ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯವಲ್ಲ, ಅನುಭಾವದ ನುಡಿ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶರಣಬಸವಪ್ಪ ಅಪ್ಪ ಅಭಿಮತ
Last Updated 29 ಏಪ್ರಿಲ್ 2018, 11:43 IST
ಅಕ್ಷರ ಗಾತ್ರ

ಕಲಬುರ್ಗಿ: ವಚನಗಳು ಸಾಹಿತ್ಯವಲ್ಲ, ಶರಣರ ಅನುಭಾವದ ಮಾತುಗಳು. ಸಾಹಿತ್ಯಕ್ಕೆ ಸೀಮಿತ ನೆಲೆ ಇದೆ. ಆದರೆ, ವಚನಗಳಿಗೆ ವ್ಯಾಪ್ತಿ ಎಂಬುದಿಲ್ಲ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅಭಿಪ್ರಾಯಪಟ್ಟರು.

ಶರಣಬಸವೇಶ್ವರರ 196ನೇ ಯಾತ್ರಾ ಮಹೋತ್ಸವದಲ್ಲಿ ಶರಣಬಸವಪ್ಪ ಅಪ್ಪ ಅವರು ನೀಡಿದ ಶುಭ ಸಂದೇಶ ಆಧರಿಸಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯದಲ್ಲಿ ಹಲವು ಪ್ರಾಕಾರಗಳಿವೆ. ಕಥೆ, ಕಾವ್ಯ, ಕಾದಂಬರಿ ರಚನೆಗೆ ಚೌಕಟ್ಟು ಇದೆ. ಹೀಗಾಗಿ ವಚನಗಳನ್ನು ಸಾಹಿತ್ಯ ಎನ್ನುವುದು ಸರಿಯಲ್ಲ’ ಎಂದರು.

‘ಶರಣರ ಪುರಾಣ, ಜೀವನ ಕಥೆಗಳು ಎಲ್ಲ ಭಾಷೆಗಳಿಗೆ ಅನುವಾದಗೊಂಡಿವೆ. ಅನುವಾದ ಆಗಿರುವುದು ಶರಣರ ಚರಿತ್ರೆ ಮಾತ್ರ. ಶರಣ ಚರಿತ್ರೆಯ ಜತೆಗೆ ಅವರ ಚಾರಿತ್ರ್ಯದ ಮೇಲೂ ಬೆಳಕು ಚೆಲ್ಲಬೇಕು. ವಚನಗಳನ್ನು ಬರೀ ಮಾತಿನಲ್ಲಿ ಹೇಳದೆ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಶರಣಬಸವೇಶ್ವರರ 1,200 ದೇಗುಲಗಳಿವೆ. ಇಷ್ಟು ಸಂಖ್ಯೆಯ ದೇಗುಲಗಳು ಯಾವುದೇ ವೀರಶೈವರಿಗೆ ಇಲ್ಲ. ಅವರ ಜೀವನ, ವಚನಗಳ ಮಾಹಿತಿ ನೀಡುವ ಹೊತ್ತಿಗೆ ಹೊರತಲಾಗುತ್ತಿದೆ. ಜನಪದ ಸಾಹಿತ್ಯದಲ್ಲಿನ ಶರಣರ ಗುಣಗಾನದ ವಿವರವೂ ಈ ಕೃತಿ ಒಳಗೊಳ್ಳಲಿದೆ. ಈ ಕಾರ್ಯ ಶೀಘ್ರದಲ್ಲಿಯೇ ಪೂರ್ಣವಾಗಲಿದೆ’ ಎಂದು ಹೇಳಿದರು.

ಶ್ರೀಶೈಲದ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲೇ ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಪ್ರತ್ಯೇಕ ಶಾಲೆ ತೆರೆದರು. ಮನೆ ಮನೆಗಳಿಗೆ ಟಾಂಗಾಗಳನ್ನು ಕಳುಹಿಸಿ ಬಾಲಕಿಯರನ್ನು ಕರೆತಂದು ಶಿಕ್ಷಣ ನೀಡಿದರು’ ಎಂದು ತಿಳಿಸಿದರು.

‘ದಾಸೋಹ ಅಂದರೆ ಬರೀ ಊಟವಲ್ಲ. ಆಚಾರ, ವಿಚಾರ, ಉತ್ತಮ ನಡೆ–ನುಡಿಗಳನ್ನು ಕಲಿಯುವುದಾಗಿದೆ. 900 ವರ್ಷಗಳ ಹಿಂದೇ ಶರಣಬಸವೇಶ್ವರರರು ರಚಿಸಿದ ವಚನಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿವೆ’ ಎಂದು ಹೇಳಿದರು.

ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಸ್ವಾಮೀಜಿಯೊಬ್ಬರು ನೀಡಿದ ಸಂದೇಶ ಆಧರಿಸಿ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಇದೇ ಮೊದಲು. ಸಂದೇಶದ ಘನತೆ, ಸತ್ವ ಎಂಥದ್ದು ಎಂಬುದನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.

ಕುಲಪತಿ ಡಾ.ನಿರಂಜನ ವಿ ನಿಷ್ಠಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಎಸ್‌.ಎಚ್‌.ಹೊನ್ನಳ್ಳಿ, ಡೀನ್‌ ಲಿಂಗರಾಜ ಶಾಸ್ತ್ರಿ, ಬಸವರಾಜ ದೇಶಮುಖ ಇದ್ದರು. ಶಿವರಾಜ ಶಾಸ್ತ್ರಿ ಹೇರೂರ ಸ್ವಾಗತಿಸಿ, ಸಾರಿಕಾದೇವಿ ಕಾಳಗಿ ನಿರೂಪಿಸಿದರು.

ಲಿಂಗ ಕಟ್ಟಿದವರಿಗೆ ಪ್ರವೇಶ!

‘ಲಿಂಗ ಕಟ್ಟಿಕೊಂಡು ಬಂದರೆ ಶರಣಬಸವೇಶ್ವರ ವಿದ್ಯಾರ್ವಧಕ ಸಂಘದ ಶಾಲೆ, ಕಾಲೇಜುಗಳಲ್ಲಿ ಪ್ರವೇಶ ಸುಲಭವಾಗಿ ದೊರೆಯುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ’ ಎಂದು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

‘ಸುತ್ತೂರು, ಪಂಚಪೀಠಗಳು, ವಿರಕ್ತ ಮಠಗಳ ಶಿಕ್ಷಣ ಸಂಸ್ಥೆಗಳಲ್ಲಿ ಈ ಪದ್ಧತಿ ಇಲ್ಲ. ಶರಣರ ಪರಂಪರೆಯನ್ನು ಶರಣಬಸವೇಶ್ವರ ಸಂಸ್ಥಾನ ಮಠ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಧರ್ಮದ ಬಗ್ಗೆ ಮಾತನಾಡಿದರೆ ಸಾಲದು, ಆಚರಣೆಯಲ್ಲೂ ತರಬೇಕು’ ಎಂದು ಹೇಳಿದರು.

ಹಲವು ಗೋಷ್ಠಿ

ವಿಚಾರ ಸಂಕಿರಣದ ಮೊದಲ ದಿನ ವಿವಿಧ ವಿಷಯಗಳ ಗೋಷ್ಠಿಗಳು ನಡೆದವು. ಡಾ.ರಾಜೇಶ್ವರಿ ಮಹೇಶ್ವರಯ್ಯ, ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ, ಡಾ.ಸಾರಿಕಾದೇವಿ ಕಾಳಗಿ, ಪ್ರೊ.ಕ್ಷೇಮಲಿಂಗ ಬಿರಾದಾರ, ಡಾ.ಎಸ್‌.ಜಿ.ಡೊಳ್ಳೇಗೌಡ್ರ, ಪ್ರೊ.ವೆಂಕಣ್ಣ ದೊಣ್ಣೇಗೌಡ್ರ, ಡಾ.ಎಸ್‌.ಎಂ.ಹಿರೇಮಠ, ಪ್ರೊ.ನಾನಾ ಸೇಹ ಹಚ್ಚಡದ ಅವರು ಶರಣರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT