ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಘಲಾಯಿ ಸೀಮೆಯ ಗಟ್ಟಿ ದನಿಯ ದಿಟ್ಟ ಲೇಖಕಿ ‘ಗೀತಾ ನಾಗಭೂಷಣ’

Last Updated 29 ಜೂನ್ 2020, 3:09 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಹಳ್ಳಿಯಲ್ಲಿ ಮಾರ್ಚ್ 25, 1942ರಲ್ಲಿ ಶಾಂತಪ್ಪ, ಶರಣಮ್ಮ ದಂಪತಿಯ ಪ್ರೀತಿಯ ಮಗಳಾಗಿ ಜನಿಸಿದರು. ಮೊಘಲಾಯಿ (ಕಲಬುರ್ಗಿ ಸೀಮೆ) ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ಬಿ.ಎ, ಬಿ.ಇಡಿ, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು.

ಜೊತೆಗೆ ತಮ್ಮ ಬೋಧನಾ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು. ಡಾ. ಗೀತಾ ನಾಗಭೂಷಣ ಅವರು ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿಯೂ ಹೌದು. ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೊಲ್ಕತ್ತದ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ.

ಸಾಹಿತ್ಯ ಕೃಷಿ

ಡಾ. ಗೀತಾ ನಾಗಭೂಷಣ ಅವರು 1968ರ ವರ್ಷದಲ್ಲಿ ಪ್ರಕಟಗೊಂಡ ‘ತಾವರೆಯ ಹೂವು’ ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ‘ಬದುಕು’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಬದುಕು’ ಕಾದಂಬರಿಗೆ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಅವರ ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.

ಶಬ್ದಾಡಂಬರದ ಸಾಹಿತ್ಯ ನಮಗೆ ಬೇಡ: ಗದಗ ನಗರದಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಗೀತಾ ನಾಗಭೂಷಣ ಅವರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ.

‘ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT