ಪ್ರಾಣ ಬಿಟ್ಟೇವು..ಪಿಂಚಣಿ ಬಿಡೆವು: ಸುವರ್ಣ ವಿಧಾನಸೌಧದ ಬಳಿ ನೌಕರರ ಪ್ರತಿಭಟನೆ

7

ಪ್ರಾಣ ಬಿಟ್ಟೇವು..ಪಿಂಚಣಿ ಬಿಡೆವು: ಸುವರ್ಣ ವಿಧಾನಸೌಧದ ಬಳಿ ನೌಕರರ ಪ್ರತಿಭಟನೆ

Published:
Updated:

ಬೆಳಗಾವಿ: ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸದನ ಉಪ ಸಮಿತಿಯು ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ಬುಧವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘2000ಕ್ಕೂ ಹೆಚ್ಚಿನ ನೌಕರರು ಕಾಲ್ಪನಿಕ ವೇತನ ಸೌಲಭ್ಯ ಹಾಗೂ ನಿಶ್ಚಿತ ಪಿಂಚಣಿ ಸೌಲಭ್ಯ ದೊರೆಯದೇ, ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ನಿವೃತ್ತರಾಗಿದ್ದಾರೆ. ನೂರಾರು ಶಿಕ್ಷಕರು, ನೌಕರರು ಸೇವೆಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿದ್ದಾರೆ. ಅವರನ್ನೇ ಅವಲಂಬಿಸಿದ್ದ ಕುಟುಂಬಗಳು, ಸರ್ಕಾರದಿಂದ ಆರ್ಥಿಕ ಸೌಲಭ್ಯ ದೊರೆಯದೇ ಅತಂತ್ರವಾಗಿವೆ. ಅನುದಾನಿತ ಸಂಸ್ಥೆಗಳ ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಕೆಲಸಕ್ಕೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘2006ರ ಏ. 1ರ ನಂತರ ಅನುದಾನಿತ ಶಾಲಾ–ಕಾಲೇಜುಗಳಲ್ಲಿ ನೇಮಕ ಹೊಂದಿರುವ ಸಾವಿರಾರು ನೌಕರರು ಹಳೆಯ ನಿಶ್ಚಿತ ಪಿಂಚಣಿ ಯೋಜನೆಗೆ ಒಳಪಡದೇ ನಿವೃತ್ತಿ ನಂತರದ ಭವಿಷ್ಯದ ಭದ್ರತೆ ಇಲ್ಲದೇ ಕಂಗಾಲಾಗಿದ್ದಾರೆ. ದೇಶದ ಎಲ್ಲಿಯೂ ಇಲ್ಲದ ನೀತಿಯನ್ನು ಕರ್ನಾಟಕದಲ್ಲಿ ಮಾತ್ರ ಅನುಸರಿಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ’‌ ’ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಲ್ಪನಿಕ ವೇತನ ಸೌಲಭ್ಯ ಹಾಗೂ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಲ್ಲಿ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆ ಖಂಡಿಸಿ ಸಂಘದಿಂದ ರಾಜ್ಯದಾದ್ಯಂತ ಹೋರಾಟಗಳನ್ನು ನಡೆಸಲಾಗಿದೆ. ಆದರೂ ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ. 40ಸಾವಿರ ಸಂಖ್ಯೆಯಲ್ಲಿರುವ ನೌಕರರ ಸಹನೆ ಪರೀಕ್ಷಿಸುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನೀಡಲಾಗಿರುವ ಕುಟುಂಬ ಪಿಂಚಣಿ ಸೌಲಭ್ಯವನ್ನು ಅನುದಾನಿತ ನೌಕರರಿಗೂ ವಿಸ್ತರಿಸಬೇಕು. ಸರ್ಕಾರದ ಹಾಲಿ ಹಾಗೂ ನಿವೃತ್ತ ನೌಕರರಿಗೆ ನೀಡುವ ಎಲ್ಲ ವಿಧದ ವೈದ್ಯಕೀಯ ಸೌಲಭ್ಯಗಳನ್ನು ನಮಗೂ ನೀಡಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ಜಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವೈ. ಹಡಗಲಿ, ರಾಜ್ಯ ಸಂಚಾಲಕ ವಿ. ನಾಗೇಂದ್ರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಕರಲಿಂಗಣ್ಣವರ ನೇತೃತ್ವ ವಹಿಸಿದ್ದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಂಗವಿಕಲರು; ಕೆಲಸ ಕಾಯಂಗೆ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯುಗಳ ಆಗ್ರಹ

ಬೆಳಗಾವಿ: ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ರಚಿಸಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ (ಎಂಆರ್‌ಡಬ್ಲ್ಯು) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್‌ಡಬ್ಲ್ಯು) ಕಾರ್ಯಕರ್ತರ ಒಕ್ಕೂಟದವರು ಬುಧವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಧರಣಿ ನಡೆಸಿದರು.‌

‘ರಾಜ್ಯದ ಜನಸಂಖ್ಯೆಯ ಶೇ 6ರಷ್ಟು ಇರುವ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶೈಕ್ಷಣಿಕ, ವೈದ್ಯಕೀಯ, ಸಾಮಾಜಿಕ, ಆರ್ಥಿಕ ಪುನರ್ವಸತಿಗಾಗಿ ಅಂಗವಿಕಲರನ್ನೇ ಬಳಸಿಕೊಳ್ಳಲು ಗ್ರಾಮೀಣ ಪುನರ್ವಸತಿ ಯೋಜನೆ ಜಾರಿಗೊಳಿಸಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪದವೀಧರ ಅಂಗವಿಕಲರನ್ನು ಎಂಆರ್‌ಡಬ್ಲ್ಯುಗಳಾಗಿ 176 ತಾಲ್ಲೂಕುಗಳಿಗೆ ಹಾಗೂ ಎಸ್ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅಂಗವಿಕಲರನ್ನು ವಿಆರ್‌ಡಬ್ಲ್ಯುಗಳನ್ನಾಗಿ 5628 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿಕೊಂಡಿದೆ. ನಾವು 11 ವರ್ಷಗಳಿಂದಲೂ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ. ವೇತನ ಹೆಚ್ಚಳಕ್ಕೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.

ವೇತನ ಸಾಲುತ್ತಿಲ್ಲ:

‘ಎಂಆರ್‌ಡಬ್ಲ್ಯುಗಳಿಗೆ ₹ 6ಸಾವಿರ ಹಾಗೂ ವಿಆರ್‌ಡಬ್ಲ್ಯುಗಳಿಗೆ ₹ 3ಸಾವಿರ ವೇತನ ನೀಡಲಾಗುತ್ತಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಜೀವನ ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ನಮ್ಮ ಸೇವೆ ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ನೆರವಾಗಬೇಕು. ಎಂಆರ್‌ಡಬ್ಲ್ಯುಗಳನ್ನು ತಾಲ್ಲೂಕು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳನ್ನಾಗಿ ಮತ್ತು ವಿಆರ್‌ಡಬ್ಲ್ಯುಗಳನ್ನು ಅಭಿವೃದ್ಧಿ ಸಹಾಯಕರನ್ನಾಗಿ (ಹುದ್ದೆಗಳನ್ನು ಸೃಜಿಸಿ) ಕಾಯಂ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘6ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯ ಅನ್ವಯ ಕನಿಷ್ಠ ವೇತನ ಜಾರಿಗೊಳಿಸಬೇಕು. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಬಲವರ್ಧನೆಗೊಳಿಸಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ‘ನಿಮ್ಮ ಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ಜೊತೆ ಚರ್ಚಿಸಿ 2 ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಸುಬ್ರಮಣ್ಯಂ, ಕಾರ್ಯದರ್ಶಿ ಎಸ್. ಕೃಷ್ಣಪ್ಪ, ಖಜಾಂಚಿ ಡಿ. ಗುರುಪಾದಪ್ಪ ಹಾಗೂ ಸಂಚಾಲಕ ಜೆ. ದೇವರಾಜು ನೇತೃತ್ವ ವಹಿಸಿದ್ದರು.

ನೇಮಕಕ್ಕೆ ಮಾಪಕ ಓದುವವರ ಆಗ್ರಹ

ತಾಲ್ಲೂಕಿನಲ್ಲಿ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಐಬಿಎಫ್‌ (ಇನ್‌ಪುಟ್ ಬೇಸ್ ಫ್ರಾಂಚೈಸಿ) ಮಾಪಕ ಓದುಗರನ್ನು ಮಾಪಕ ಓದುವುದು ಹಾಗೂ ಕಂದಾಯ ವಸೂಲಾತಿ ಕಾರ್ಯಕ್ಕೆ ನೇಮಿಸಿಕೊಳ್ಳುವಂತೆ ಆಗ್ರಹಿಸಿ ಜನ ಸೇವಾ ಸಂಸ್ಥೆ ನೇತೃತ್ವದಲ್ಲಿ ಮಾಪಕ ಓದುಗರು ಬುಧವಾರ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ಹಾಗೂ ಇತರ ಜಿಲ್ಲೆಗಳಲ್ಲಿ ಮಾಪಕ ಓದುವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಬೆಳಗಾವಿ ತಾಲ್ಲೂಕಿನಲ್ಲಿ ಮಾತ್ರ ನೇಮಕ ಪ್ರಕ್ರಿಯೆ ನಡೆದಿಲ್ಲ. 37 ಮಂದಿ ಈ ಹುದ್ದೆಗೆ ಅರ್ಹವಾಗಿದ್ದಾರೆ. ಅವರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನ ಸೇವಾ ಸಂಸ್ಥೆ ಅಧ್ಯಕ್ಷ ವಿಜಯ ವನಮನಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !