ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದಲ್ಲಿ ‘ಜಲ ವಿವಾದ’ ಸಲಹೆಗಾರ ಹುದ್ದೆ

Last Updated 23 ಜನವರಿ 2020, 22:03 IST
ಅಕ್ಷರ ಗಾತ್ರ

ಬೆಂಗಳೂರು: ಅಂತರ ರಾಜ್ಯ ಜಲ‌ ವಿವಾದ ಸಮನ್ವಯಾಧಿಕಾರಿ ಮತ್ತು ಸಲಹೆಗಾರ ಹುದ್ದೆಯ ನೇಮಕಕ್ಕೆ ಸಂಬಂಧಿಸಿದಂತೆ ಐಎಎಸ್‌ ಮತ್ತು ಜಲಸಂಪನ್ಮೂಲ ಇಲಾಖೆಯ ತಾಂತ್ರಿಕ ಅಧಿಕಾರಿಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.

ಅಂತರ ರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವ ಉದ್ದೇಶಕ್ಕಾಗಿ ಈ ಹುದ್ದೆ ಸೃಷ್ಟಿಸಲಾಗಿದೆ. ಈ ಹುದ್ದೆಗೆ ಇದೇ 16 ರಂದು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ನಿವೃತ್ತ ಮುಖ್ಯ ಎಂಜಿನಿಯರ್‌ಎಂ.ಬಂಗಾರಸ್ವಾಮಿ ಅವರನ್ನು ನೇಮಿ
ಸಲಾಗಿದೆ. ಈ ಹುದ್ದೆಯಿಂದ ಅವರನ್ನು ಅಲುಗಾಡಿಸುವ ಪ್ರಯತ್ನ ಆರಂಭವಾಗಿದೆ.

ಇವರಿಗೂ ಮುನ್ನ 2017 ರಿಂದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ ಈ ಹುದ್ದೆಯನ್ನು ನಿಭಾಯಿಸುತ್ತಿದ್ದರು. ಮತ್ತೆ ಇವರನ್ನೇ ಆ ಹುದ್ದೆಗೆ ತರಲು ಐಎಎಸ್‌ ಲಾಬಿ ಪ್ರಯತ್ನಿಸುತ್ತಿದ್ದು, ಈ ಪ್ರಯತ್ನಕ್ಕೆ ಇಲಾಖೆಯೊಳಗೇ ವಿರೋಧ ವ್ಯಕ್ತವಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

‘ಹಿಂದಿನ ಸಮನ್ವಯಾಧಿಕಾರಿಯನ್ನು ಮತ್ತೆ ಪ್ರತಿಷ್ಠಾಪಿಸಲು ಮುಖ್ಯಮಂತ್ರಿಯವರಿಗೆ ಕಡತ ಕಳುಹಿಸಲಾಗಿದೆ. ಈ ಹಿಂದೆ ಅವರು ಸಲಹೆಗಾರರಾಗಿದ್ದಾಗ ಕಾವೇರಿ, ಮಹದಾಯಿ, ಕೃಷ್ಣಾ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ ನೀಡಿಲ್ಲ. ಸಲಹೆಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದಲೇ ಅವರಿಗೆ ಸಂಭಾವನೆ, ಭತ್ಯೆ ಸೇರಿತಿಂಗಳಿಗೆ ಸುಮಾರು ₹ 4 ಲಕ್ಷ ನೀಡಲಾಗುತ್ತಿತ್ತು’ ಎಂದು ಮೂಲಗಳು ಹೇಳಿವೆ.

‘ಬಂಗಾರಸ್ವಾಮಿ ಅವರು ಸುಮಾರು 12 ವರ್ಷಗಳಿಂದ ನದಿ ನೀರಿನ ವಿವಾದಗಳ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದಾರೆ. ನಿಖರ ತಾಂತ್ರಿಕ ಮಾಹಿತಿಗಳನ್ನು ಮುಂದಿಡುವ ಪರಿಣಿತರೂ ಹೌದು’ ಎನ್ನುವುದು ಅಧಿಕಾರಿಯೊಬ್ಬರ ಪ್ರತಿಪಾದನೆ.

ಈ ಮಧ್ಯೆ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರ್‌ ಈ ಸಂಬಂಧ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ‘ಹಿಂದಿನ ಸಮನ್ವಯಾಧಿಕಾರಿಯವರುಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆಯುವ ಸಂದರ್ಭದಲ್ಲಿ, ಉತ್ತರ ಮತ್ತು ಪ್ರತ್ಯುತ್ತರ ತಯಾರಿಸುವ ಸಂದರ್ಭದಲ್ಲಿ ಹಾಜರಿರಲಿಲ್ಲ. ಯಾವುದೇ ಸಲಹೆಗಳನ್ನೂ ನೀಡಿಲ್ಲ. ಆದ್ದರಿಂದ ಸಲಹೆಗಾರರನ್ನಾಗಿ ಮುಂದುವರಿಸುವ ಅವಶ್ಯಕತೆ ಇಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT