ಸೋಮವಾರ, ಸೆಪ್ಟೆಂಬರ್ 20, 2021
21 °C

'ಸಮ್ಮಿಶ್ರ ಸರ್ಕಾರ ಕೆಡವಲು ₹1,000 ಕೋಟಿ; ಕೋವಿಡ್‌ ಹೋರಾಟಕ್ಕೆ ₹200 ಕೋಟಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗವನ್ನೇ ಧರೆ ಗಿಳಿಸುತ್ತೇವೆ ಎಂದು ಬಿಜೆಪಿ ಸ್ನೇಹಿತರು ಹೇಳುತ್ತಿದ್ದರು. ಈಗ ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕೋವಿಡ್–19 ವಿರುದ್ಧದ ರಾಜ್ಯದ ಹೋರಾಟಕ್ಕೆ ಹಿನ್ನಡೆಯಾಗಿದೆ‘ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಕೆಡವಲು ಬಿಜೆಪಿಯವರು ₹1,000 ಕೋಟಿ ವ್ಯಯಿಸಿದ್ದರು. ಈಗ ಕೋವಿಡ್–19 ವಿರುದ್ಧದ ಹೋರಾಟಕ್ಕೆ ₹200 ಕೋಟಿ ಮೀಸಲಿಟ್ಟಿದ್ದಾರೆ. ಇದು ಹಾಸ್ಯಾಸ್ಪದ’ ಎಂದು ಛೇಡಿಸಿದರು.

‘ಜನವರಿ 30ರಂದು ದೇಶದ ಮೊದಲ ಕೋವಿಡ್–19 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಫೆಬ್ರುವರಿ 1 ರಿಂದಲೇ ವಿದೇಶದಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿಯೇ ಕಟ್ಟುನಿಟ್ಟಾಗಿ ತಪಾಸಣೆ ಮಾಡಿ, ಕ್ವಾರೆಂಟೈನ್‌ಗೆ ಒಳಪಡಿಸಿದ್ದರೆ ಇಷ್ಟೊಂದು ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ. ಕೋಟೆ ಕೊಳ್ಳೆ ಹೊಡೆದ ನಂತರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಕೇಂದ್ರ ಸರ್ಕಾರ ಪರಿಸ್ಥಿತಿ ಕೈಮೀರಿ ಹೋದ ಮೇಲೆ ಲಾಕ್‌ಡೌನ್ ಆದೇಶ ಮಾಡಿದೆ’ ಎಂದು ದೂರಿದರು.

‘ದೆಹಲಿ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ನಿಯಂತ್ರಣದಲ್ಲಿದೆ. ನಿಜಾಮುದ್ದೀನ್ ಪ್ರದೇಶದ ತಬ್ಲೀಗಿ ಜಮಾತ್‌ನ ಧಾರ್ಮಿಕ ಕಾರ್ಯಕ್ರಮಕ್ಕೆ ಅಲ್ಲಿ ಅಷ್ಟೊಂದು ಜನ ಜಮಾಯಿಸಿದ್ದಾರೆ ಎಂಬುದು ಅಮಿತ್‌ ಶಾ ಅವರಿಗೆ ಗೊತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದ ಎಸ್.ಆರ್.ಪಾಟೀಲ, ’ವಿದೇಶಿ ಧರ್ಮಗುರುಗಳಿಗೆ ಕಾರ್ಯಕ್ರಮಕ್ಕೆ ಬರಲು ಕೇಂದ್ರ ಸರ್ಕಾರ ವೀಸಾ ಕೊಟ್ಟಿದ್ದೇಕೆ‘ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು