ಮಂಗಳವಾರ, ಏಪ್ರಿಲ್ 20, 2021
27 °C
ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನ

ಮಧುಮೇಹಿ, ತಂಬಾಕು ಪ್ರಿಯರಿಗೂ ಕ್ಷಯ ಚಿಕಿತ್ಸೆ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

prajavani

ಬಳ್ಳಾರಿ: ದೇಶದಾದ್ಯಂತ ಇನ್ನು ಮುಂದೆ ಎಚ್‌ಐವಿ ಸೋಂಕಿತರಿಗಷ್ಟೇ ಅಲ್ಲದೆ, ಮಧುಮೇಹದಿಂದ ಹಾಗೂ ಅಪೌಷ್ಟಿಕತೆಯಿಂದ ಬಳಲುವವರು ಹಾಗೂ ತಂಬಾಕು ಸೇವಿಸುವವರಿಗೂ ಕ್ಷಯರೋಗ ಚಿಕಿತ್ಸೆ ದೊರಕಲಿದೆ. ಇದುವರೆಗೆ ಎಚ್‌ಐವಿ ಸೋಂಕಿತರಿಗಷ್ಟೇ ಕ್ಷಯ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.

ಎಚ್‌ಐವಿ ಸೋಂಕಿತರಿಗಿಂತಲೂ ಹೆಚ್ಚಾಗಿ ಮಧುಮೇಹದಿಂದ ಹಾಗೂ ಅಪೌಷ್ಟಿಕತೆಯಿಂದ ಬಳಲುವವರು, ತಂಬಾಕು ಸೇವಿಸುವವರಲ್ಲಿ ಕ್ಷಯದ ಪ್ರಮಾಣ ಹೆಚ್ಚಾಗಿರುವುದನ್ನು ಮನಗಂಡಿರುವ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇದುವರೆಗೆ ಇದ್ದ ರಾಷ್ಟ್ರೀಯ ಕ್ಷಯ–ಎಚ್‌ಐವಿ ಸಮಿತಿಯನ್ನು ಟಿಬಿ– ಕೋಮಾರ್ಬಿಡಿಟಿ (TB co-morbidity: ಕ್ಷಯದೊಂದಿಗೆ ಇತರ ಸೋಂಕುಗಳುಳ್ಳವರ ನಿರ್ವಹಣೆ) ಸಮಿತಿಯನ್ನಾಗಿ ಪರಿಷ್ಕರಿಸಿದೆ.

2025ರ ವೇಳೆಗೆ ದೇಶವನ್ನು ‘ಕ್ಷಯ ಮುಕ್ತಗೊಳಿಸುವ ಗುರಿಯನ್ನು ಮುಟ್ಟಲು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಗಳು, ಎಚ್‌ಐವಿ ಸೋಂಕಿತರೊಂದಿಗೆ ಇತರೆ ಮೂರು ಗುಂಪಿನವರನ್ನೂ ಚಿಕಿತ್ಸೆಗೆ ಪರಿಗಣಿಸಬೇಕಾಗಿದೆ. ಪ್ರತಿ ವರ್ಷ ಕಾಣಿಸಿಕೊಳ್ಳುವ ಕ್ಷಯರೋಗಿಗಳಲ್ಲಿ ಶೇ 55ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುವವರಿದ್ದಾರೆ. ಮಧುಮೇಹಿಗಳಲ್ಲಿ ಹಾಗೂ ತಂಬಾಕು ಬಳಕೆದಾರರಲ್ಲಿ ಕ್ಷಯದ ಸಾಧ್ಯತೆ ಇತರರಿಗಿಂತಲೂ ಮೂರು ಪಟ್ಟು ಹೆಚ್ಚು.

‘ಹೀಗಾಗಿ, ಈ ಮೂರೂ ಗುಂಪಿನ ನಿರ್ವಹಣಾ ಘಟಕಗಳೊಂದಿಗೆ ಸಮನ್ವಯ ಸಾಧಿಸಬೇಕು’ ಎಂದು ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸೂಡನ್‌ ಅವರು ಆಗಸ್ಟ್‌ನಲ್ಲಿ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅದಕ್ಕಾಗಿಯೇ ಇದುವರೆಗೂ ಇದ್ದ ರಾಷ್ಟ್ರೀಯ ಟಿ.ಬಿ– ಎಚ್‌ಐವಿ ಸಮಿತಿಯನ್ನು ಟಿ.ಬಿ– ಕೋಮಾರ್ಬಿಡಿಟಿ ಸಮಿತಿಯನ್ನಾಗಿ ಪರಿಷ್ಕರಿಸಲಾಗಿದೆ. ಪೌಷ್ಟಿಕತೆ, ಮಧುಮೇಹ ನಿಯಂತ್ರಣ, ತಂಬಾಕು ನಿಯಂತ್ರಣ ವಿಭಾಗದ ಮುಖ್ಯಸ್ಥರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಿದೆ. ಈ ಸಮಿತಿಯು ತನ್ನ ಮೊದಲ ಸಭೆಯಲ್ಲೇ, ಎಲ್ಲ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಟಿ.ಬಿ–ಎಚ್‌ಐವಿ ಸಮಿತಿಯನ್ನು ವಿಸರ್ಜಿಸಿ ಟಿ.ಬಿ–ಕೋಮಾರ್ಬಿಡಿಟಿ ಸಮಿತಿ ರಚಿಸಲು ಸೂಚಿಸಿದೆ.

ಅದರಂತೆ ರಾಜ್ಯದ ಆರೋಗ್ಯ ಇಲಾಖೆ ಸೆಪ್ಟೆಂಬರ್‌ನಲ್ಲಿ ಎಲ್ಲ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಸಮಿತಿ ಪರಿಷ್ಕರಿಸುವಂತೆ ಸೂಚಿಸಿದೆ. ಕೆಲವು ಜಿಲ್ಲೆಗಳಲ್ಲಿ ಸಮಿತಿ ರಚನೆಯಾಗಿದ್ದು, ಬಳ್ಳಾರಿಯಲ್ಲಿ ವಿಜಯನಗರ ಕ್ಷೇತ್ರದ ಉಪಚುನಾವಣೆ ಕಾರಣ ವಿಳಂಬವಾಗಿದೆ.

ದೇಶದಲ್ಲಿ ಎಷ್ಟು ಮಂದಿಗೆ ಯಾವುದರಿಂದ ಕ್ಷಯ? (ಅಂದಾಜು)

7 ಲಕ್ಷ: ಮಂದಿಗೆ ಅಪೌಷ್ಟಿಕತೆಯಿಂದ

5 ಲಕ್ಷ: ಮಂದಿಗೆ ಮಧುಮೇಹದಿಂದ

3 ಲಕ್ಷ: ಮಂದಿಗೆ ತಂಬಾಕು ಬಳಕೆಯಿಂದ

1 ಲಕ್ಷ: ಮಂದಿಗೆ ಎಚ್‌ಐವಿ ಸೋಂಕಿನಿಂದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.