ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿ ಅವಧಿ ಮುಕ್ತಾಯ: ಭವಿಷ್ಯ ನಿರ್ಧರಿಸದ ಸರ್ಕಾರ

Last Updated 14 ಮೇ 2020, 8:36 IST
ಅಕ್ಷರ ಗಾತ್ರ

ಬೆಂಗಳೂರು: ಬಹುತೇಕ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿದಿದ್ದರೂ ಚುನಾವಣೆ ನಡೆಸುವ ಸಾಧ್ಯತೆ ಇಲ್ಲದಿರುವ ಕಾರಣ ವಿಶೇಷ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಸಾಕಷ್ಟು ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿಯನ್ನು ಚುನಾವಣೆ ನಡೆದ ದಿನಾಂಕದ ಆಧಾರದಲ್ಲಿ ತೆಗೆದುಕೊಂಡರೆ ಇದೇ ತಿಂಗಳಿಗೆ ಕೊನೆ ಆಗುತ್ತದೆ. ಆದರೆ, ಅಧಿಕಾರ ಸ್ವೀಕಾರ ಮಾಡಿದನ್ನು ಗಣನೆಗೆ ತೆಗೆದುಕೊಂಡರೆ ಜೂನ್‌ ಮತ್ತು ಜುಲೈನಲ್ಲಿ ಕೊನೆಗೊಳ್ಳುತ್ತದೆ.

ಆರು ತಿಂಗಳ ಕಾಲ ಚುನಾವಣೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದಿತ್ತು. ‘ಕೊರೊನಾ ವೈರಸ್‌ ಸೋಂಕಿನ ಗಂಭೀರ ಪರಿಸ್ಥಿತಿ ಇರುವುದರಿಂದ ಅದು ಮುಗಿಯುವ ತನಕ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗ ‘ಪ್ರಜಾವಾಣಿ’ಗೆ ತಿಳಿಸಿದೆ.

ಅಧಿಕಾರ ಅವಧಿ ಮುಗಿದ ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸಂಬಂಧ ರಾಜ್ಯ ಸರ್ಕಾರವೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಈ ಸಂಬಂಧ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದೇ ಸಮಯದಲ್ಲಿ ಚುನಾವಣೆ ನಡೆದಿದ್ದು ನಿಜ. ಆದರೆ, ಅಧಿಕಾರ ಸ್ವೀಕಾರ ಮಾಡಿದ್ದು ಜೂನ್‌ ಮತ್ತು ಜುಲೈನಲ್ಲಿ. ಆ ಪ್ರಕಾರ ಜೂನ್‌ನಲ್ಲಿ 2,600 ಗ್ರಾಮ ಪಂಚಾಯಿತಿಗಳ ಮತ್ತು ಜುಲೈನಲ್ಲಿ ಇನ್ನಷ್ಟು ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿಯುತ್ತದೆ.ಆದ್ದರಿಂದ ನಿರ್ಣಯ ತೆಗೆದುಕೊಳ್ಳುವ ತರಾತುರಿ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರೂ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6024 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಕೊರೊನಾ ಸೋಂಕಿನಿಂದಾಗಿ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಪಂಚಾಯತ್‌ ರಾಜ್‌ ಕಾಯ್ದೆ 1993 ರಡಿ ಚುನಾವಣೆ ಮುಂದೂಡಿಕೆಗೆ ಅವಕಾಶವಿಲ್ಲ. ಆದರೆ, ಕೊರೊನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT