ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ – ವಿಶ್ವನಾಥ್ ಟೀಕಾ ಪ್ರಹಾರ; ಎಚ್‌ಡಿಡಿ– ಎಚ್‌ಡಿಕೆ ಮೌನ

ಕಿಡಿ ಹೊತ್ತಿಸಿದ ವಾಗ್ಯುದ್ಧ
Last Updated 13 ಮೇ 2019, 19:11 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಎಚ್‌. ವಿಶ್ವನಾಥ್‌ ಟೀಕೆ ಮಾಡಿದ ಬೆನ್ನಲ್ಲೇ‘ದೋಸ್ತಿ’ ನಾಯಕರ ಮಧ್ಯೆ ವಾಗ್ಯುದ್ಧ ತಾರಕಕ್ಕೇರಿದೆ. ಆದರೆ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮೌನಕ್ಕೆ ಶರಣಾಗಿರುವುದು ‘ಮೈತ್ರಿ’ ಮಧ್ಯೆ ಅಸಮಾಧಾನದ ಕಿಡಿ ಪ್ರಜ್ವಲಿಸುವುದಕ್ಕೆ ಕಾರಣವಾಗಿದೆ.

‘ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ’ ಎಂಬ ವಿಶ್ವನಾಥ್ ಹೇಳಿಕೆಗೆ ಸೋಮವಾರ ಬೆಳಿಗ್ಗೆ ಟ್ವೀಟ್‌ನಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಹೀಗಾಗಿ ವಿಶ್ವನಾಥ್‌ ಅವರ ಬೇಜಾವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ಅವರು ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು’ ಎಂದು ಜರೆದಿದ್ದಾರೆ.

‘ಮೊದಲು ಜಿ.ಟಿ ದೇವೇಗೌಡ ಆಯ್ತು, ಈಗ ವಿಶ್ವನಾಥ್... ಮುಂದೆ ಯಾರು ನನ್ನ ವಿರುದ್ಧ ಮಾತನಾಡ್ತಾರೋ ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿ ಇಂಥ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನಹರಿಸುವುದು ಒಳಿತು’ ಎಂದೂ ಸರಣಿ ಟ್ವೀಟ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌ಗೆ ಮರು ಟ್ವೀಟ್‌ ಮಾಡಿರುವ ವಿಶ್ವನಾಥ್‌, ‘ನನ್ನ ಹೇಳಿಕೆ ಬಹಳ ಜವಾಬ್ದಾರಿಯುತವಾಗಿದೆ. ಕಿಡಿಗೇಡಿತನ, ಕುಖ್ಯಾತಿ, ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವುದು, ಸುಳ್ಳು ಹೇಳುವುದು ನನ್ನ ಜನ್ಮದಲ್ಲಿ, ನನ್ನ ರಕ್ತದಲ್ಲಿಯೇ ಬಂದಿಲ್ಲ. ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಲಿ, ಬಂದು ಉತ್ತರಿಸುತ್ತೇನೆ’ ಎಂದಿದ್ದಾರೆ.

ವಿಶ್ವನಾಥ್‌ ಮಾತಿಗೆ ಪೂರಕವಾಗಿ ಜೆಡಿಎಸ್‌ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಪ್ರತಿಕ್ರಿಯಿಸುತ್ತಿದ್ದಂತೆ, ಕಾಂಗ್ರೆಸ್‍ನ ನಾಯಕರಾದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ವೆಂಕಟ ರಮಣಪ್ಪ, ಜಮೀರ್‌ ಅಹಮದ್‌, ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಸುರೇಶ್, ಸಂಸದ ಡಿ.ಕೆ. ಸುರೇಶ್ಅವರು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಮಾತಿನ ಕೋಲಾಹಲಕ್ಕೆ ಕಾರಣವಾಗಿದೆ.

ಆರೋಪ- ಪ್ರತ್ಯಾರೋಪ ಹೆಚ್ಚುತ್ತಿದ್ದಂತೆ ಕಲಬುರ್ಗಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ‘ಮೈತ್ರಿ ಧರ್ಮಉಲ್ಲಂಘಿಸಿ ಯಾರೂ ಮಾತನಾಡಬಾರದು’ ಎಂದು ಎಚ್ಚರಿಕೆ ಕೊಟ್ಟರು.

‘ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಸರ್ಕಾರ ಪತನಗೊಳಿಸುವ ಬಿಜೆಪಿಯವರ ಕನಸು ಈಡೇರುವುದಿಲ್ಲ’ ಎಂದೂ ಅವರು ಹೇಳಿದರು.

ಮೌನಕ್ಕೆ ಶರಣಾದ ಜೆಡಿಎಸ್‌ ವರಿಷ್ಠರು: ಮೈತ್ರಿ ನಾಯಕರ ಮಧ್ಯೆ ಮಾತಿನ ಘರ್ಷಣೆ ತಾರಕಕ್ಕೇರಿದ್ದರೂ ಜೆಡಿಎಸ್ ವರಿಷ್ಠರು ಮೌನಕ್ಕೆ ಶರಣಾಗಿದ್ದಾರೆ.

ಕುಂದಗೋಳ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಹುಬ್ಬಳ್ಳಿಗೆ ಬಂದಿಳಿದ ಸಿ.ಎಂ ಎಚ್.ಡಿ.ಕುಮಾರಸ್ವಾಮಿ, ‘ನಾನು ಯಾರ ಬಗ್ಗೆಯೂ ಚರ್ಚೆ ಮಾಡಲ್ಲ. ನನ್ನಕೆಲಸ ನಾನು ಮಾಡುತ್ತೇನೆ. ಯಾರ ಪ್ರಶ್ನೆಗೆ ಉತ್ತರಿಸಲ್ಲ’ ಎಂದಷ್ಟೇ ಹೇಳಿದರು.

‘ಚಮಚಾಗಿರಿ ವಿಶ್ವನಾಥ್‌ ಅಭ್ಯಾಸ’

‘ವಿಶ್ವನಾಥ ಅವರಿಗೆ ಚಮಚಾಗಿರಿ ಮಾಡಿ ಅಭ್ಯಾಸವಿದೆ. ಎಸ್‌.ಎಂ. ಕೃಷ್ಣ ಅವರ ಸರ್ಕಾರದಲ್ಲಿ ವಿಶ್ವನಾಥ ಅದನ್ನೇ ಮಾಡಿಕೊಂಡಿದ್ದರು’ ಎಂದುಆಹಾರ ಸಚಿವ ಜಮೀರ್‌ ಅಹಮದ್‌ಹುಬ್ಬಳ್ಳಿಯಲ್ಲಿ ಕುಟುಕಿದರು.

‘ಮೇ 23ರಿಂದ 25 ರೊಳಗೆ ರಾಜ್ಯದಲ್ಲಿ ಯಡಿಯೂರಪ್ಪ ಅವರು ಸರ್ಕಾರ ರಚಿಸಿದರೆ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಿಎಸ್‌ವೈ ಮನೆ ಮುಂದೆ ಕಾವಲುಗಾರ ಆಗುತ್ತೇನೆ’ ಎಂದರು.

‘ಸಿದ್ದರಾಮಯ್ಯ ವಿರುದ್ಧ ನಾನು ಮಾತನಾಡಿಲ್ಲ’

ಮೈಸೂರು: ‘ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ನನಗೆ ಅಪಾರ ಗೌರವ ಇದೆ. ಎಚ್. ವಿಶ್ವನಾಥ್ ಹೇಳಿಕೆಗೆ ಅಷ್ಟೊಂದು ಮಹತ್ವ ನೀಡುವುದು ಬೇಡ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಹೇಳಿದರು.

‘ಸಿದ್ದರಾಮಯ್ಯ ಅವರು ನನ್ನ ಕುರಿತು ಟ್ವೀಟ್ ಮಾಡಿದ್ದಾರಂತೆ. ಅದನ್ನು ನಾನು ಗಮನಿಸಿಲ್ಲ. ಅವರು ಏಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ’ ಎಂದರು.

***

ಕಷ್ಟ ಆದರೆ ಅವರ (ಕಾಂಗ್ರೆಸ್‌) ದಾರಿ ಅವರು ನೋಡಿಕೊಳ್ಳಲಿ. ಮುಖ್ಯಮಂತ್ರಿ ವಿರುದ್ಧ ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ.

– ಕುಪೇಂದ್ರ ರೆಡ್ಡಿ, ಜೆಡಿಎಸ್ ರಾಜ್ಯಸಭಾ ಸದಸ್ಯ

ಆನೆ‌ (ಸಿದ್ದರಾಮಯ್ಯ) ನಡೆದು ಹೋಗುತ್ತಿರುತ್ತದೆ. ನಾಯಿಗಳು ಬೊಗಳುತ್ತಿರುತ್ತವೆ. ಸಿದ್ದರಾಮಯ್ಯ ಹೊಗಳಿಕೆಗೆ ಹಿಗ್ಗುವುದೂ ಇಲ್ಲ, ತೆಗಳಿಕೆಗೆ ತಗ್ಗುವುದೂ ಇಲ್ಲ.

– ಎಸ್‌.ಟಿ. ಸೋಮಶೇಖರ್‌, ಕಾಂಗ್ರೆಸ್‌ ಶಾಸಕ

ಮೈತ್ರಿ ಧರ್ಮಕ್ಕೆ ಧಕ್ಕೆ ತರುವ ‘ನಾನೇ ಮುಖ್ಯಮಂತ್ರಿ’ ಎನ್ನುವ ವಿಷಯ ಪ್ರಸ್ತಾವನೆ ಮೊದಲು ನಿಮ್ಮಿಂದಲೇ ಆಗಿದ್ದು. ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ನೀಡಲಿ.

– ಎಚ್.ವಿಶ್ವನಾಥ್‌, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಸಿದ್ದರಾಮಯ್ಯನಿಗೆ ಒಳ್ಳೆಯ ಬುದ್ದಿ ಕೊಡುವುದು, ಆ ಬೀರೇಶ್ವರನಿಗೂ ಸಾಧ್ಯವಿಲ್ಲ.

– ಕೆ.ಎಸ್. ಈಶ್ವರಪ್ಪ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT