ಗುರುವಾರ , ಜೂನ್ 17, 2021
29 °C

ಕಲ್ಲಡ್ಕ ಯುವಕನ ಸಾವಿನ ಬಗ್ಗೆ ಪೋಸ್ಟ್‌: ಇದು ಜಿಹಾದಿಗಳ ಷಡ್ಯಂತ್ರ ಎಂದ ಶೋಭಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲ್ಲಡ್ಕದ ಯುವಕ ನಿಶಾಂತ್‌ ಎಂಬುವವರ ಸಾವಿಗೆ ಸಂಬಂಧಿಸಿದಂತೆ ತಮ್ಮ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ವೀಟ್‌ ತಾವು ಮಾಡಿದ್ದಲ್ಲ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ, ಇದು ‘ ಜಿಹಾದಿಗಳು ಮತ್ತೊಂದು ಷಡ್ಯಂತ್ರ,’ ಎಂದಿದ್ದಾರೆ. 

‘ಜಿಹಾದಿಗಳು ಮತ್ತೊಂದು ಷಡ್ಯಂತ್ರ ಮಾಡಿದ್ದಾರೆ. ಕಲ್ಲಡ್ಕದ ಯುವಕ ನಿಶಾಂತ್‌ ಸಾಯುವಾಗ ಜಿಹಾದಿಗಳಿಂದ ತೊಂದರೆಯಾಗಿದೆ ಎಂದು ನನ್ನ ಹೆಸರಲ್ಲಿ ಸುಳ್ಳು ಪೋಸ್ಟ್‌ ಮಾಡಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಾಗಲಿ, ಮಾಧ್ಯಮಗಳಲ್ಲಾಗಲಿ ನಾನು ಹೇಳಿಕೆ ಕೊಟ್ಟಿಲ್ಲ. ಇಂಥ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾನು ಮಂಗಳೂರು ಪೊಲೀಸರನ್ನು ಆಗ್ರಹಿಸಿದ್ದೇನೆ. ಮತಾಂಧ ಜಿಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಸೇರಿಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ,’ ಎಂದು ಅವರು ತಮ್ಮ ಹೇಳಿಕೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಏನಿದು ಘಟನೆ? 
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಹನುಮಾನ್ ನಗರ ನಿವಾಸಿ ನಿಶಾಂತ್ (28) ಎಂಬ ಯುವಕ ಭಾನುವಾರ ಬೆಳಿಗ್ಗೆ ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದರು. ಇದನ್ನು ಗಮನಿಸಿದ ಸ್ಥಳೀಯರಾದ ಶಮೀರ್ ಮುಹಮ್ಮದ್, ತೌಸೀಫ್, ಝಾಹಿದ್, ಜಾಯಿದ್, ಅಕ್ಕರಂಗಡಿ ಮುಖ್ತಾರ್, ಆರಿಫ್ ಮತ್ತಿತರರು ಕೂಡಲೇ ನದಿಗೆ ಹಾರಿ ರಕ್ಷಣೆಗೆ ಮುಂದಾಗಿದ್ದರು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಾದರೂ, ದಾರಿ ಮಧ್ಯದಲ್ಲಿ ನಿಶಾಂತ್‌ ಸಾವಿಗೀಡಾಗಿದ್ದರು. 

ಇದನ್ನೂ ಓದಿ: ಮಂಗಳೂರು: ನದಿಗೆ ಹಾರಿ ಯುವಕ ಆತ್ಮಹತ್ಯೆ

ಈ ಘಟನೆಯಲ್ಲಿ ಜಿಹಾದಿಗಳ ಕೈವಾಡವಿದೆ ಎಂದು ಆರೋಪಿಸಿದ, ಶೋಭಾ ಕರಂದ್ಲಾಜೆ ಅವರ ಟ್ವೀಟ್‌ ಎನ್ನಲಾದ ಸ್ಕ್ರೀನ್‌ಶಾಟ್‌ವೊಂದು ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಆದರೆ, ಈ ಟ್ವೀಟ್‌ ತಮ್ಮದ್ದಲ್ಲ, ತಾವು ಈ ರೀತಿಯ ಹೇಳಿಕೆಯನ್ನು ಎಲ್ಲಿಯೂ ದಾಖಲಿಸಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ. 

ಈ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡಿರುವ ಹಲವರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಕಾಂಗ್ರೆಸ್‌ ಶಾಸಕ ಯುಟಿ ಖಾದರ್‌ ಕೂಡ ಇದೇ ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಟ್ವೀಟ್‌ ಮಾಡಿದ್ದು, ‘ ಏಕಿ ಮಿನಿಟ್ ಟೈಮ್ ತೆಗೆದುಕೊಂಡು, ಲಾಕ್‌ಡೌನ್‌ನಿಂದ ಒದ್ದಾಡುತ್ತಿರುವ ರಾಜ್ಯದ ಬಡವರು, ಶ್ರಮಿಕರಿಗೆ ಬೇಗ  ಹಣ ಬಿಡುಗಡೆ ಮಾಡಿ ಎಂದು ಹೇಳಿದ್ದರೆ ಒಳ್ಳೆಯದಿತ್ತಾ? ಎಂದು ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನೆ ಮಾಡಿದ್ದಾರೆ. 


ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರಲ್ಲಿ ಹರಿದಾಡುತ್ತಿರುವ ಟ್ವೀಟ್‌

ತಮ್ಮದೂ ಎನ್ನಲಾದ ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಶೋಭಾ ಕರಂದ್ಲಾಜೆ ನಕಲಿ ಪೋಸ್ಟ್‌ ಸೃಷ್ಟಿಸಿದವರ ವಿರುದ್ಧ ಕ್ರಮಕ್ಕೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಇದು ಜಿಹಾದಿಗಳ ದುಷ್ಕೃತ್ಯ ಎಂದು ಹೇಳಿದ್ದಾರೆ. 

‘ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ  ಮತ್ತು ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು