ಶನಿವಾರ, ಜೂಲೈ 4, 2020
28 °C
ಮೂರು ದಶಕಗಳ ಬೇಡಿಕೆಗೆ ದೊರಕದ ಸ್ಪಂದನೆ

ಚಿಕ್ಕೋಡಿ | ಶ್ರಮದಾನದಿಂದ ರಸ್ತೆ ನಿರ್ಮಿಸಿದ ಕೃಷಿಕರು

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ತಾಲ್ಲೂಕಿನ ನನದಿ ಗ್ರಾಮದ ರವಳುಕೇದಾರಿ-ನಿಪ್ಪಾಣಿತೋಟಪಟ್ಟಿಯ ಜನರು ರಸ್ತೆಗಾಗಿ ಮೂರು ದಶಕಗಳಲ್ಲಿ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಆದರೂ ಅವರು ಸ್ಪಂದಿಸಿರಲಿಲ್ಲ. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಕೃಷಿಕರೇ ಶ್ರಮದಾನದ ಮೂಲಕ ಸುಮಾರು ಒಂದು ಕಿ.ಮೀ ಉದ್ದದ ರಸ್ತೆ ನಿರ್ಮಿಸಿಕೊಂಡಿದ್ದಾರೆ.

ನನದಿ ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ರವಳುಕೇದಾರಿ-ನಿಪ್ಪಾಣಿ ತೋಟಪಟ್ಟಿಯಲ್ಲಿ ಸುಮಾರು 10 ಕುಟುಂಬಗಳಿವೆ. ಆದರೆ, ಇದುವರೆಗೂ ಸಂಪರ್ಕ ರಸ್ತೆಯೇ ಇರಲಿಲ್ಲ. ಈ ತೋಟಪಟ್ಟಿಯ ಬಳಿಹಾಯ್ದು ಹೋಗಿರುವ ಹಳ್ಳದ ಬದಿಯಿಂದಲೇ ಜನರು ಸಂಚರಿಸುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ಹಳ್ಳದ ನೀರಿನಲ್ಲಿಯೇ ನಡೆದು ಶಾಲೆಗೆ ಹೋಗಬೇಕಾಗಿತ್ತು. 

ರಸ್ತೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯರು, ಶಾಸಕ, ಸಂಸದರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಕೃಷಿಕರು, ತಮ್ಮಲ್ಲಿಯೇ ವಂತಿಗೆ ಸಂಗ್ರಹಿಸಿ, ಎರಡು ಜೆಸಿಬಿ ಯಂತ್ರ, ಐದು ಟ್ರಾಕ್ಟರ್‌ಗಳ ನೆರವಿನಲ್ಲಿ ಹಳ್ಳದ ಬದಿಯಲ್ಲಿ ಕಚ್ಚಾರಸ್ತೆ ನಿರ್ಮಿಸಿಕೊಂಡಿದ್ದಾರೆ.

ಪ್ರತಿ ಕುಟುಂಬದಿಂದ ಒಬ್ಬರು, ಕೆಲವು ಕುಟುಂಬದಿಂದ ಇಬ್ಬರು ಶ್ರಮದಾನ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕಲ್ಲು ಚಪ್ಪಡಿ ಮತ್ತು ಸಿಮೆಂಟ್ ಪೈಪ್‌ಗಳನ್ನು ಬಳಸಿ ಚಿಕ್ಕ ಸೇತುವೆಯನ್ನೂ ನಿರ್ಮಿಸಿದ್ದಾರೆ.

‘ಅನಾರೋಗ್ಯಪೀಡಿತರನ್ನು, ವೃದ್ಧರನ್ನು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಬೇಕಾಗಿತ್ತು. ಈ ಪ್ರದೇಶದಲ್ಲಿ 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಕಬ್ಬು, ತಂಬಾಕು, ತರಕಾರಿ, ಆಹಾರಧಾನ್ಯ ಮೊದಲಾದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮರ್ಪಕವಾದ ರಸ್ತೆ ಸಂಪರ್ಕವಿರಲಿಲ್ಲ’ ಎಂದು ರೈತ ದಿಲೀಪರವಳು ಕೇದಾರಿ ಅಳಲು ತೋಡಿಕೊಂಡರು.

‘ಒಂದು ಬಾರಿ ರಸ್ತೆ ನಿರ್ಮಾಣಕ್ಕೆ ₹8 ಲಕ್ಷ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಗೊಳ್ಳಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

‘ಜಮೀನು ನೀಡಲು ಒಪ್ಪಿದರೆ ರಸ್ತೆ’
‘ಸರ್ಕಾರಿ ದಾಖಲೆಗಳ ಪ್ರಕಾರ ಇಲ್ಲಿ ರಸ್ತೆ ಇರಲಿಲ್ಲ. ಕಾಲುದಾರಿ ಮಾತ್ರ ಇತ್ತು. ಹೀಗಾಗಿ ರಸ್ತೆ ನಿರ್ಮಿಸಲು ಆಗಿರಲಿಲ್ಲ. ಕಾಲು
ದಾರಿ ಅಕ್ಕಪಕ್ಕದ ಹೊಲಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಸಿದ್ಧರಿದ್ದರೆ ರಸ್ತೆ ನಿರ್ಮಿಸಬಹುದು. ಈ ವಿಷಯವನ್ನು ಗ್ರಾಮಸ್ಥರ ಗಮನಕ್ಕೂ ತಂದಿದ್ದೇವೆ. ಅವರು ಒಪ್ಪಿಗೆ ಪತ್ರ ನೀಡಿದರೆ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗುವುದು‘ ಎಂದು ಪಿಡಿಒ ರವಿ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.

*
ರಸ್ತೆ ಡಾಂಬರೀಕರಣ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ನೆರವು ನೀಡಬೇಕು
–ಉಮೇಶ ಭೋಸಲೆ, ಗ್ರಾಮಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು