ಮಂಗಳವಾರ, ಆಗಸ್ಟ್ 20, 2019
27 °C
ವಿಶ್ವಾಸಮತ ಚರ್ಚೆ

Live | ವಿಶ್ವಾಸಮತ ಸಾಬೀತುಪಡಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ರಾಜ್ಯಪಾಲರು

Published:
Updated:

ಸರ್ಕಾರ ಉಳಿಸಿಕೊಳ್ಳಲೆಂದು ಮೈತ್ರಿ ನಾಯಕರು ನಡೆಸಿದ ಪ್ರಯತ್ನಗಳು ಕೈಗೂಡಿದಂತೆ ಕಾಣುತ್ತಿಲ್ಲ. ಅತೃಪ್ತರ ಮನವೊಲಿಕೆ ಸಾಧ್ಯವಾಗಲೇ ಇಲ್ಲ.  ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಶಾಸಕರ ಪೈಕಿ ಒಬ್ಬ ಶಾಸಕ ನಾಪತ್ತೆಯಾಗಿದ್ದಾರೆ ಎಂಬ ಸಂಗತಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಗೆ ಮತ್ತಷ್ಟು ಹಿನ್ನಡೆಯುಂಟುಮಾಡಿದೆ. ಇದರ ಮಧ್ಯೆ ಆಡಳಿತರೂಢ ನಾಯಕರಿಗೆ ಖುಷಿ ತಂದಿದ್ದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ತೀರ್ಮಾನ. ಅವರು ಪಕ್ಷದಲ್ಲೇ ಉಳಿಯುವುದಾಗಿ ತಿಳಿಸಿದ್ದಾರೆ. ನಿಗದಿಯಂತೇ ವಿಶ್ವಾಸಮತಕ್ಕಾಗಿ ಸದನ ಸೇರುತ್ತಿದೆ. ಏನಾಗಲಿದೆ ಅಲ್ಲಿ? ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುವರೇ? ಇಲ್ಲ ವಿಫಲರಾಗುವರೇ? ಎಂಬುದರ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

8.10: ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

‘15 ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ನಡೆಸಲು ಬಹುಮತ ಇಲ್ಲ. ಹಾಗಾಗಿ ಶುಕ್ರವಾರ ಮಧ್ಯಾಹ್ನವೇ ವಿಶ್ವಾಸಮತ ತೋರಿಸಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

6.10: ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿರುವುದಾಗಿ ಉಪಾಧ್ಯಕ್ಷರು ಹೇಳಿದರು.

ವಿಶ್ವಾಸ ಯಾಚನೆ ಆಗುವವರೆಗೆ ಬಿಜೆಪಿಯಿಂದ ಅಹೋರಾತ್ರಿ ಹೋರಾಟ: ಯಡಿಯೂರಪ್ಪ

6.10: ವಿಶ್ವಾಸ ಮತಯಾಚನೆ ಪೂರ್ಣ ಆಗುವ ವರೆಗೆ ಬಿಜೆಪಿಯ ಎಲ್ಲಾ ಶಾಸಕರು ಇಲ್ಲೇ ಇರುತ್ತೇವೆ. ಇಲ್ಲೇ ಮಲಗುತ್ತೇವೆ. ಇಲ್ಲಿಂದ ಕದಲುವುದಿಲ್ಲ –ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ.
 

6.10: ವಿಧಾನಸಭೆ ಕಲಾಪ ಪುನರಾರಂಭ. ಜೆಡಿಎಸ್‌–ಕಾಂಗ್ರೆಸ್‌ ಸದಸ್ಯರಿಂದ ಮತ್ತೆ ಗದ್ದಲ.

5.48:  ಆಡಳಿತ ಪಕ್ಷಗಳಾದ ಜೆಡಿಎಸ್–ಕಾಂಗ್ರೆಸ್‌ ಶಾಸಕರ ಗದ್ದಲ ಮತ್ತು ಪ್ರತಿಭಟನೆ ಮಧ್ಯೆ ವಿರೋಧ ಪಕ್ಷ ಬಿಜೆಪಿ ಶಾಸಕರು ಶಾಂತವಾಗಿ ಎಲ್ಲವನ್ನೂ ಆಲಿಸುತ್ತಾ, ನೋಡುತ್ತಾ ಮೌನವಾಗಿ ಕುಳಿತಿದ್ದಾರೆ.

5.48: ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಗದ್ದಲದಿಂದಾಗಿ ಕಲಾಪವನ್ನು 10 ನಿಮಿಷಕಾಲ ಮುಂದೂಡಲಾಯಿತು.

5.45: ಧಿಕ್ಕಾರ, ಧಿಕ್ಕಾರ ಬಿಜೆಪಿಗೆ ಧಿಕ್ಕಾರ ಎಂದು ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಘೋಷಣೆ ಕೂಗಿದರು. ನಮ್ಮ ಶಾಸಕರನ್ನು ಅಪಹರಿಸಿರುವ ಬಿಜೆಪಿಗೆ ಧಿಕ್ಕಾರ. ತಕ್ಷಣ ನಮ್ಮ ಶಾಶಕರನ್ನು ಕರೆಸಬೇಕು ಎಂದು ಆಗ್ರಹಿಸಿದರು.

5.45: ಸ್ಪೀಕರ್‌ ಮಾತಿಗೂ ಬಗ್ಗದ ಕಾಂಗ್ರೆಸ್, ಜೆಡಿಎಸ್‌ ಶಾಸಕರು.

5.45: ಶಾಸಕ ಶ್ರೀಮಂತ ಪಾಟೀಲ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಹಾಗೂ ವಿಮಾನ ಟಿಕೆಟ್‌ನ ಪ್ರತಿಗಳನ್ನು ಪ್ರದರ್ಶಿಸಿ ಆಡಳಿತಾರೂಢ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.

5.42: ಮುಖ್ಯಮಂತ್ರಿ ಮಾತನಾಡುವುದಾದರೆ ಮಾಡಲಿ, ಇಲ್ಲವಾದರೆ ಈಗಲೇ ಮತವಿಭಜನೆ ಮಾಡಿ- ಬಿಜೆಪಿ ಶಾಸಕ ಮಾಧು ಸ್ವಾಮಿ ಸವಾಲು.

5.42: ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆದಾಗ ಎರಡೇ ದಿನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೊರ್ಟ್‌ ನೀಡಿದ್ದ ಆದೇಶ ಅಂದು ನಿಮಗೆ(ಕಾಂಗ್ರೆಸ್–ಜೆಡಿಎಸ್‌) ಮೆಚ್ಚುಗೆಯಾಗಿತ್ತು. ಇಂದು ಸುಪ್ರೀಂ ಕೋರ್ಟ್‌ನ ತೀರ್ಪು ಬೇಡವಾಗಿದೆಯಾ?ಬಿಜೆಪಿ ಶಾಸಕರ ಪ್ರಶ್ನೆ.

5.41: ಬಹುಮತ ಸಾಬೀತುಪಡಿಸಲು ಮತಕ್ಕೆ ಹಾಕಿ ಎಂದು ಪಟ್ಟು ಹಿಡಿದ ಬಿಜೆಪಿ. ಸದನದಲ್ಲಿ ಪರಸ್ಪರ ಆರೋಪ, ಗದ್ದಲ.

5.38: ಸ್ಪೀಕರ್‌ ಸಂದೇಶದ ಬಗ್ಗೆ ಸಭಾಧ್ಯಕ್ಷರ ಪೀಠದ ನಿರ್ಣಯ ಏನು? ಅದನ್ನು ಮೊದಲು ಸ್ಪಷ್ಟಪಡಿಸಿ. ಅದನ್ನು ಅನುಷ್ಠಾನಕ್ಕೆ ತರುತ್ತೀರೋ ಇಲ್ಲವೋ ತಿಳಿಸಿ. ಚರ್ಚೆ ಬೇಡ. ಮತಕ್ಕೆ ಹಾಕಿ – ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ.  

5.35: ಇಂದು ಕರೆದಿರುವುದು ಬಹುಮತ ಸಾಬೀತಿಗೆ. ಆದರೆ, ಇಲ್ಲಿ 10ಶೆಡ್ಯೂಲ್ಡ್‌ ಚರ್ಚೆಗೆ ಅವಕಾಶವಿಲ್ಲ. – ಬಿಜೆಪಿ ಶಾಸಕ ಮಾಧುಸ್ವಾಮಿ.

5.30: ಸ್ಪೀಕರ್‌ ಕಳುಹಿಸಿರುವ ಸಂದೇಶಕ್ಕೆ ನಿಮ್ಮ ನಿರ್ದೇಶನ ಏನು ಎಂಬುದನ್ನು ಸಭಾಧ್ಯಕ್ಷರೇ ನಿಮ್ಮ ಪೀಠದಿಂದ ನೀಡಿ – ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ.  

5.28: ಸಂವಿಧಾನಿಕ ಬಿಕ್ಕಟ್ಟು ಉಂಟಾಗಿರುವುದರಿಂದ ಚರ್ಚೆ ಅಗತ್ಯವಿದೆ. ತರಾತುರಿ ಬೇಕಿಲ್ಲ. ಗಂಭೀರವಾದ ವಿಷಯವಿದೆ. ಸಂವಿಧಾನದ ಹಸ್ತಕ್ಷೇಪ ಇಂದು ನಮಗೆ ನಾಳೆ ನಿಮ್ಮಮೇಲೂ ಆಗಬಹುದು. ಆಗಾಗಿ ತರಾತುರಿ ಅಗತ್ಯವಿಲ್ಲ. ಅನುಭವಿಗಳ ಅಭಿಪ್ರಾಯವನ್ನು ಸ್ಪೀಕರ್‌ ಪಡೆಯುತ್ತಿದ್ದಾರೆ. ವಿಪ್‌ ಪ್ರಶ್ನೆ ಮಾಡುವ ಕೆಲಸ ಇಂದಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ದೇಶನ ಸುಪ್ರೀಂ ಕೋರ್ಟ್‌ನಿಂದ ಬರಬೇಕು. ಅಲ್ಲಿಯವರೆಗೆ ವಿಶ್ವಾಸ ಸಾಬೀತು ಪ್ರಕ್ರಿಯೆ ಮುಂದುವರಿಸಿ. ಸ್ಪೀಕರ್‌ ಅವರನ್ನೂ ಸಂವಿಧಾನ ಇಕ್ಕಟ್ಟಿಗೆ ಸಿಲುಕಿಸಿದೆ. ಆ ಬಗ್ಗೆಯೂ ಚರ್ಚೆಯಾಗಬೇಕು –ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂ ರಾವ್.

5.25: ವಿಶ್ವಾಸಮತ ಯಾಚನೆಗೆ ಮೊದಲ ಆಧ್ಯತೆ ನೀಡಿ – ಬಿಜೆಪಿ ಶಾಸಕ ಸುರೇಶ್‌ ಕುಮಾರ್.

5.20: ಕಲಾಪದ ವಿರಾಮದ ವೇಳೆ ರಾಜ್ಯಪಾಲರನ್ನು ಭೇಟಿಯಾಗಿದ್ದ ಬಿಜೆಪಿ ಮುಖಂಡರು

5.15: ‘ನಾನು ಯಾರ ಒತ್ತಡಗಳಿಗೂ ಮಣಿಯುವುದಿಲ್ಲ’- ಸಭಾಧ್ಯಕ್ಷ ರಮೇಶ್‌ ಕುಮಾರ್‌ 

5.12: ರಾತ್ರಿ 12 ಗಂಟೆಯಾದರೂ ವಿಶ್ವಾಸಮತ ಯಾಚನೆ ಚರ್ಚೆ ಪೂರ್ಣಗೊಳ್ಳಲಿ. ನಮಗೂ ಮಾತಿಗೆ ಅವಕಾಶ ಕೊಡಿ.

– ಬಿ.ಎಸ್‌.ಯಡಿಯೂರಪ್ಪ

5.10: ‘ಸದನದ ಸದಸ್ಯರ ಹಕ್ಕು ರಕ್ಷಿಸುವ ಸಲುವಾಗಿ, ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಇಲ್ಲಿ ಅವಕಾಶ ಸಿಗದೆ ಹೋದರೆ, ಸದಸ್ಯನಾಗಿ ಉಳಿಯಬೇಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜ್ಯಪಾಲರು ಈ ಸಂದೇಶ ರವಾನಿಸಿದ್ದರೂ ಸದಸ್ಯರ ಮಾತಿಗೆ ಅವಕಾಶ ನೀಡಬೇಕು. ಸದಸ್ಯರು ಕಾಣೆಯಾಗುತ್ತಿರುವ ಬಗ್ಗೆ ತಿಳಿಯುತ್ತಿಲ್ಲ...’ 

–ಕೃಷ್ಣಬೈರೇಗೌಡ

5.07: ರಾಜ್ಯಪಾಲರ ಸಂದೇಶಕ್ಕೆ ಆರ್‌.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಸಂದರ್ಭದಲ್ಲಿ ರಾಜ್ಯಪಾಲರು ಸೂಚನೆ ಕಳಿಸಬಹುದು ಎಂಬುದನ್ನು ವಿವರಿಸಿದರು.

5.03: ‘ಇವತ್ತೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಪಾಲರಿಂದ ಸಂದೇಶ’– ಸ್ಪೀಕರ್‌ ರಮೇಶ್‌ ಕುಮಾರ್‌

5.00: ವಿಶ್ವಾಸಮತ ಯಾಚನೆ– ವಿಧಾನಸಭೆ ಕಲಾಪ ಮತ್ತೆ ಆರಂಭ

4.53: ನಿನ್ನೆ ಕಾಂಗ್ರೆಸ್‌ ಮುಖಂಡರೊಂದಿಗೆ ಇದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್...

4.40: ರಾಜ್ಯಪಾಲರ ಕಾರ್ಯದರ್ಶಿ ರಮೇಶ್ ಸಹ ವಿಧಾನಸೌಧದಲ್ಲಿದ್ದಾರೆ. 

4.00: ಕಲಾಪ ಮುಂದೂಡಿಕೆ... ಶಾಸಕರ ಗದ್ದಲ ಹೆಚ್ಚುತ್ತಿದ್ದಂತೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು. ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದ ಆಡಳಿತ ಪಕ್ಷದ ಶಾಸಕರು.

3.55: ‘ಮುಖ್ಯಮಂತ್ರಿ ತಮ್ಮ ಭಾಷಣ ಮುಂದುವರಿಸಲಿ‘– ಕೆ.ಜಿ.ಭೋಪಯ್ಯ ಒತ್ತಾಯ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು. ವಿಷಯಾಂತರ ಮಾಡಲಾಗುತ್ತಿದೆ ಎಂದು ಶಾಸಕ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

3.52: ‘ಅಜೆಂಡ ಪ್ರಕಾರವೇ ನಾನು ಕೆಲಸ ಮಾಡುವುದು‘– ವಿ.ಸೋಮಣ್ಣ ಅವರ ಮಾತಿಗೆ ಸಭಾಧ್ಯಕ್ಷರ ಪ್ರತಿಕ್ರಿಯೆ 

ಇದನ್ನೂ ಓದಿ: ಶ್ರೀಮಂತ ಪಾಟೀಲ್‌ ಅಪಹರಣ: ಡಿಕೆಶಿ; ವರದಿ ಸಲ್ಲಿಸಲು ಗೃಹ ಸಚಿವಗೆ ಸ್ಪೀಕರ್‌ ಸೂಚನೆ

3.50: ಗೃಹ ಸಚಿವರೇ ಕೂಡಲೇ ಶ್ರೀಮಂತ ಪಾಟೀಲ್‌ ಅವರ ಮನೆಯವರನ್ನು ಸಂಪರ್ಕಿಸಿ ನಾಳೆಯ ವರೆಗೆ ಪೂರ್ಣ ವರದಿ ಸಲ್ಲಿಸಿ. ಸಿದ್ದರಾಮಯ್ಯ ಅವರು ಕೊಟ್ಟಿರುವ ಪತ್ರ ಹಾಗೂ ನೀಡಿರುವ ಪುರಾವೆಗಳ ಆಧಾರದ ಮೇಲೆ ಗೃಹ ಸಚಿವರು ಗಮನ ವಹಿಸುವಂತೆ ಹೇಳುತ್ತಿದ್ದೇನೆ. ಈಗಲೇ ಶ್ರೀಮಂತ ಪಾಟೀಲ್‌ ಅವರ ಆರೋಗ್ಯಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಕಲೆಹಾಕಿ. ಇದು ನೈಸರ್ಗಿಕ ಅಲ್ಲ ಎಂದೇ ನನಗೆ ಅನಿಸುತ್ತದೆ, ಇದರ ಬಗ್ಗೆ ತನಿಖೆಯಾಗಬೇಕು ಎಂದು ರಮೇಶ್‌ ಕುಮಾರ್‌ ಹೇಳಿದರು.

ಕೇಳಬಹುದಾದ ಪ್ರಶ್ನೆಗಳು...

* ಅವರಿಗೆ ಮೊದಲಿನಿಂದಲೂ ಹೃದಯಕ್ಕೆ ಸಂಬಂಧಿಸಿದ ತೊಂದರೆ ಇತ್ತೇ?
* ಅವರು ಎಲ್ಲಿದ್ದಾರೆ, ಯಾವಾಗ ಮುಂಬೈಗೆ ಹೋದರು? ಎಲ್ಲದರ ಮಾಹಿತಿ ಇದೆಯೇ?
* ಮುಂಬೈಗೆ ಚಿಕಿತ್ಸೆಗೆ ತೆರೆಳಲು ಕಾರಣವೇನು?,...ಇತ್ಯಾದಿ  

3.45: ಯಾವ ವಿಮಾನದಲ್ಲಿ ಯಾರು ಹೋದರು? ಎಲ್ಲಿಗೆ ಹೋದರು, ಅವು ನನ್ನ ವಿಚಾರಣೆ ವ್ಯಾಪ್ತಿಗೆ ಬರುವುದಿಲ್ಲ. ಶಾಸಕ ಶ್ರೀಮಂತ ಪಾಟೀಲ ಅವರು ಅನಾರೋಗ್ಯದ ಕಾರಣದಿಂದ ವಿಧಾನಸಭಾ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ. ಮುಂಬೈನ ಸಂಜೀವಿನಿ ಆಸ್ಪತ್ರೆಯಿಂದ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳ ವಿವರವಿರುವ ಪತ್ರ ತಲುಪಿದೆ.

–ರಮೇಶ್‌ ಕುಮಾರ್‌, ಸಭಾಧ್ಯಕ್ಷ 

3.40: ವಿಮಾನದಲ್ಲಿ ಪ್ರಯಾಣಿಸಿರುವ ದಾಖಲೆಗಳಿವೆ. ಶಾಸಕರನ್ನು ದನಗಳಂತೆ ಮಾರಾಟಕ್ಕೆ ಒಳಪಡಿಸಿಲ್ಲ. –ಎಚ್‌.ಡಿ.ಕುಮಾರಸ್ವಾಮಿ

ಇದನ್ನೂ ಓದಿ: ವಿಶ್ವಾಸಮತ ಯಾಚನೆ | ಕಲಾಪಕ್ಕೆ ಬರಿಗಾಲಲ್ಲಿ ವಿಧಾನಸೌಧಕ್ಕೆ ಬಂದ ರೇವಣ್ಣ

3.34: ರಾತ್ರಿಯವರೆಗೂ ಜತೆಗಿದ್ದ ಶ್ರೀಮಂತ ಪಾಟೀಲ್‌; ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂದು ರಾತ್ರಿ ಸುದ್ದಿ ಬಂತು. ಅವರು ಆರೋಗ್ಯವಾಗಿಯೇ ಇದ್ದರು. ಶಾಸಕರು ಕಾಣೆಯಾಗಿರುವ ಹಿಂದೆ ಬಿಜೆಪಿಯ ಕೈವಾಡವಿದೆ. ಇದರ ಬಗ್ಗೆ ತನಿಖೆ ನಡೆಸಿ ಅವರನ್ನು ವಾಪಸ್ ಕರೆಸಲು ಸಭಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದರು. 

3.25: ಶಾಸಕರ ಅಪಹರಣ! ಬಲವಂತವಾಗಿ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಮುಖಂಡರೊಬ್ಬರು ಮುಂಬೈಗೆ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ಆರೋಗ್ಯವಾಗಿದ್ದೇನೆ ಎಂದರೂ ಬಲವಂತವಾಗಿ ಮುಂಬೈನ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಶಾಸಕ ಶ್ರೀಮಂತ ಪಾಟೀಲ್‌ ಫೋಟೊ ಪ್ರದರ್ಶಿಸಿದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌. 

3.10: ವಿಶ್ವಾಸಮತ ಯಾಚನೆಯನ್ನು ವಿಳಂಬ ಮಾಡಲಾಗುತ್ತಿದ್ದಾರೆ. ಸದನದಲ್ಲಿ ಮೈತ್ರಿ ನಾಯಕರು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಸುರೇಶ್‌ ಕುಮಾರ್‌ ಆಪಾದಿಸಿದರು.

3.05: ವಿಧಾನ ಪರಿಷತ್ ಕಲಾಪ ಮುಂದೂಡಿಕೆ: ಸಭೆ ಆರಂಭವಾಗುತ್ತಿದ್ದಂತೆ ಧರಣಿ ನಡೆಸಿದ ಬಿಜೆಪಿ ಸದಸ್ಯರು. ಮಧ್ಯಾಹ್ನ 3.30ಕ್ಕೆ ಸಭೆ ಮುಂದೂಡಿಕೆ 

3.00: ಬೆಳಿಗ್ಗೆ ಬರಿಗಾಲಿನಲ್ಲೇ ವಿಧಾನಸಭೆ ಪ್ರವೇಶಿಸಿದ್ದ ಸಚಿವ ಎಚ್‌.ಡಿ.ರೇವಣ್ಣ

ಏನದು ಮಾತು? ವಿರಾಮ ಸಮಯದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ಮಾತು–ಕತೆ 

1.45: ಭೋಜನ ವಿರಾಮ, ಕಲಾಪ ಮುಂದೂಡಿದ ಸ್ಪೀಕರ್ ರಮೇಶ್‌ಕುಮಾರ್

‘ಮೂರು ಗಂಟೆಯವರೆಗೆ ಕಲಾಪ ಮುಂದೂಡುತ್ತೇನೆ. ಭೋಜನವಿರಾಮದ ನಂತರ ಮತ್ತೆ ಸೇರೋಣ. ಈ ವೇಳೆ ನಾನು ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಪಡೆದುಕೊಳ್ಳುತ್ತೇನೆ’ ಎಂದು ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು.

1.44: ವಿಶ್ವಾಸಮತ ಬೇಡ, ಅದು ಸಂವಿಧಾನಬದ್ಧ ಅಲ್ಲ: ಸಿದ್ದರಾಮಯ್ಯ

ವಿಪ್ ಅನ್ವಯವಾಗುತ್ತದೆಯೋ ಇಲ್ಲವೋ ಎಂಬುದು ಇತ್ಯರ್ಥವಾಗುವರೆಗೆ ವಿಶ್ವಾಸಮತದ ನಿರ್ಣಯದ ಮೇಲಿನ ಚರ್ಚೆ ಹಾಗೂ ಮತಕ್ಕೆ ಹಾಕುವುದು ಬೇಡ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಈ ಸಂಬಂಧ ರೂಲಿಂಗ್ ಕೊಡುವಂತೆ ಸಿದ್ದರಾಮಯ್ಯ ಕೋರಿದರು.

1.41: ಕ್ರಿಯಾಲೋಪದ ಪ್ರಶ್ನೆ: ಸ್ಪೀಕರ್ ಸಮರ್ಥನೆ

ಸಂವಿಧಾನದ 10ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ವಿಷಯದಲ್ಲಿ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದಾರೆ. ಅದು ಇಲ್ಲಿಗೆ ಸೂಕ್ತ ಎಂಬ ಕಾರಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಭಾಧ್ಯಕ್ಷರು ಸಮರ್ಥಿಸಿಕೊಂಡರು. ಮಾಧುಸ್ವಾಮಿ ಮತ್ತೆ ಆಕ್ಷೇಪ ಎತ್ತಿದಾಗ, ಬೇಗ ಇದರ ಬಗ್ಗೆ ಹೇಳಿ ಮುಗಿಸುವಂತೆ ಸಿದ್ದರಾಮಯ್ಯ ಅವರಿಗೆ ಸ್ಪೀಕರ್ ಸೂಚಿಸಿದರು.

1.35: ಕ್ರಿಯಾಲೋಪದ ಬಗ್ಗೆ ಯಾವಾಗ ಚರ್ಚೆ ಕೊನೆಗೊಳಿಸಬೇಕು ಎಂಬುದನ್ನು ನನಗೆ ಬಿಟ್ಟುಬಿಡಿ ಎಂದು ಸಭಾಧ್ಯಕ್ಷರು ಹೇಳಿದರು. ಆಗ ಎದ್ದು ನಿಂತ ಬಿ.ಎಸ್.ಯಡಿಯೂರಪ್ಪ, ಇಲ್ಲಿ ವಿಪ್ ಜಾರಿ ವಿಷಯ ಪ್ರಸ್ತಾಪಿಸುವ ಅಗತ್ಯ ಏನಿದೆ ಎಂದರು. ಡಿ.ಕೆ‌.ಶಿವಕುಮಾರ್ ಎದ್ದುನಿಂತು ಯಡಿಯೂರಪ್ಪ ಅವರು ದೇಶವನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.

ಕ್ರಿಯಾಲೋಪದ ಬಗ್ಗೆ ನಾನು ಇನ್ನೂ ತೀರ್ಪು ಕೊಟ್ಟಿಲ್ಲ. ನಾನು ಕೋರ್ಟ್‌ಗೆ ಪ್ರತಿವಾದಿ. ನಾನು ಇಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದರು. ಮಾಧುಸ್ವಾಮಿ ಅವರು ಮತ್ತೆ ಕ್ರಿಯಾಲೋಪ ವಿಷಯ ದಾರಿ ತಪ್ಪಿದ್ದ ಪ್ರಸ್ತಾಪಿಸಿದರು.

12.55: ‌ಕ್ರಿಯಾಲೋಪ ವಿರೋಧಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಸುರೇಶ್‌ ಕುಮಾರ್‌

– ಶಾಸಕಾಂಗ ಪಕ್ಷದ ಕ್ರಿಯಾಲೋಪದ ಬಗ್ಗೆ ಬೇರೆ ದಿನ ಚರ್ಚೆ ಮಾಡೋಣ. ಈಗ ವಿಶ್ವಾಸಮತ ಯಾಚನೆಯಾಗಲಿ ಎಂದು ಸುರೇಶ್‌ ಕುಮಾರ್‌ ಮತ್ತು ಮಾಧುಸ್ವಾಮಿ ಹೇಳಿದರು.

12.45: ಸಿದ್ದರಾಮಯ್ಯ ಮಂಡಿಸಿರುವ ಕ್ರಿಯಾಲೋಪದ ಮೇಲೆ ಕೃಷ್ಣ ಬೈರೇಗೌಡರಿಂದ ಭಾಷಣ

–ವಿಶ್ವಾಸ ಮತ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಅವರು ಈ ಸದನದ ಸದಸ್ಯರೋ, ಅಲ್ಲವೋ ಎಂಬುದನ್ನು ನಿರ್ಧರಿಸದೇ ವಿಶ್ವಾಸ ಮತ ಯಾಚಿಸುವುದು ಸರಿಯಲ್ಲ. 

– ಇದಕ್ಕೂ ಮೊದಲು ಶಾಸಕರ ರಾಜೀನಾಮೆ ಇತ್ಯರ್ಥವಾಗಬೇಕು. 

12.36: ಸಿದ್ದರಾಮಯ್ಯ ಮಂಡಿಸಿರುವ ಕ್ರಿಯಾಲೋಪದ ಮೇಲೆ ಎಚ್‌ಕೆ. ಪಾಟೀಲ್‌ ಭಾಷಣ ಆರಂಭ 

–ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ನ ಆದೇಶದಿಂದ ತನ್ನ ಹಕ್ಕು ಚ್ಯುತಿ ಆಗಿದೆ ಎಂದು ಹೇಳಿರುವುದು ಕೇವಲ ತಮಗೊಬ್ಬರಿಗೆ ಅಲ್ಲ.  ಅವರು ಮಂಡಿಸಿರುವ ಹಕ್ಕು ಚ್ಯುತಿಯು ಇದು ಎಲ್ಲರಿಗೂ ಸಂಬಂಧಿಸಿದ್ದರು. 

–ಪಕ್ಷದ ವಿಪ್‌ ಮೇಲೆ ಸ್ಪೀಕರ್‌ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಸ್ಪೀಕರ್‌ಗೆ ಸಂಪೂರ್ಣ ಅಧಿಕಾರವಿದೆ. 

–ಶಾಸಕರ ವಿಪ್‌ ಉಲ್ಲಂಘನೆ ಮೇಲೆ ಸ್ಪೀಕರ್‌ ಸೂಕ್ತ ಆದೇಶ ನೀಡಬೇಕು. ಆಗಷ್ಟೇ ಸದನಕ್ಕೆ ಗೌರವ ಬಂದಂತಾಗುತ್ತದೆ. 

12.35: ಬಿಜೆಪಿ ಶಾಸಕ ಮಾಧುಸ್ವಾಮಿ ಭಾಷಣ 

– ಕಾಲಹರಣ ಬಿಟ್ಟು ವಿಶ್ವಾಸ ಮತ ಯಾಚನೆ ನಡೆಯಬೇಕು  

12.30: ಎಚ್‌ಕೆ ಪಾಟೀಲ್‌ ಅವರಿಂದ ಭಾಷಣ 

11.55: ಸಿದ್ದರಾಮಯ್ಯ ಭಾಷಣ ಮುಂದುವರಿಕೆ 

–ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯಿದೆ ತಂದ ಕೀರ್ತಿ ರಾಜೀವ್‌ ಗಾಂಧಿ ಅವರಿಗೆ ಸಲ್ಲಬೇಕು. 

–ಪಕ್ಷಾಂತರ ನಿಷೇಧ ಕಾಯಿದೆ ಜಾರಿಯಾದಾಗ ಅಂದು ಎಲ್ಲ ಪಕ್ಷಗಳೂ ಸ್ವಾಗತಿಸಿದ್ದವು. 

–ಶೆಡ್ಯೂಲ್‌ 10ರ ಪಕ್ಷಾಂತರ ನಿಷೇಧದ ಕುರಿತು ಕಾನೂನುಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಭಾಷಣ.

–ಪಕ್ಷಾಂತರ ನಿಷೇಧ ಕಾಯಿದೆ ಬಗ್ಗೆ ಉಲ್ಲೇಖಗಳಿರುವ ಶೆಡ್ಯೂಲ್‌ 10ಅನ್ನು ಸಂವಿಧಾನದಿಂದ ಇನ್ನೂ ತೆಗೆದು ಹಾಕಿಲ್ಲ. ಅದಿನ್ನೂ ಅಸ್ತಿತ್ವದಲ್ಲಿದೆ. ಅದರಂತೆ ಶಾಸಕನೊಬ್ಬನಿಗೆ ಅವನ ಪಕ್ಷ ವಿಪ್‌ ನೀಡಲು ಅವಕಾಶವಿದೆ. ಆದರೆ, ಇದನ್ನೂ ಉಲ್ಲಂಘಿಸಿ ಕೆಲ ಸದಸ್ಯರು ಗುಂಪಾಗಿ ಹೋಗಿದ್ದಾರೆ.

–ನಾನು ವಿರೋಧ ಪಕ್ಷದ ನಾಯಕ!!! 

(ಬಾಯಿತಪ್ಪಿ ಮಾತನಾಡಿದ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಗೇಲಿ.)

–ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ದೇಶ ನೋಡುತ್ತಿದೆ. 

ಬಿಜೆಪಿ–ಜೆಡಿಎಸ್‌ ಶಾಸಕರು ಗುಂಪು ಗುಂಪಾಗಿ ಹೋಗುತ್ತಿದ್ದಾರೆ!!!

ಮತ್ತೆ ಬಾಯಿ ತಪ್ಪಿದ ಸಿದ್ದರಾಮಯ್ಯ. ನಗೆಗಡಲಲ್ಲಿ ಸದನ.  ಸಿದ್ದರಾಮಯ್ಯ ಅವರ ಬಗ್ಗೆ ಕಟಕಿಯಾಡಿದ ಬಿಜೆಪಿ. 

–ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿತ್ತಿರುವುದು ಒಂದು ಕುಟಿಲ ತಂತ್ರ. 

–ಶಾಸಕಾಂಗ ಪಕ್ಷದ ನಾಯನಿಗೆ ವಿಪ್‌ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದರೆ, ಪಕ್ಷಾಂತರ ನಿಷೇಧಿಸುವ 10ನೇ ಶೆಡ್ಯೂಲ್‌ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಇದಿದ್ದಾಗಲೂ ಸುಪ್ರೀಂ ಕೋರ್ಟ್‌ನಿಂದ ಬಂದಿರುವ ಆದೇಶ ನನ್ನ ಹಕ್ಕಿನ ಚ್ಯುತಿ ಮಾಡಿದೆ.

–ಶಾಸಕರು ಸದನಕ್ಕೆ ಹೋಗಬಹುದು, ಹೋಗದೇ ಇರಬಹುದು ಎಂದು ಕೋರ್ಟ್‌ ಹೇಳಿದೆ. ಇದು ಶಾಸಕಾಂಗ ಪಕ್ಷದ ನಾಯಕನ ಹಕ್ಕಿನ ಚ್ಯುತಿ.  

–ಇದು ಎಲ್ಲ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರಿಗೂ ಅನ್ವಯವಾಗುತ್ತದೆ. 

–ಪ್ರಕರಣದಲ್ಲಿ ನನ್ನ ಅಭಿಪ್ರಾಯವನ್ನೇ ಕೋರ್ಟ್‌ ಕೇಳಲಿಲ್ಲ. 

– ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ. ಅವರು ನಮ್ಮ ಶಾಸಕರನ್ನು ವಿಮಾನಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. 

ಸದನದಲ್ಲಿ ಗದ್ದಲ: ವಿಚಾರದ ಬಗ್ಗೆ ಮಾತ್ರ ಮಾತನಾಡುವಂತೆ ಬಿಜೆಪಿಯಿಂದ ಒತ್ತಾಯ. 

11.53: ಬೋಪಯ್ಯಗೆ ಮೂದಲಿಕೆ 

ಸದನದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬೋಪಯ್ಯ ಅವರಿಗೆ ಸಚಿವ ವೆಂಕಟರಮಣಪ್ಪ ತರಾಟೆ. ನಮ್ಮನ್ನು ಅನರ್ಹ ಮಾಡಿದ ತಮಗೆ ಕೋರ್ಟ್‌ ಚೀಮಾರಿ ಹಾಕಿತ್ತು. ಈಗ ಒಳ್ಳೆ ಮಾತಾಡಬೇಡಿ. ನೆನಪಿರಲಿ ಎಂದು ಮೂದಲಿಸಿದರು. 

11.50: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಭಾಷಣ 

–ಕೆಲವು ವಿಷಯಗಳ ಬಗ್ಗೆ ಸ್ಪಷ್ಟನೆ ಸಿಗಬೇಕು.  

11.44:ಕ್ರಿಯಾಲೋಪ ಮಂಡಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಭಾಷಣ 

–ಕೆಲವು ವಿಷಯಗಳ ಬಗ್ಗೆ ಸ್ಪಷ್ಟನೆ ಸಿಗಬೇಕು.  

–1960ರ ವರೆಗೆ ದೇಶದಲ್ಲಿ ಪಕ್ಷಾಂತರಗಳ ಬಗ್ಗೆ ಹೆಚ್ಚು ಚರ್ಚೆಯೇ ಆಗುತ್ತಿರಲಿಲ್ಲ. 

–1963ರಲ್ಲಿ ಗಯಾಲಾಲ್‌ ಎಂಬುವವರು ಒಂದೇ ದಿನದಲ್ಲಿ ಮೂರು ಬಾರಿ ಪಕ್ಷಾಂತರ ಮಾಡಿದ್ದರು, ಕಾಂಗ್ರೆಸ್‌ನಿಂದ, ಸಂಯುಕ್ತ ರಂಗ, ಅಲ್ಲಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುತ್ತಾರೆ. ಆಗ ದೇಶ ಪಕ್ಷಾಂತರ ಬಗ್ಗೆ ದೇಶ ಗಂಭೀರವಾಗಿ ಚರ್ಚೆ ನಡೆಸಿತು.  ಪಕ್ಷಾಂತರ ಎಂಬುದು ಭಾರತದ ಪ್ರಜಾಪ್ರಭುತ್ವವನ್ನೇ ಅಲುಗಾಡಿಸುತ್ತದೆ. 

–ಪಕ್ಷಾಂತರ ಎಂಬ ರೋಗ ನಿವಾರಿಸಿದಾಗಲೇ ಮಹಾತ್ಮಾ ಗಾಂಧಿ ಅವರಿಗೆ ಗೌರವ ನೀಡಿದಂತೆ 

11.26: ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಭಾರೀ ಅವಸರದಲ್ಲಿದ್ದಾರೆ: ಎಚ್‌ಡಿಕೆ 

–ನಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎನ್ನುವ ಭಿನ್ನಮತೀಯ ಶಾಸಕರು ಕೋರ್ಟ್‌ನಲ್ಲಿ ಹೋಗಿ ಬೇರೆಯದ್ದೇ ಮಾತನಾಡಿದ್ದಾರೆ. ನನ್ನ ಮೇಲೆ ಆರೋಪಗಳ ಸುರಿ ಮಳೆ ಮಾಡಿದ್ದಾರೆ. ಇಲ್ಲಿ ಕೆಲವರಿಗೆ ಮಾನ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಇನ್ನೂ ಮರ್ಯಾದೆ ಇಟ್ಟುಕೊಂಡು ಬದುಕಿದ್ದೇನೆ. 14 ತಿಂಗಳ ರಾಜಕೀಯ ಅಸ್ಥಿರಕ್ಕೆ ಯಾರು ಕಾರಣ, ಏನೇನು ನಡೆದಿದೆ ಎಂಬುದರ ಅರಿವು ನನಗಿದೆ. 

–ಕರ್ನಾಟಕಕ್ಕೆ ಬಂದಾಗ ಪ್ರಧಾನಿಗಳು ಸರ್ಕಾರದ ವಿರುದ್ಧ ಆಡಿದ ಮಾತುಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ. ಕಲಬೆರಕೆ ಸರ್ಕಾರ ಎಂಬ ಪ್ರಧಾನಿ ಹೇಳಿಕೆಗೆ ಎಚ್ಡಿಕೆ ಕಿಡಿ

–ನನ್ನ ಸರ್ಕಾರ ಲೂಟಿ ಸರ್ಕಾರವಲ್ಲ. ಬರಗಾಲ, ಕೊಡಗಿನ ನೆರೆಯಂಥ ಸಂದರ್ಭಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. 

–ರಮೇಶ್‌ಕುಮಾರ್‌ ಅವರಂಥ ಅಧ್ಯಯನ ಶೀಲರು ನನ್ನ ಅವಧಿಯಲ್ಲಿ ಸ್ಪೀಕರ್‌ ಆಗಿದ್ದು ನನ್ನ ಸೌಭಾಗ್ಯ. ನನ್ನ ತಂದೆ ಮುಖ್ಯಮಂತ್ರಿಯಾದಾಗಲೂ ತಾವೇ ಸ್ಪೀಕರ್‌ ಆಗಿದ್ದಿರಿ. ಆಗಲೂ ರಾಜಕೀಯ ವಿಪ್ಲವಗಳು ನಡೆದಿದ್ದವು. ಈಗಲೂ ನಡೆಯುತ್ತಿದೆ. 

–ಕಾಲ ಮಿತಿಯೊಳಗೆ ವಿಶ್ವಾಸ ಮತ ಪೂರ್ಣಗೊಳಿಸಬಾರದು. ಚರ್ಚೆಗೆ ಅವಕಾಶ ಮಾಡಿಕೊಡಬೇಕು. 

–ರಾಜ್ಯದ ವಿಧಾನಸಭೆ ದೇಶಕ್ಕೆ ಮಾದರಿ. ಹಲವು ನಾಯಕರು, ಸ್ಪೀಕರ್‌ಗಳು ದೇಶಕ್ಕೇ ಮಾರ್ಗದರ್ಶನ ನೀಡುವಂತೆ ಸದನದಲ್ಲಿ ನಡವಳಿಕೆ ಪ್ರದರ್ಶಿಸಿದ್ದಾರೆ. 

–ಇಲ್ಲಿ ನಡೆಯುತ್ತಿರುವ ನಾಟಕ ದೇಶದಲ್ಲಿ ನಡೆಯಬೇಕು. 

–ದೇವರಾಜ ಅರಸರ ಆಡಳಿತವನ್ನು ನಾವು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿದ್ದೇವೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ನನಗಾಗಲಿ, ನನ್ನ ನಂತರದ ಸರ್ಕಾರಗಳಾಗಲಿ ಶಾಶ್ವತವಲ್ಲ.  

–ದೇವರಾಜ ಅರಸರಿಗೆ ಅವರ ಬೆಳಸಿದ ನಾಯಕರೇ ಮೋಸ ಮಾಡಿದ್ದರು ಎಂಬುದನ್ನೂ ನಾನು ನೆನಪಿಸಿಕೊಳ್ಳುತ್ತೇನೆ. 

11.21: ಆದಷ್ಟು ಬೇಗನೇ ಪ್ರಕ್ರಿಯೆ ಮುಗಿಸುವಂತೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಒತ್ತಾಯ

ಸದನದ ಶಾಸಕರ ಸಂಖ್ಯೆ ಗಮನಿಸಿ ಕೆಲವರಿಗೆ ಮಾತ್ರ ಮಾತನಾಡಲು ಅವಕಾಶ ಕೊಡಿ. ಒಂದೇ ದಿನದಲ್ಲಿ ಚರ್ಚೆ ಮುಗಿಸಿದ ನಿದರ್ಶನಗಳು ಇವೆ. ಬೇಗನೇ ಮತಕ್ಕೆ ಹಾಕಿ.  

11.20: ಪ್ರಸ್ತಾವನೆ ಮಂಡಿಸಲು ಸಿಎಂ ಕುಮಾರಸ್ವಾಮಿಗೆ ಸ್ಪೀಕರ್‌ ಮಂಡನೆ 

11.19: ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಎಚ್‌.ಡಿ ಕುಮಾರಸ್ವಾಮಿ 

11.15: ವಿಧಾನಮಂಡಲ ಕಲಾಪ: ಸದನಕ್ಕೆ ಆಗಮಿಸಿದ ಸ್ಪೀಕರ್‌ 

11.10: ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ರಾಮಲಿಂಗಾ ರೆಡ್ಡಿ

ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ವಿಧಾನಸಭೆಗೆ ಆಗಮಿಸಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿದರು.   

11.03: ರಾಮಲಿಂಗಾ ರೆಡ್ಡಿ ಅವರನ್ನು ಹಿಂಬಾಲಿಸುವ ಪ್ರಶ್ನೆಯೇ ಇಲ್ಲ: ಎಸ್‌.ಟಿ ಸೋಮಶೇಖರ್‌

ನಾನು, ರಾಮಲಿಂಗಾರೆಡ್ಡಿ, ಬೈರತಿ ಬಸವರಾಜು, ಮುನಿರತ್ನ ಸೇರಿ ನಾಲ್ವರೂ ಕುಳಿತು ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡಿದ್ದೆವು. ಅಲ್ಲದೆ, ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದೂ ನಿರ್ಧರಿಸಿದ್ದೆವು. ಆದರೆ, ಅವರು ಈಗ ಕಾಂಗ್ರೆಸ್‌ನಲ್ಲೇ ಉಳಿಯುವುದಾಗಿ ಹೇಳುತ್ತಿದ್ದಾರೆ. ನಾವು ಅವರನ್ನು ಹಿಂಬಾಲಿಸುವುದಿಲ್ಲ ಎಂದು ಸೋಮಶೇಖರ್‌ ಹೇಳಿದ್ದಾರೆ. 

10.30: ನಮ್ಮ ಸಂಖ್ಯೆ 105, ಅವರು 100ಕ್ಕಿಂತಲೂ ಕಡಿಮೆ: ಬಿ.ಎಸ್‌.ಯಡಿಯೂರಪ್ಪ

ವಿಸ್ವಾಸಮತ ಪ್ರಕ್ರಿಯೆಯಲ್ಲಿ ಅವರು ಸೋಲುವುದು 100ಕ್ಕೆ 101ರಷ್ಟು ಖಚಿತ. ನಮ್ಮ ಸಂಖ್ಯೆ 105. ಅವರು ನೂರಕ್ಕಿಂತಲೂ ಕಡಿಮೆ ಇದ್ದಾರೆ.    

10.22: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದರು.  

10.20: ರೆಸಾರ್ಟ್‌ನಲ್ಲಿದ್ದ ಬಿಜೆಪಿ ಶಾಸಕರು ವಿಧಾನಸೌಧಕ್ಕೆ ಆಗಮಿಸಿದರು. 

Post Comments (+)