ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ– ಒಡವೆ ಸಾಲಕ್ಕೆ ಸಬ್ಸಿಡಿ ಸ್ಥಗಿತ: ಲೇವಾದೇವಿಗಾರರ ಕಪಿಮುಷ್ಟಿಯಲ್ಲಿ ಅನ್ನದಾತ

Last Updated 24 ಜನವರಿ 2020, 22:18 IST
ಅಕ್ಷರ ಗಾತ್ರ

ಮಂಡ್ಯ: ಕೃಷಿ ಭೂಮಿಯ ಪಹಣಿ ದಾಖಲೆ (ಆರ್‌ಟಿಸಿ) ಹಾಗೂ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟು ಪಡೆಯುತ್ತಿದ್ದ ಸಾಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಸ್ಥಗಿತಗೊಳಿಸಿದ್ದು, ರೈತರು ಕಂಗಾಲಾಗಿದ್ದಾರೆ. ಹೆಚ್ಚುವರಿ ಬಡ್ಡಿ ಕಟ್ಟಲಾಗದೆ ಒಡವೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿಗಾರರ ಕಪಿಮುಷ್ಟಿಯಿಂದ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ, 2004–05ರಿಂದ ರೈತರಿಗೆ ಕೃಷಿ–ಒಡವೆ ಸಾಲ ಸೌಲಭ್ಯ ಕಲ್ಪಿಸಿತ್ತು. ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರ ಬ್ಯಾಂಕುಗಳು ಚಿನ್ನ ಹಾಗೂ ಆರ್‌ಟಿಸಿ ಭದ್ರತೆಯಾಗಿಟ್ಟುಕೊಂಡು ಶೇ 7ರ ಬಡ್ಡಿದರದಲ್ಲಿ ₹ 3 ಲಕ್ಷದವರೆಗೆ ಸಾಲ ನೀಡುತ್ತಿದ್ದವು. ಆದರೆ, ಇದಕ್ಕೆ ರೈತರು ಶೇ 4ರಷ್ಟು ಬಡ್ಡಿಯನ್ನು ಮಾತ್ರ ಪಾವತಿಸಬೇಕಿತ್ತು. ಇನ್ನುಳಿದುದನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು.

ಒಂದು ವರ್ಷದ ನಂತರ ಬಡ್ಡಿ ಪಾವತಿಸಿದರೆ, ಕೇಂದ್ರ ಸರ್ಕಾರದ ಸಬ್ಸಿಡಿ ಹಣ ರೈತರ ಉಳಿತಾಯ ಖಾತೆಗೆ ಜಮಾ ಆಗುತ್ತಿತ್ತು. ರೈತರೊಬ್ಬರು ₹ 1 ಲಕ್ಷ ಸಾಲ ಪಡೆದರೆ ₹ 4 ಸಾವಿರ ಮಾತ್ರ ಬಡ್ಡಿ ಬರುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಕಳೆದ ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸುತ್ತೋಲೆ ಹೊರಡಿಸಿದ್ದು, ಒಡವೆ– ಕೃಷಿ ಸಾಲಕ್ಕೆ ಸಬ್ಸಿಡಿ ಇಲ್ಲವೆಂದಿದೆ. ಹಣಕಾಸು ಇಲಾಖೆ ಹಾಗೂ ಆರ್‌ಬಿಐ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

‘ಬ್ಯಾಂಕ್‌ಗಳು ಎಂದಿನಂತೆ ಬೆಳೆ ಸಾಲ, ಒಡವೆ ಸಾಲ ವಿತರಣೆ ಮಾಡುತ್ತಿವೆ. ಆದರೆ, ಸಬ್ಸಿಡಿ ಸ್ಥಗಿತಗೊಂಡಿರುವ ಕಾರಣ ರೈತರಿಗೆ ಬಡ್ಡಿ ರಿಯಾಯಿತಿ ಸಿಗುತ್ತಿಲ್ಲ. ಶೇ 9ರಿಂದ 11ರವರೆಗೆ ಸಾಮಾನ್ಯ ಬಡ್ಡಿ ಪಾವತಿಸಿಯೇ ಸಾಲ ಪಡೆಯಬೇಕು’ ಎಂದು ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಕದರಪ್ಪ ಹೇಳಿದರು.

ಚಿನ್ನ ಹರಾಜು, ನೋಟಿಸ್‌: ಶೇ 4ರ ಬಡ್ಡಿದರದಲ್ಲಿ ಜಿಲ್ಲೆಯ ರೈತರು ವಿವಿಧ ಬ್ಯಾಂಕ್‌ಗಳಲ್ಲಿ ಅಪಾರ ಪ್ರಮಾಣದ ಚಿನ್ನ ಇಟ್ಟಿದ್ದಾರೆ. ಈಗ ಸಬ್ಸಿಡಿ ಬಾರದ ಹಿನ್ನೆಲೆಯಲ್ಲಿ ಸಾಮಾನ್ಯ ಬಡ್ಡಿದರದಲ್ಲೇ (ಶೇ 11ರವರೆಗೆ) ಸಾಲ ಮುಂದುವರಿಸುವ, ಚಿನ್ನ ವಾಪಸ್‌ ಪಡೆಯುವ ಅನಿವಾರ್ಯ ಎದುರಾಗಿದೆ. ಬಹುತೇಕ ಚಿನ್ನದ ಸಾಲ ಸ್ಥಗಿತಗೊಂಡಿದ್ದು (ಎನ್‌ಪಿಎ) ದಂಡ ಶುಲ್ಕವನ್ನೂ ವಿಧಿಸಲಾಗುತ್ತಿದೆ.

‘ಬ್ಯಾಂಕ್‌ಗಳೂ ರೈತರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಶೇ 4ರ ಬಡ್ಡಿ ದರ ಇದೆ ಎಂಬ ಕಾಣಕ್ಕಾಗಿಯೇ ಚಿನ್ನ ಇಟ್ಟು ಸಾಲ ಪಡೆದಿದ್ದಾರೆ. ಈಗ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ಕಳುಹಿಸುತ್ತಿವೆ. ಹಲವು ಬ್ಯಾಂಕ್‌ಗಳಲ್ಲಿ ನಿತ್ಯ ಚಿನ್ನದ ಹರಾಜು ನಡೆಯುತ್ತಿದೆ. ನಾವು ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಹರಾಜು ತಪ್ಪಿಸುತ್ತಿದ್ದೇವೆ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

*
ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲೇ ಕೃಷಿ ಸಾಲಕ್ಕೆ ಸಬ್ಸಿಡಿ ಸ್ಥಗಿತಗೊಳಿಸಿತ್ತು. ಈಗ ರೈತರೂ ಸಾಮಾನ್ಯ ಬಡ್ಡಿ ದರ ಪಾವತಿಸಬೇಕಾಗಿದೆ.
-ಎನ್‌.ಕದರಪ್ಪ, ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT