ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಬುಟ್ಟಿಗೆ ಸಂವಿಧಾನ ಎಸೆಯುವ ತಂತ್ರ

ರಾಜ್ಯಮಟ್ಟದ ಮಹಿಳಾ ಸಮಾವೇಶ: ಸಿಎಎ, ಎನ್‌ಆರ್‌ಸಿ ವಿರುದ್ಧ ಚಿಂತಕಿ ಶಬ್ನಂ ಹಶ್ಮಿ ಆಕ್ರೋಶ
Last Updated 8 ಮಾರ್ಚ್ 2020, 19:55 IST
ಅಕ್ಷರ ಗಾತ್ರ

ಮಂಡ್ಯ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿ ಮೂಲಕ ಸಂವಿಧಾನವನ್ನು ಕಸದ ಬುಟ್ಟಿಗೆ ಎಸೆಯುವ ತಂತ್ರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ರೂಪಿಸಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ್ತಿ, ಚಿಂತಕಿ ಶಬ್ನಂ ಹಶ್ಮಿ ಆರೋಪಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಭಾನುವಾರ ಇಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಎನ್‌ಆರ್‌ಸಿ ಪ್ರಕ್ರಿಯೆಯಿಂದ ಅಸ್ಸಾಂ ರಾಜ್ಯವೊಂದರಲ್ಲೇ 19 ಲಕ್ಷ ಜನರು ಪೌರತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರಲ್ಲಿ ಶೇ 70ರಷ್ಟು ಮಹಿಳೆಯರೇ ಇದ್ದಾರೆ. ಗಂಡನ ಮನೆಗೆ ಬಂದ ಬಹುತೇಕ ಮಹಿಳೆಯರ ಹೆಸರು ಬದಲಾಗಿದ್ದು, ಅದಕ್ಕೆ ಯಾವುದೇ ದಾಖಲಾತಿಗಳಿಲ್ಲ, ಅವರ ಹೆಸರಲ್ಲಿ ಆಸ್ತಿಯೂ ಇಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾನೂನು, ಕಾಯ್ದೆಗಳಿಂದ ಮಹಿಳೆಯರು ನೇರವಾಗಿ ಬಲಿಪಶುವಾಗುತ್ತಿದ್ದಾರೆ’ ಎಂದು ದೂರಿದರು.

‘ಕರಾಳ ಪೌರತ್ವ ತಿದ್ದುಪಡಿ ಕಾಯ್ದೆ ನೇರವಾಗಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಸಮಾನತೆ ತತ್ವದ ಮೇಲೆ ರೂಪಿತವಾಗಿದ್ದ ಸಂವಿಧಾನ ರಚನಾ ಸಮಿತಿಯಲ್ಲಿ 15 ಮಂದಿ ಮಹಿಳೆಯರಿಗೆ ಸ್ಥಾನ ನೀಡಲಾಗಿತ್ತು. ಸಮಾನತೆ ವಿರೋಧಿಸುವ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ’ ಎಂದು ಹೇಳಿದರು.

‘ಏಪ್ರಿಲ್‌ 1ರಿಂದಲೇ ಪೌರತ್ವ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಅದಕ್ಕೆ ಮಹಿಳೆಯರು ಸಂಪೂರ್ಣ ಅಸಹಕಾರ ಚಳವಳಿ ನಡೆಸಬೇಕು. 2024ರ ಚುನಾವಣೆಯಲ್ಲಿ ಕೋಮುವಾದಿ ಶಕ್ತಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದಂತೆ ಸಂಘಟಿತ ಹೋರಾಟ ನಡೆಸಬೇಕು’ ಎಂದು ಮನವಿ ಮಾಡಿದರು.

‘ನಾವು ಸಾವರ್ಕರ್‌ ವಾರಸುದಾರರಲ್ಲ. ಬದಲಾಗಿ ಭಗತ್‌ ಸಿಂಗ್‌, ಮೌಲಾನಾ ಅಬುಲ್‌ ಕಲಾಂ, ಮಹಾತ್ಮಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ವಾರಸುದಾರರು. ಮೋದಿ–ಶಾ ಜೋಡಿ ಸಮಾಜದಲ್ಲಿ ಸೃಷ್ಟಿಸಿರುವ ಭಯಕ್ಕೆ ಹೆದರಿ ನಾವು ಮನೆಯಲ್ಲಿ ಕೂರುವವರಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತ ಹೋರಾಟಗಾರರು ಆತ್ಮಾರ್ಪಣೆ ಮಾಡಿದ್ದಾರೆ. ಅಂಥದ್ದೇ ಹೋರಾಟ ರೂಪಿಸಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ಹೇಳಿದರು.

ಮುಂದಿನ ವರ್ಷದ ಮಹಿಳಾ ಸಮಾವೇಶವನ್ನು ಕೋಲಾರದಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಮಹಿಳಾ ಮೀಸಲಾತಿ; ಜಂತರ್‌ಮಂತರ್‌ನಲ್ಲಿ ಧರಣಿ
ಹುಬ್ಬಳ್ಳಿ:
‘ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ನೀಡುವಂತೆ ಆಗ್ರಹಿಸಿ ಶೀಘ್ರದಲ್ಲೇ ನವದೆಹಲಿಯ ಜಂತರ್‌ಮಂತರ್‌ನಲ್ಲಿ ರಾಜ್ಯದ ಐದು ಸಾವಿರ ಮಹಿಳೆಯರೊಂದಿಗೆ ಧರಣಿ ಕೂರುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಬೆಳಗಾವಿ ವಿಭಾಗಮಟ್ಟದ ಜೆಡಿಎಸ್‌ ಕಾರ್ಯಕರ್ತರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಒಟ್ಟು ಎರಡು ರೈಲುಗಳ ಮೂಲಕ ಮಹಿಳೆಯರನ್ನು ನವದೆಹಲಿಗೆ ಕರೆದುಕೊಂಡು ಹೋಗುತ್ತೇನೆ’ ಎಂದರು.

‘ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರವಾಗಿದೆ. ಆದರೆ, ಲೋಕಸಭೆಯಲ್ಲಿ ಆರು ವರ್ಷಗಳಿಂದ ಈ ಮಸೂದೆ ಅಂಗೀಕಾರವಾಗದೇ ತಾತ್ಸಾರಕ್ಕೆ ಒಳಗಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಿಳಾ ಮೀಸಲಾತಿ ಹೋರಾಟಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೇರಿದಂತೆ ರಾಷ್ಟ್ರದ ವಿವಿಧ ಪಕ್ಷಗಳು ಬೆಂಬಲ ನೀಡುವುದಾಗಿ ತಿಳಿಸಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT