಂವಿಧಾನ ಮೀಸಲಾತಿ ವ್ಯವಸ್ಥೆ ಜಾರಿಗೆ ಜಾರಿ ಮಾಡಲಾಗಿದೆ’ ಎಂದರು.

ಕಾಂಗ್ರೆಸ್‌ ವಿರುದ್ಧ ಕಾಗೇರಿ ಗರಂ
‘ನಿಮ್ಮ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು.

ತಮ್ಮ ಭಾಷಣದ ಉದ್ದಕ್ಕೂ ಧರಣಿ ನಿರತ ಕಾಂಗ್ರೆಸ್‌ ಶಾಸಕರು ಅಡಚಣೆ ಮಾಡಿದ ಕಾರಣಕ್ಕೆ ಅವರು ಸಿಟ್ಟಿಗೆದ್ದಿದ್ದರು. ಏರಿದ ಧ್ವನಿಯಲ್ಲಿ ಮಾತನಾಡಿ, ‘ಸದನದಲ್ಲಿ ಒಂದು ರೀತಿ ನೀತಿ ಇರುತ್ತದೆ, ಸಭಾಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ’ ಎಂದರು.

‘ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದೆ. ಅದಕ್ಕೆ ನೀವು ಗೌರವ ತೋರಲಿಲ್ಲ, ಸಂವಿಧಾನಕ್ಕೆ ನೀವು ಗೌರವ ಕೊಡದಿದ್ದರೆ ಇನ್ನು ಯಾವುದಕ್ಕೆ ಗೌರವ ಕೊಡುತ್ತೀರಿ’ ಎಂದು ಅವರು ಪ್ರಶ್ನಿಸಿದರು.

‘ರಾಜ್ಯದಲ್ಲಿ 60 ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಪಕ್ಷದ ಹಿರಿಯರು ನಡೆದು ಕೊಳ್ಳುವ ರೀತಿ ಇದಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT