ಶುಕ್ರವಾರ, ಜನವರಿ 22, 2021
27 °C
ರೈಲಿನಲ್ಲಿ ಬಂದು ಬಾಡಿಗೆ ಬೈಕ್‌ನಲ್ಲಿ ಸುತ್ತಾಡಿ ಕೃತ್ಯ: ಬಂಧನ

ಬೆಂಗಳೂರಿನಲ್ಲಿ ಕಳವು, ಮೈಸೂರಿನಲ್ಲಿ ಪಾರ್ಟಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಟೇಷನರಿ ಅಂಗಡಿಯೊಂದರ ಮಾಲೀಕರ ಗಮನ ಬೇರೆಡೆ ಸೆಳೆದು ₹ 50 ಸಾವಿರ ಕಳವು ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತರು. ಆಟೊ ಚಾಲಕರಾಗಿರುವ ಇವರು ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಮೈಸೂರಿಗೆ ವಾಪಸು ಹೋಗುತ್ತಿದ್ದರು. ಕಳ್ಳತನದ ಹಣದಲ್ಲೇ ಪಾರ್ಟಿ ಮಾಡುತ್ತಿದ್ದರು. ಐಷಾರಾಮಿ ಜೀವನಕ್ಕೂ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಬನಶಂಕರಿ ಮೂರನೇ ಹಂತದ ಇಟ್ಟಮಡು ಮುಖ್ಯರಸ್ತೆಯಲ್ಲಿ ಲೋಕೇಶ್ ಎಂಬುವರು  ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೇ 2ರಂದು ಅಂಗಡಿಗೆ ಹೋಗಿದ್ದ ಆರೋಪಿಯೊಬ್ಬ 6 ಪುಸ್ತಕ ಖರೀದಿಸಿಕೊಂಡು ಹೋಗಿದ್ದ. ಕೆಲ ನಿಮಿಷಗಳ ನಂತರ ವಾಪಸು ಬಂದು ಬೇರೆ ಕಂಪನಿ ಪುಸ್ತಕ ನೀಡುವಂತೆ ತಿಳಿಸಿದ್ದ. ಲೋಕೇಶ್ ಅವರು ಗೋದಾಮಿಗೆ ಹೋಗಿ ಪುಸ್ತಕ ತಂದುಕೊಟ್ಟಿದ್ದರು.’

‘ಅದೇ ಸಮಯಕ್ಕೆ ಮತ್ತಿಬ್ಬರು ಆರೋಪಿಗಳು ಅಂಗಡಿಗೆ ಬಂದಿದ್ದರು. ಒಬ್ಬಾತ ಥರ್ಮಕೋಲ್ ಕೇಳಿದ್ದ. ಇನ್ನೊಬ್ಬ ಕಾರ್ಡ್‌ಬೋರ್ಡ್‌ ಶೀಟ್‌ ಕೊಡುವಂತೆ ಹೇಳಿದ್ದ. ಅವುಗಳನ್ನು ತರಲೆಂದು ಲೋಕೇಶ್ ಪುನಃ ಗೋದಾಮಿಗೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲೇ ಆರೋಪಿಗಳು ಅಂಗಡಿಯ ನಗದು ಪೆಟ್ಟಿಗೆಯಲ್ಲಿದ್ದ ₹50 ಸಾವಿರವನ್ನು ಕದ್ದುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು. 

ಬಾಡಿಗೆ ಬೈಕ್‌ನಲ್ಲಿ ಸುತ್ತಾಟ: ‘ಹಣದ ಅವಶ್ಯಕತೆ ಇದ್ದಾಗಲೆಲ್ಲ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದರು. ಕಡಿಮೆ ಗ್ರಾಹಕರು ಇರುವ ಅಂಗಡಿ
ಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವಿಜಯನಗರ ಸೇರಿ ಹಲವು ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು