ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ | ಕರ್ನಾಟಕ ಕರಾವಳಿಯಲ್ಲಿ ಕಾರ್ಗಿಲ್ ಮೀನು ಕಾಣಿಸಲು ಕಾರಣವಿದು

ಹವಳದ ದಿಣ್ಣೆಗಳಿರುವಲ್ಲಿ ವಾಸ ಮಾಡುವ ಆಕ್ರಮಣಶಾಲಿ ಸ್ವಭಾವದ ಮತ್ಸ್ಯಸಂಕುಲ
Last Updated 5 ಅಕ್ಟೋಬರ್ 2019, 6:16 IST
ಅಕ್ಷರ ಗಾತ್ರ

ರಾಜ್ಯದ ಕರಾವಳಿಯಲ್ಲಿ ಈಗ ‘ಕಾರ್ಗಿಲ್’ ಮೀನುಗಳದ್ದೇ ಸುದ್ದಿ. ಈ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಇವು, ಒಂದು ವಾರದಿಂದ ಮೀನುಗಾರರ ಬಲೆಗೆ ಹೇರಳವಾಗಿ ಬೀಳುತ್ತಿವೆ. ಗಾಢವಾದ ಕಂದುಬಣ್ಣ ಹೊಂದಿರುವ ಮೀನುಗಳುಈಗ ಜನರ ಕುತೂಹಲ ಕೆರಳಿಸಿವೆ. ಇವುಗಳ ಹೆಸರು, ಸ್ವಭಾವ ಮತ್ತಿತರ ವಿವರಣೆಗಳುಈ ಲೇಖನ ಮತ್ತು ವಿಡಿಯೊದಲ್ಲಿದೆ.

‘ಓಡನಸ್ ನೈಜರ್’ ಎಂಬ ವೈಜ್ಞಾನಿಕ ಹೆಸರಿನಈ ಮೀನುಗಳಿಗೆ ಆಡುಭಾಷೆಯಲ್ಲಿಕಾತ್ಲಿ, ಕಡಬು, ಕಾರ್ಗಿಲ್ ಎಂದೂ ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ‘ಟ್ರಿಗ್ಗರ್ ಫಿಶ್’ಎನ್ನುತ್ತಾರೆ. ಇವುಗಳಲ್ಲಿ ಬೇರೆ ಬೇರೆ ಬಣ್ಣದ, ಅಳತೆಯ ಸುಮಾರು 40 ಪ್ರಭೇದಗಳಿವೆ. ನೋಡಲು ಸುಂದರವಾಗಿರುವ ಇವು, ಆಳಸಮುದ್ರದಲ್ಲಿ ಹವಳದ ದಂಡೆಗಳ ಬಳಿ ಹೆಚ್ಚಾಗಿ ವಾಸ ಮಾಡುತ್ತವೆ. ಅರಬ್ಬಿ ಸಮುದ್ರದಲ್ಲಿ ಲಕ್ಷದ್ವೀಪ, ಭಟ್ಕಳದ ಸಮೀಪದ ನೇತ್ರಾಣಿ ನಡುಗಡ್ಡೆ, ನೆರೆಯ ಗೋವಾದ ಕೆಲವೆಡೆ ಕಂಡುಬರುತ್ತವೆ ಎನ್ನುತ್ತಾರೆಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಡಾ.ಶಿವಕುಮಾರ ಹರಗಿ.

ಮನುಷ್ಯರಂತೆ ಹಲ್ಲು!:‘ಕಾರ್ಗಿಲ್’ ಮೀನುಗಳಹಲ್ಲು, ಮನುಷ್ಯರ ಹಲ್ಲಿನ ರಚನೆಗೆ ಹೋಲಿಕೆಯಾಗುತ್ತವೆ. ಒಮ್ಮೆ ತನ್ನ ಶಿಕಾರಿಯನ್ನು ಕಚ್ಚಿದರೆ ಗಟ್ಟಿಯಾಗಿ ಎಳೆದು ಕತ್ತರಿಸುವಷ್ಟು ಬಲಶಾಲಿಯಾಗಿವೆ. ಈ ಮೀನುಗಳುಆಕ್ರಮಣಶಾಲಿ ಸ್ವಭಾವದವು. ದೇಹ ಚಪ್ಪಟೆಯಾಗಿರುವ ಕಾರಣ ನೀರಿನಲ್ಲಿ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. ಇವುಗಳಿಗೆ‘ಮಣಕಿ ಬೊಂಡಾಸ್’ ಮೀನುಗಳು ಬಹಳ ಇಷ್ಟದ ಶಿಕಾರಿ. ಹಾಗಾಗಿ ಅವುಗಳನ್ನು ಅರಸಿಕೊಂಡು ಬಂದಿರಬಹುದು ಎನ್ನುವುದು ಡಾ.ಶಿವಕುಮಾರ ಹರಗಿ ಅವರ ಅಭಿಪ್ರಾಯವಾಗಿದೆ.

ತಂಪಾದ ನೀರಿನ ಸೆಲೆಯ (ಕೋಲ್ಡ್ ಕರೆಂಟ್) ಹರಿವು:‘ಕಾರ್ಗಿಲ್ ಮೀನುಗಳು, ಜೆಲ್ಲಿ ಫಿಶ್‌ಗಳು ಈಗ ಅಲ್ಲಲ್ಲಿ ಬಲೆಗೆ ಬೀಳುತ್ತಿವೆ ಎಂದು ಮೀನುಗಾರರು ಹೇಳುತ್ತಿದ್ದಾರೆ. ಈ ಮೀನುಗಳು ಕಾಣಿಸಿಕೊಳ್ಳುವುದು ಸಮುದ್ರದಲ್ಲಿತಂಪು ನೀರಿನ ಸೆಲೆಯ ಹರಿವಿನ ಲಕ್ಷಣವಾಗಿದೆ. ಅರಬ್ಬಿ ಸಮುದ್ರದಲ್ಲಿಉತ್ತರ ಭಾಗದಿಂದ ದಕ್ಷಿಣದತ್ತ ಈಗ ತಂಪು ನೀರು ಹರಿಯುತ್ತಿರಬಹುದು. ಆ ಸೆಲೆಯಲ್ಲಿ ಸಾಗಿ ಬರುವ ಸೂಕ್ಷ್ಮ ಜೀವಿಗಳನ್ನು ಬೇಟೆಯಾಡಲು ಇವು ಗುಂಪುಗುಂಪಾಗಿ ಸಾಗುತ್ತಿರುವ ಸಾಧ್ಯತೆಯೂ ಇದೆ’ಎಂದು ಅವರು ವಿವರಿಸುತ್ತಾರೆ.

‘ಕಾರ್ಗಿಲ್’ ಹೆಸರು ಕಾಕತಾಳೀಯ!:ರಾಜ್ಯದ ಕರಾವಳಿಯಲ್ಲಿ 1999ರಲ್ಲಿ ಈ ಮೀನುಗಳು ಹೆಚ್ಚಾಗಿ ಕಾಣಿಸಿಕೊಂಡವು ಎಂದು ಮೀನುಗಾರ ಮಾಜಾಳಿಯ ಉದಯ ನೆನಪಿಸಿಕೊಳ್ಳುತ್ತಾರೆ. ಆಗ ಈ ಮೀನುಗಳ ಬಗ್ಗೆ ಹೆಚ್ಚಿನ ಮೀನುಗಾರರಿಗೆ ಮಾಹಿತಿ ಇರಲಿಲ್ಲ. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು. ಬಲೆಗೆ ಬಿದ್ದ ಮೀನುಗಳ ಮೈ ಬಣ್ಣವೂ ಸೈನಿಕರ ಸಮವಸ್ತ್ರದ ಬಣ್ಣಕ್ಕೆ ಹೋಲಿಕೆಯಾಗುತ್ತಿತ್ತು. ಹಾಗಾಗಿ, ಮೀನುಗಾರರು ‘ಕಾರ್ಗಿಲ್’ ಮೀನು ಎಂದು ಕರೆದಿರಬಹುದು.ಮುಂದೆ ಅದೇ ಜನಪ್ರಿಯವಾಗಿರಬಹುದು ಎಂದು ಅವರುಮುಗುಳ್ನಗುತ್ತಾರೆ.

ಬೇರೆ ಮೀನುಗಳಿಲ್ಲ:‘ಕಾರ್ಗಿಲ್’ ಮೀನುಗಳು ಬೇರೆ ಜಾತಿಯ ಸಣ್ಣಪುಟ್ಟ ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಹಾಗಾಗಿ ಅವುಗಳ ದಾಳಿಗೆ ಬೆದರಿದ ಬೇರೆ ಜಾತಿಯ ಮೀನುಗಳು ದೂರ ಸಾಗಿರುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರ ಬಲೆಗೆ ಪಾಂಫ್ರೆಟ್ (ಪಾಂಪ್ಲೆಟ್), ಬಂಗುಡೆ, ಅಂಜೆಲ್ ಮುಂತಾದ ಮೀನುಗಳು ಸಿಗುತ್ತಿಲ್ಲ ಎಂದೂ ಕಡಲಜೀವ ಶಾಸ್ತ್ರ ತಜ್ಞರು ಊಹಿಸಿದ್ದಾರೆ.

ಈ ವರ್ಷ ಮತ್ಸ್ಯ ಕ್ಷಾಮದಿಂದ ಮೀನುಗಾರರಿಗೆ ಸಂಪಾದನೆಯಲ್ಲಿಭಾರಿ ಇಳಿಕೆಯಾಗಿದೆ. ಹಾಗೆಂದು ಸಮುದ್ರಕ್ಕೆ ಹೋಗದಿರಲೂ ಸಾಧ್ಯವಿಲ್ಲ. ‘ಕಾರ್ಗಿಲ್’ ಮೀನುಗಳುತಿನ್ನಲು ಯೋಗ್ಯವಲ್ಲದಿದ್ದರೂ ಬಂದಷ್ಟು ಆದಾಯ ಬರಲಿ ಎಂಬ ಆಶಯದೊಂದಿಗೆ ಹಿಡಿದು ತರುತ್ತಿದ್ದಾರೆ. ಪ್ರತಿ ಕೆ.ಜಿಗೆ ₹ 20ರ ಆಸುಪಾಸಿನಲ್ಲಿ ಫಿಶ್ ಮಿಲ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾರವಾರದ ಬೈತಖೋಲ ಬಂದರಿನಿಂದಅಂದಾಜು 100 ಟನ್‌ನಷ್ಟು ಮೀನುಗಳು ಈಗಾಗಲೇ ಉಡುಪಿ, ಮಂಗಳೂರು, ಗೋವಾದ ಫಿಶ್ ಮಿಲ್‌ಗಳಿಗೆರವಾನೆಯಾಗಿವೆ.

ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ವಿಜ್ಞಾನಿಗಳು ಈ ಮೀನುಗಳ ಮಾದರಿಯನ್ನು ತೆಗೆದುಕೊಂಡು ಹೋಗಿದ್ದಾರೆ.ಇಷ್ಟು ಪ್ರಮಾಣದಲ್ಲಿ ಇಲ್ಲಿ ಹೇಗೆ ಸಿಗುತ್ತಿವೆಎಂಬುದನ್ನು ಇವುಗಳ ಆಹಾರ ಪದ್ಧತಿಯನ್ನು ಅಧ್ಯಯನ ಮಾಡುವ ಮೂಲಕ ಅರಿತುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT