ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ: ಹೆಚ್ಚಿದ ಆತಂಕ

ಪೂರ್ವಸಿದ್ಧತಾ ‍‍ಪರೀಕ್ಷೆ ಗೊಂದಲ–ಅಂತಿಮ ಪರೀಕ್ಷೆಯಲ್ಲೂ ಯಡವಟ್ಟಿನ ಭೀತಿ
Last Updated 21 ಫೆಬ್ರುವರಿ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು:ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಪ್ರತಿದಿನವೂ ಸೋರಿಕೆಯಾಗುತ್ತಿದ್ದು, ಮಾರ್ಚ್‌ 27ರಿಂದ ಆರಂಭವಾಗುವ ಮುಖ್ಯ ಪರೀಕ್ಷೆಯಲ್ಲೂ ಇದೇ ಪುನರಾವರ್ತನೆಯಾಗಬಹುದೇ ಎಂಬ ಆತಂಕ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಮನದಲ್ಲಿ ಮಡುಗಟ್ಟುತ್ತಿದೆ.

ಶನಿವಾರ ನಡೆಯುವ ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ‘ಹಲೊ ಆ್ಯಪ್‌’ನಲ್ಲಿ ಶುಕ್ರವಾರವೇ ಸೋರಿಕೆಯಾಗಿದೆ. ಆದರೆ ಇದೇ ಅಧಿಕೃತ ಪತ್ರಿಕೆಯೇ ಎನ್ನುವುದು ಖಾತ್ರಿಯಾಗಿಲ್ಲ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಗೂ, ತನಗೂ ಸಂಬಂಧ ಇಲ್ಲ ಎಂಬಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಇಬಿ) ವರ್ತಿಸುತ್ತಿದೆ ಎಂಬುದು ಪೋಷಕರ ದೂರು. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆಎಫ್‌ಐಆರ್‌ ದಾಖಲಾಗಿ ಮೂರು ದಿನ ಕಳೆದ ಮೇಲೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳದೆ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ.

‘ಮಂಡಳಿ ಹೇಳುವಂತೆ ಇದು ಪಬ್ಲಿಕ್‌ ಪರೀಕ್ಷೆ ಅಲ್ಲ, ಮೌಲ್ಯಮಾಪನವೂ ಶಾಲಾ ಹಂತದಲ್ಲೇ ನಡೆಯುತ್ತದೆ. ಆದರೆ ಕಷ್ಟಪಟ್ಟು, ನಿಜವಾದ ಪರೀಕ್ಷೆ ಎಂಬಂತೆಯೇ ಭಾವಿಸಿ ಓದಿದ ವಿದ್ಯಾರ್ಥಿಗಳಿಗೂ, ಸೋರಿಕೆಯಾದ ಪ್ರಶ್ನೆಪತ್ರಿಕೆ ಓದಿಕೊಂಡು ಪರೀಕ್ಷೆ ಬರೆದವರಿಗೂ ವ್ಯತ್ಯಾಸ ಇಲ್ಲದಂತೆ ಮಾಡುವ ಇಂತಹ ದಂಧೆಯಿಂದ ಮಕ್ಕಳು ಮಾನಸಿಕ ಆಘಾತಕ್ಕೆ ಈಡಾಗುವ ಸಾಧ್ಯತೆ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದುಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಿ.ಶಶಿಕುಮಾರ್‌ ಹೇಳಿದರು.

‘ಸಣ್ಣಪುಟ್ಟ ವಿಷಯಕ್ಕೂ ತ್ವರಿತವಾಗಿ ಸ್ಪಂದಿಸಿ, ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಇಷ್ಟು ಗಂಭೀರ ವಿಷಯದಲ್ಲಿ ಏಕೆ ಮೌನ ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೂಡಿರುವ ಸಂಶಯಗಳನ್ನು ಪರಿಹರಿಸುವ ಪ್ರಯತ್ನ ಮಾಡಬಹುದಿತ್ತಲ್ಲ’ ಎಂದು ಅವರು ಪ್ರಶ್ನಿಸಿದರು.

‘ಒಟ್ಟು 14,689 ಶಾಲೆಗಳ ಪೈಕಿ 2,213 ಶಾಲೆಗಳಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಪ್ರಶ್ನೆಪತ್ರಿಕೆ ರವಾನೆಯಾಗಿದೆ, ಉಳಿದ ಶಾಲೆಗಳಿಗೆ (12,566) ಮಂಡಳಿಯಿಂದ ಪರೀಕ್ಷೆ ಆರಂಭಕ್ಕೆ ನಾಲ್ಕು ದಿನಗಳ ಮೊದಲಾಗಿಯೇ ಪ್ರಶ್ನೆಪತ್ರಿಕೆ ಪೂರೈಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಆಯಾ ಶಾಲೆಯ ಜವಾಬ್ದಾರಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಹೇಳಿದರು.

‘ಎಫ್‌ಐಆರ್‌ ದಾಖಲಾಗಿದೆ, ಎಷ್ಟು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಳಿದಾಗ, ‘ಇದು ತನಿಖೆಯ ಹಂತದಲ್ಲಿದೆ, ವಂಚನಾ ಜಾಲ ದೊಡ್ಡದು ಇರಬಹುದಾದ ಸಾಧ್ಯತೆ ಇದ್ದು, ಮಾಹಿತಿ ಕಲೆ ಹಾಕಲು ಸಮಯ ಬೇಕಾಗಬಹುದು, ಆದರೆ ತಪ್ಪಿತಸ್ಥರು ಸಿಕ್ಕಿ ಬೀಳುವುದು ನಿಶ್ಚಿತ’ ಎಂದರು.

ನಂಬಿಕೆ ಇಡಿ:‘ಶಾಲೆಗಳ ಮೇಲೆ ನಂಬಿಕೆ ಇಟ್ಟು ಪ್ರಶ್ನೆಪತ್ರಿಕೆಗಳನ್ನು ಮೊದಲಾಗಿ ನೀಡಿದ್ದೇ ತಪ್ಪಾಗಿರಬಹುದು. ಅಂತಿಮ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಹಂಚಿಕೆ ವ್ಯವಸ್ಥೆಯೇ ಬೇರೆ ರೀತಿ ಇರುವುದರಿಂದ ಸೋರಿಕೆಯ ಆತಂಕ ಇಲ್ಲ. ಖಜಾನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸಹಿತ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಹಲವು ಲಾಬಿಗಳ ಕೈವಾಡ!
ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮೇಲ್ನೋಟಕ್ಕೆ ಅಂತಹ ಸಮಸ್ಯೆ ಏನೂ ಇಲ್ಲ. ಆದರೆ ಇದರಿಂದಲೂ ಲಾಭ ಮಾಡಿಕೊಳ್ಳುವ ದೊಡ್ಡ ಗುಂಪೇ ಇದೆ. ಕೆಲವು ಟ್ಯುಟೋರಿಯಲ್‌ಗಳು ಪೂರ್ವಸಿದ್ಧತಾ ಪರೀಕ್ಷಾ ಫಲಿತಾಂಶವನ್ನು ಪೋಷಕರಿಗೆ ತೋರಿಸಿ, ಅಂತಿಮ ಪರೀಕ್ಷೆಯಲ್ಲೂ ಪ್ರಶ್ನೆಪತ್ರಿಕೆ ತಮ್ಮ ಸಂಸ್ಥೆ ಹೇಳಿದ ರೂಪದಲ್ಲೇ ಇರುತ್ತದೆ ಎಂದು ಹೇಳಿ ಲಾಭ ಗಿಟ್ಟಿಸಲು ಈ ಕೆಲಸ ಮಾಡುತ್ತಿವೆ ಎಂಬ ಅನುಮಾನವೂ ಇದೆ ಎಂದು ಇಲಾಖೆ ಮೂಲಗಳು ಹೇಳಿವೆ.

‘ನಮಗೇ ಕೊಡಿ, ನಾವೇ ಪರೀಕ್ಷೆ ನಡೆಸುತ್ತೇವೆ’ ಎಂದು ಮುಖ್ಯೋಪಾಧ್ಯಾಯರ ಸಂಘ ಮತ್ತೊಮ್ಮೆ ಕೇಳುವ ದಾರಿ ಸುಗಮ ಮಾಡಿಕೊಳ್ಳಲು ಇಂತಹ ವ್ಯವಸ್ಥಿತ ಸಂಚು ನಡೆದಿರಬಹುದು’ ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಮುಗ್ಧ ಮನಸ್ಸು ಕಲಕದಿರಿ
‘ಎಸ್ಸೆಸ್ಸೆಲ್ಸಿ ಮಕ್ಕಳು ಇನ್ನೂ ಮುಗ್ಧರೇ ಇರುತ್ತಾರೆ. ಪೂರ್ವತಯಾರಿ ಪರೀಕ್ಷೆಯೇ ಆಗಿರಲಿ, ಸೋರಿಕೆ ಆಗಿದೆ ಎಂಬುದು ಗೊತ್ತಾದರೆ ಅವರೂ ಬಹಳ ನೊಂದುಕೊಳ್ಳಬಹುದು, ಕೆಲವರು ಇದನ್ನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಬಹುದು. ಒಂದು ಸರ್ಕಾರಿ ವ್ಯವಸ್ಥೆಯ ಮೇಲೆ ಎಳೆ ಮಕ್ಕಳಿಗೆ ನಂಬಿಕೆ ಹೋಯಿತು ಎಂದರೆ ಅದನ್ನು ಮತ್ತೆ ಗಳಿಸಿಕೊಳ್ಳುವುದು ಸುಲಭವಲ್ಲ. ಕಷ್ಟಪಟ್ಟು ಓದುವುದರ ಬದಲು ಸುಲಭ ದಾರಿ ಇದೆ ಎಂಬುದನ್ನು ಈ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುವುದು ಬಹಳ ದೊಡ್ಡ ತಪ್ಪಾಗುತ್ತದೆ’ ಎಂದು ನಿಮ್ಹಾನ್ಸ್‌ನ ಮಾನಸಿಕ ತಜ್ಞ ಡಾ.ಬಿ. ವಿನಯ್‌ ಅಭಿಪ್ರಾಯಪಟ್ಟರು.

‘ಆತಂಕಕ್ಕೆ ಅವಕಾಶ ಇಲ್ಲ’
‘ಎಸ್ಸೆಸ್ಸೆಲ್ಸಿಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು ಮಕ್ಕಳು ಅಂತಿಮ‌ ಪರೀಕ್ಷೆಯ ಸ್ವರೂಪವನ್ನು‌ ಅರ್ಥ ಮಾಡಿಕೊಳ್ಳಬೇಕೆನ್ನುವ ಉದ್ದೇಶದಿಂದಷ್ಟೆ.ಅಂತಿಮ‌ ಪರೀಕ್ಷೆಯ ಮಾದರಿ ಯಾವ ರೀತಿಯಲ್ಲಿರುತ್ತದೆ ಎನ್ನುವ ಪರಿಚಯ ಮಕ್ಕಳಿಗಾಗಲಿ ಎನ್ನುವ ಉದ್ದೇಶದಿಂದ ಈ ಬಾರಿ ಮಂಡಳಿಯೇ ಬಹುಪಾಲು ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

‘ಪರೀಕ್ಷೆಗಳು ಆಯಾ ಶಾಲೆಗಳಲ್ಲಿಯೇ, ಆಯಾ ಮುಖ್ಯಶಿಕ್ಷಕರ-ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ನಡೆದಿವೆ. ಶಾಲಾ ಮುಖ್ಯಸ್ಥರು ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವುದು, ಅವರ ಕೈಗೆ ಪ್ರಶ್ನೆ ಪತ್ರಿಕೆಗಳು ಮುಂಚೆಯೇ ತಲುಪಿರುವುದು ಸಹ ಇಂತಹ ಪರಿಸ್ಥಿತಿಗೆ ಕಾರಣ ಆಗಿರಬಹುದು. ಇಷ್ಟೆಲ್ಲ ಆದರೂ ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ‘ಸೋರಿಕೆ’ ಎಂಬ ಕಲ್ಪನೆಯಿಂದ‌ ಗ್ರಹಿಸುವುದೇ ಸರಿಯಲ್ಲ ಎನ್ನುವುದು ನನ್ನ ಭಾವನೆ’ ಎಂದು ಹೇಳಿದ್ದಾರೆ.

‘ಅಂತಿಮ ಪರೀಕ್ಷಾ ವ್ಯವಸ್ಥೆ ಬೇರೆಯೇ‌ ಆಯಾಮ ಹೊಂದಿರುತ್ತದೆ. ಎರಡೂವರೆ ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸಂಪೂರ್ಣ ವಿಭಿನ್ನವಾಗಿ‌, ಅತ್ಯಂತ ಸುರಕ್ಷಿತವಾಗಿ ನಿರ್ವಹಿಸುವ ವ್ಯವಸ್ಥೆ ಹಿಂದಿನಿಂದಲೂ‌ ಜಾರಿಯಲ್ಲಿದ್ದು, ಅದನ್ನೇ ಈ ಬಾರಿಯೂ ನಿರ್ವಹಿಸಲಾಗುವುದು. ಅದರ‌ ಬಗ್ಗೆ ಯಾವ ಗೊಂದಲಕ್ಕೆ, ಆತಂಕಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

**
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್ಇಇಬಿಯೇ ಪರೀಕ್ಷೆ ನಡೆಸಬೇಕು, ಇಲಾಖೆಗೆ ಮುಜುಗರ ಆಗುವಂತೆ ಶಾಲೆಗಳು ನಡೆದುಕೊಳ್ಳಬಾರದು.
-ಎಚ್‌.ಕೆ.ಮಂಜುನಾಥ, ಅಧ್ಯಕ್ಷರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT