ಭಾನುವಾರ, ಮಾರ್ಚ್ 29, 2020
19 °C

ಪರಿಷತ್‌ನಲ್ಲಿ ರಾಮಾಯಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಬುಧವಾರ ಸಂವಿಧಾನ ಮೇಲೆ ನಡೆದ ವಿಶೇಷ ಚರ್ಚೆ ಸಂದರ್ಭದಲ್ಲಿ ಮಹಾಭಾರತ ಮತ್ತು ರಾಮಾಯಣ ಪ್ರಸಂಗಗಳನ್ನು ಸದಸ್ಯರು ಪ್ರಸ್ತಾಪಿಸಿ ಗಮನ ಸೆಳೆದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ’ನಮಸ್ತೇ ಸದಾ ವತ್ಸಲೇ ಮಾತೃಭೂಮಿ‘ ಪ್ರಾರ್ಥನೆಯನ್ನು ಸಂಪೂರ್ಣವಾಗಿ ಹಾಡಿದ ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ’ಇದು ಸಂವಿಧಾನದ ಆಶಯ ಹೊಂದಿಲ್ಲವೇ‘ ಎಂದು ಪ್ರಶ್ನಿಸಿದರು.

’ರಾಮರಾಜ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ, ರಾಮಾಯಣ ಬರೆದವರು ಅಸ್ಪೃಶ್ಯರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹಾಭಾರತದಲ್ಲಿ ಕರ್ಣನ ಪಾತ್ರ ವಿಶಿಷ್ಟವಾದದ್ದು. ಕರ್ಣನ ಸ್ವಾಮಿ ನಿಷ್ಠೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಯೇ? ಕರ್ಣನ ತ್ಯಾಗ, ನಿಷ್ಠೆಗಳನ್ನು ಅನುಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ‘ ಎಂದರು.

’ಭೂ ಸುಧಾರಣೆ ಕಾಯ್ದೆಗಳಿವೆ. ಆದರೆ, ಕಟ್ಟಕಡೆಯ ವ್ಯಕ್ತಿಗೆ ಸೂರು ನೀಡಲು ಸಾಧ್ಯವಾಗಿಲ್ಲ. ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಯಾವುದೇ ರೀತಿ ವಿರೋಧ ಮಾಡದೆ ನಮ್ಮ ವೇತನವನ್ನು ಎಷ್ಟು ಬೇಕಾದರೂ ಹೆಚ್ಚಿಸಿಕೊಳ್ಳುತ್ತೇವೆ. ಇದೇ ರೀತಿಯ ಕಾಳಜಿಯನ್ನು ಜನಸಾಮಾನ್ಯರ ವಿಷಯದಲ್ಲಿ ವಹಿಸುತ್ತೇವೆಯೇ‘ ಎಂದು ಪ್ರಶ್ನಿಸಿದರು.

ಭೋಜೇಗೌಡ ಅವರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿಯ ಎನ್‌.ರವಿಕುಮಾರ್‌, ’ಭೋಜೇಗೌಡ ಅವರ ಮಾತಿಗೆ ನಾವು ಖುಷಿ ಪಟ್ಟಿದ್ದೇವೆ. ಅವರನ್ನು ನಾವು ಅಪಹರಿಸುವುದಿಲ್ಲ. ಅವರಾಗಿಯೇ ಬರುತ್ತಾರೆ‘ ಎಂದು ಹಾಸ್ಯಚಟಾಕಿ ಹಾರಿಸಿದರು.ಬಿಜೆಪಿ

ಯ ತೇಜಸ್ವಿನಿ ಗೌಡ ಅವರು, ’ಅಗಸನೊಬ್ಬನ ಮಾತಿಗೆ ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ. ಪ್ರಜಾಪ್ರಭುತ್ವದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಾತಿಗೂ ಬೆಲೆ ನೀಡಿರುವುದಕ್ಕೆ ಇದು ಸಾಕ್ಷಿ‘ ಎಂದು ಹೇಳಿದರು.

’ತ್ರಿಪಕ್ಷೀಯ ವ್ಯವಸ್ಥೆ ಅಗತ್ಯ‘
ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, ’ಇಂದಿನ ಚುನಾವಣೆ ವ್ಯವಸ್ಥೆ ಸುಧಾರಿಸಲು ಬಹುಪಕ್ಷೀಯ ಪದ್ಧತಿಗೆ ತೀಲಾಂಜಲಿ ಹಾಡಿ ತ್ರಿಪಕ್ಷೀಯ ಪದ್ಧತಿ ಜಾರಿಗೊಳಿಸಬೇಕು‘ ಎಂದು ಒತ್ತಾಯಿಸಿದರು.

’ದೇಶದಲ್ಲಿ 2599 ರಾಜಕೀಯ ಪಕ್ಷಗಳಿವೆ. ಆದರೆ, ಕೇವಲ 8 ರಾಷ್ಟ್ರೀಯ ಪಕ್ಷಗಳಿವೆ. 53 ಪ್ರಾದೇಶಿಕ ಪಕ್ಷಗಳಿವೆ. ಈ ಪಕ್ಷಗಳ ಗೊಂದಲವನ್ನು ನಿವಾರಿಸಲು ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ತ್ರಿಪಕ್ಷೀಯ ಪದ್ಧತಿಯ ವ್ಯವಸ್ಥೆ ಜಾರಿಗೊಳಿಸಬೇಕು. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಬೇಕು‘ ಎಂದು ಆಗ್ರಹಿಸಿದರು.

*
ಚುನಾವಣೆಗೆ ಇಂದು ಮಹಾತ್ಮ ಗಾಂಧಿ ಸ್ಪರ್ಧಿಸಿದರೂ ಅವರಿಂದಲೇ ಗಾಂಧಿ ನೋಟು ಕೇಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಎಲ್ಲರೂ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದೇವೆ.
-ಸಿ.ಟಿ. ರವಿ, ಸಚಿವ

*
ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ರಕ್ತಪಾತವೇ ನಡೆಯುತ್ತದೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಗಟ್ಟಿಯಾಗಿವೆ.
-ಸಿ. ಎಂ.ಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು