ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ಪುತ್ರಿ ವಿವಾಹ: ಅದ್ಧೂರಿ ಸಿದ್ಧತೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ 5ರಂದು ಮದುವೆ
Last Updated 1 ಮಾರ್ಚ್ 2020, 20:08 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಹವಂಬಾವಿ ಪ್ರದೇಶದಲ್ಲಿರುವ ಸಚಿವ ಬಿ.ಶ್ರೀರಾಮುಲು ಅವರ ಬೃಹತ್‌ ಬಂಗಲೆಯಲ್ಲಿ ಅವರ ಮಗಳು ರಕ್ಷಿತಾ ಹಾಗೂ ಹೈದರಾಬಾದ್‌ನ ಶೆಟ್ಟಿಪಲ್ಲಿ ಲಲಿತ್‌ ಸಂಜೀವ ರೆಡ್ಡಿಯವರ ಅದ್ಧೂರಿ ಮದುವೆ ಸಂಭ್ರಮ ಮನೆ ಮಾಡಿದೆ.

ಮದುವೆಗಾಗಿಯೇ ಮನೆಯನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿದೆ. ಮದುವೆ ಶಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಕುತೂಹಲ ಇಮ್ಮಡಿಗೊಳಿಸಿವೆ.

ಜನಾರ್ದನರೆಡ್ಡಿ ಸಾಂಗತ್ಯ: ಉದ್ಯಮಿ ಜಿ.ಜನಾರ್ದನರೆಡ್ಡಿಯವರ ಸಾಂಗತ್ಯದಲ್ಲೇ ರಾಜಕೀಯ ಭವಿಷ್ಯ ರೂಪಿಸಿಕೊಂಡ ಶ್ರೀರಾಮುಲು, ತಮ್ಮ ಮಗಳ ಮದುವೆ ಸಂದರ್ಭದಲ್ಲೂ ಅವರ ಸಾಂಗತ್ಯದಲ್ಲೇ ಮುಂದುವರಿದಿದ್ದಾರೆ.

ಆಹ್ವಾನಪತ್ರಿಕೆಯಲ್ಲಿ, ಸುಖಾಗಮನ ಬಯಸುವವರ ಪಟ್ಟಿಯಲ್ಲಿ ಶ್ರೀರಾಮುಲು–ಭಾಗ್ಯಲಕ್ಷ್ಮಿ ದಂಪತಿ ಹಾಗೂ ಜನಾರ್ದನರೆಡ್ಡಿ–ಲಕ್ಷ್ಮಿ ಅರುಣಾ ದಂಪತಿ ಹೆಸರಷ್ಟೇ ಇರುವುದು ಇದನ್ನು ಪುಷ್ಟೀಕರಿಸುತ್ತದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ 5ರಂದು ಮದುವೆ ನಡೆಯಲಿದ್ದು, ಅದರ ಅಂಗವಾಗಿ ಭಾನುವಾರ ಶಾಸಕರ ಮನೆಯಲ್ಲಿ ಮೆಹಂದಿ ಶಾಸ್ತ್ರ, ಅರಿಶಿನ ಕುಟ್ಟುವ ಶಾಸ್ತ್ರ ಮತ್ತು ದೀಪೋತ್ಸವ ನಡೆಯಿತು.

ನಟಿ ದೀಪಿಕಾ ಪಡುಕೋಣೆಯವರಿಗೆ ವಧುವಿನ ಅಲಂಕಾರ ಮಾಡಿದ್ದ ಸಂಧ್ಯಾ ಶೇಖರ್‌ ಅವರೇ ರಕ್ಷಿತಾ ಅವರಿಗೂ ಮೇಕಪ್‌ ಮಾಡುತ್ತಿದ್ದು, ಕೆಲವು ದಿನಗಳಿಂದ ಅವರ ಮನೆಯಲ್ಲೇ ಬೀಡುಬಿಟ್ಟಿದ್ದಾರೆ. ಮದುವೆ ಕಾರ್ಯಕ್ರಮಗಳ ಪ್ರಖ್ಯಾತ ಫೋಟೋಗ್ರಾಫರ್‌ ಜಯರಾಮನ್‌ ಪಿಳ್ಳೈ ಮತ್ತು ದಿಲೀಪ್‌ ಜೋಡಿಗೆ ಫೋಟೊ–ವಿಡಿಯೊ ತೆಗೆಯುವ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮದುವೆ ಆಹ್ವಾನಪತ್ರಿಕೆಗಳನ್ನು ವಿತರಿಸಲು ದೊಡ್ಡ ತಂಡವನ್ನು ಶ್ರೀರಾಮುಲು ರೂಪಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಗಣ್ಯರು, ಅಧಿಕಾರಿಗಳು, ಸ್ವಾಮೀಜಿಗಳು ಹಾಗೂ ಬೆಂಬಲಿಗರಿಗೆ ಆಹ್ವಾನಪತ್ರಿಕೆಗಳನ್ನು ತಲುಪಿಸಲಾಗಿದೆ. ಕೇಸರಿ, ಏಲಕ್ಕಿ, ಅರಿಶಿನ, ಕುಂಕುಮ ಮತ್ತು ಅಕ್ಷತೆಯುಳ್ಳ ಆಹ್ವಾನಪತ್ರಿಕೆಯನ್ನು ಗಣ್ಯರಿಗೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT