ಮಂಗಳವಾರ, ಏಪ್ರಿಲ್ 7, 2020
19 °C

ಬಿಎಸ್‌ವೈ ಮಾತು ಕೇಳುವುದೋ, ಜನರ ಮಾತು ಕೇಳುವುದೋ?:ಯು. ಬಿ. ಬಣಕಾರ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಬಿ.ಸಿ.ಪಾಟೀಲರಿಗೆ ಕೈಲಾದಷ್ಟು ಸಹಾಯ ಮಾಡಿ’ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ‘ನೀವು ಚುನಾವಣೆಗೆ ಸ್ಪರ್ಧಿಸಲೇಬೇಕು’ ಎಂದು ಮತದಾರರು ಒತ್ತಾಯಿಸುತ್ತಿದ್ದಾರೆ. ಈಗ ಪ್ರಭುಗಳ ಮಾತು ಕೇಳುವುದೋ? ಜನರ ಮಾತು ಕೇಳುವುದೋ ತಿಳಿಯದೆ ಧರ್ಮಸಂಕಟದಲ್ಲಿದ್ದೇನೆ...

ಹಿರೇಕೆರೂರು ಕ್ಷೇತ್ರದ ಬಿಜೆಪಿ ಮುಖಂಡ ಯು.ಬಿ.ಬಣಕಾರ ತಮ್ಮ ಸ್ಥಿತಿಯನ್ನು ಈ ಮೇಲಿನ ರೀತಿ ವಿವರಿಸಿದರು. ಕ್ಷೇತ್ರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದ ಬಣಕಾರ ಬೆಂಬಲಿಗರು, ‘ನಮಗೆ ಬಿಜೆಪಿಯೂ ಬೇಡ. ಕಾಂಗ್ರೆಸ್ಸೂ ಬೇಡ. ಪಕ್ಷೇತರರಾಗಿಯೇ ಶಕ್ತಿ ಪ್ರದರ್ಶಿಸುತ್ತೇವೆ’ ಎಂದು ಘೋಷಣೆ ಕೂಗಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಬಣಕಾರ, ‘ಮಂಗಳವಾರ ಯಡಿಯೂರಪ್ಪ ಸಭೆ  ಕರೆದಿದ್ದರು. ಪಾಟೀಲರು ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅವರ ಮಾತಿಗೆ ಬೆಲೆ ಕೊಡಲು ಸಿದ್ಧನಿದ್ದೇನೆ. ಆದರೆ, ‘ನಮ್ಮನ್ನು ಕೊಲ್ಲಲು ನಿರ್ಧರಿಸಿದ್ದೀರಾ? ಹೊಟ್ಟೆಗೆ ವಿಷ ಹಾಕಿ ಹೋಗ್ತೀರಾ’ ಎಂದು ಇಲ್ಲಿನ ಮತದಾರರು ಕೇಳುತ್ತಿದ್ದಾರೆ. ಏನೆಂದು ಉತ್ತರಿಸಲಿ’ ಎಂದರು.

‘ನಾನು ಹಾಗೂ ಪಾಟೀಲರು ಪರಸ್ಪರ 4 ಚುನಾವಣೆಗಳನ್ನು ಎದುರಿಸಿದ್ದೇವೆ. ಇದು ಸುದೈವವೋ, ದುರ್ದೈವವೋ ಗೊತ್ತಿಲ್ಲ. ನಾವೇ ಒಂದು ಅಥವಾ ಎರಡನೇ ಸ್ಥಾನದಲ್ಲಿ ಉಳಿಯುತ್ತ ಬಂದಿದ್ದೇವೆ. ಅಷ್ಟೊಂದು ಜಿದ್ದಾಜಿದ್ದಿ ಇರುವಾಗ ಅವರಿಗೇ ಕ್ಷೇತ್ರ ಬಿಟ್ಟುಕೊಡಲು ನನ್ನ ಬೆಂಬಲಿಗರು ಬಿಡುತ್ತಾರ? ನಾಯಕರು ಹೊಂದಾಣಿಕೆ ಮಾಡಿಕೊಂಡರೆ, ಮತದಾರರೂ ಹೊಂದಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.

‘ನಾಮಪತ್ರ ಸಲ್ಲಿಸಲು ಸೋಮವಾರದವರೆಗೆ ಸಮಯವಿದೆ. ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದರೆ ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸ್ಥಿತಿ ಇದೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ಜಿಲ್ಲೆಯ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಎಲ್ಲ ನಾಯಕರನ್ನೂ ಇಲ್ಲಿಗೇ ಕರೆತರುತ್ತೇನೆ. ಅವರೇ ಮತದಾರರ ಮನವೊಲಿಸಲಿ’ ಎಂದೂ ಬಣಕಾರ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು