ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ– ಮುಸ್ಲಿಂ ವಿದ್ಯಾರ್ಥಿಗಳ ಸಹ ಪ್ರಯಾಣಕ್ಕೆ ಅಡ್ಡಿ

ಸುತ್ತುವರಿದು ಬೆದರಿಕೆ ಹಾಕಿದ ಬಜರಂಗ ದಳ ಕಾರ್ಯಕರ್ತರು
Last Updated 4 ಮಾರ್ಚ್ 2020, 13:25 IST
ಅಕ್ಷರ ಗಾತ್ರ

ಪುತ್ತೂರು: ನಗರದ ಕಾಲೇಜುಗಳಲ್ಲಿ ಓದುತ್ತಿರುವ ಒಂದೇ ಊರಿನ ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಂ ವಿದ್ಯಾರ್ಥಿ ಬಸ್‌ನಲ್ಲಿ ಒಟ್ಟಿಗೆ ಕುಳಿತು ಪ್ರಯಾಣ ಮಾಡುತ್ತಿರುವುದನ್ನು ಆಕ್ಷೇಪಿಸಿದ ಬಜರಂಗ ದಳ ಕಾರ್ಯಕರ್ತರು, ಬುಧವಾರ ಬೆಳಿಗ್ಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅವರನ್ನು ಸುತ್ತುವರಿದು ಬೆದರಿಸಿದ್ದಾರೆ.

ಪುತ್ತೂರಿನಿಂದ 20 ಕಿ.ಮೀ. ದೂರದ ಗ್ರಾಮವೊಂದರ ನಿವಾಸಿಗಳಾಗಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಗರದ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿ ದ್ವಿತೀಯ ವರ್ಷದಲ್ಲಿ ಕಲಿಯುತ್ತಿದ್ದರೆ, ವಿದ್ಯಾರ್ಥಿನಿ ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದಾಳೆ. ನಿತ್ಯವೂ ಒಂದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಇಬ್ಬರೂ ಒಟ್ಟಿಗೆ ಕುಳಿತು ಪ್ರಯಾಣಿಸುತ್ತಿರುವುದನ್ನು ಗಮನಿಸಿದ್ದ ಬಜರಂಗ ದಳದ ಕಾರ್ಯಕರ್ತರು, ಬುಧವಾರ ಬೆಳಿಗ್ಗೆ ಬಸ್‌ ನಿಲ್ದಾಣ ತಲುಪುತ್ತಿದ್ದಂತೆ ವಿದ್ಯಾರ್ಥಿಗಳನ್ನು ಸುತ್ತುವರಿದು ಬೆದರಿಸಿದ್ದಾರೆ. ಇಬ್ಬರನ್ನೂ ಹಿಡಿದುಕೊಂಡು ವಿಚಾರಣೆ ಆರಂಭಿಸಿದ್ದರು.

ವಿಷಯ ತಿಳಿದ ಪುತ್ತೂರು ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದರು. ಇಬ್ಬರ ಪೋಷಕರನ್ನೂ ಕರೆಸಿ, ಅವರೊಂದಿಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಕಳುಹಿಸಿಕೊಟ್ಟರು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ತಿಮ್ಮಪ್ಪ ನಾಯ್ಕ್‌, ‘ವಿದ್ಯಾರ್ಥಿಗಳನ್ನು ಒಂದು ಗುಂಪು ಸುತ್ತುವರಿದಿರುವ ಮಾಹಿತಿ ತಿಳಿದು ಅಲ್ಲಿಗೆ ತೆರಳಿ ಅವರನ್ನು ಕರೆತಂದಿದ್ದೆವು. ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಪರಿಚಿತರಾಗಿದ್ದರು. ನಿತ್ಯವೂ ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದಿಲ್ಲ. ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದೇವೆ’ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT