ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಗಲಗಿನವರ ದೊಡ್ಡಿ ಜನರ ನಿತ್ಯ ಯಾತನೆ

150 ಅಡಿ ಆಳದಿಂದ ನೀರು!: ‘ದ.ಆಫ್ರಿಕಾಗಿಂತ ಸಮಸ್ಯೆ ಭೀಕರ’

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಜನರು ಪರಿತಪಿಸುವಂತಾಗಿದೆ. ನಾರಾಯ ಣಪುರ ಬಲದಂಡೆ ಮುಖ್ಯ ನಾಲೆಯ ಕೊರಕಲು ಕಲ್ಲು ಬಂಡೆಗಳ ಮಧ್ಯೆಯೇ 150 ಅಡಿ ಆಳಕ್ಕೆ ಜೀವಭಯದಲ್ಲಿ ಇಳಿದು ಜನರು ನೀರು ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

‘ಕಲ್ಲುಬಂಡೆಗಳ ಮಧ್ಯೆ ಸಿಗುವ ಕಾಲುವೆ ನೀರನ್ನೇ ನಿತ್ಯ ಬಳಸುತ್ತಿದ್ದು, ಜಾನುವಾರುಗಳಿಗೂ ಕುಡಿಸುತ್ತೇವೆ. ನೀರಿನ ಸಮಸ್ಯೆ ಪರಿಹರಿಸಲು ಪರ್ಯಾಯ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಕೋರಿದರೂ ಯಾವುದೇ ಪ್ರಯೋಜನ ವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ದೇವರಭೂಪುರ ಗ್ರಾಮ ಪಂ ವ್ಯಾಪ್ತಿಯ ಗಲಗಿನವರ ದೊಡ್ಡಿಯಲ್ಲಿ 50 ಕುಟುಂಬದವರು ತಮ್ಮ ಜಮೀನುಗಳಲ್ಲಿ ಮನೆ ಮಾಡಿಕೊಂಡು ವಾಸವಿದ್ದಾರೆ.

‘ಪೂಜಾರೆರ ದೊಡ್ಡಿ, ಆನೆಹೊಸೂರರ ದೊಡ್ಡಿ, ಸಿದ್ದಾನವರ ದೊಡ್ಡಿ ಸೇರಿದಂತೆ ಇತರೆ ದೊಡ್ಡಿಗಳಿಗೂ ನೀರಿನ ಸಮಸ್ಯೆ ವ್ಯಾಪಿಸಿದೆ. ದೊಡ್ಡಿಗಳ ನಿವಾಸಿಗಳು 2 ರಿಂದ 3 ಕಿ.ಮೀ. ನಡೆದು ಖಾಸಗಿ ತೋಟಗಳಿಂದ ನೀರು ತರುತ್ತಾರೆ. ಕೃಷ್ಣಾ ನದಿ ಪಾತ್ರದ ದೊಡ್ಡಿ ಜನ ನದಿಯ ಗುಂಡಿಗಳಲ್ಲಿ ನಿಂತ ಕಲುಷಿತ ನೀರನ್ನೇ ಇಂದಿಗೂ ಬಳಸುತ್ತಿದ್ದಾರೆ’ ಎಂದು ಮುಖಂಡ ಬಸವರಾಜ ಹೇಳುತ್ತಾರೆ.

‘ಗಲಗಿನವರದೊಡ್ಡಿಗೆ ಕೊಳವೆಬಾವಿ ಕೊರೆದು ಮೋಟರ್‌ ಕೂಡ ಇಳಿಸಲಾಗಿದೆ. ಗುತ್ತಿಗೆದಾರರನ್ನು ಕರೆಯಿಸಿ ಸಮಸ್ಯೆ ಪರಿಹರಿಸಲಾಗುವುದು. 80 ಕೈಪಂಪ್‌, 15 ಕಿರುನೀರು ಸರಬರಾಜು, 4 ಓವರ್‌ಹೆಡ್‌ ಟ್ಯಾಂಕ್‌ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಪಿಡಿಒ ಸದಾನಂದ ಆರೆನಾಡ ತಿಳಿಸಿದರು.

‘ದ.ಆಫ್ರಿಕಾಗಿಂತ ಸಮಸ್ಯೆ ಭೀಕರ’
ರಾಯಚೂರು: ‘ನೀರಿನ ಸಮಸ್ಯೆ ಬಗ್ಗೆ ದಕ್ಷಿಣ ಆಫ್ರಿಕಾದಲ್ಲಿ ಸಭೆ ನಡೆಸಿದ ಅನುಭವ ಆಗುತ್ತಿದೆ. ಆದರೆ, ಸಮಸ್ಯೆ ನೋಡಲು ಅಷ್ಟು ದೂರ ಹೋಗುವ ಅಗತ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲೇ ಆ ಸ್ಥಿತಿ ಇದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯ್ಕ್ ಕಳವಳ ವ್ಯಕ್ತಪಡಿಸಿದರು.

‘20 ವರ್ಷಗಳ ಹಿಂದೆ ರಾಯಚೂರು ಹೇಗಿತ್ತೊ, ಈಗಲೂ ಹಾಗೇ ಇದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ವಸ್ತುಸ್ಥಿತಿ ವರದಿಯನ್ನು ಸಂಗ್ರಹಿಸಿಲ್ಲ’ ಎಂದು ಶುಕ್ರವಾರ ಇಲ್ಲಿ ಬರಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲ‌ನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಜಿಲ್ಲೆಯ 30 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಲಿಂಗಸುಗೂರು ತಾಲ್ಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ’ ಎಂದು ಅಧಿಕಾರಿಗಳು ನೀಡಿದ ವಿವರಣೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

**
ಗಲಗಿನವರ ದೊಡ್ಡಿಯಲ್ಲಿ ನೀರು ಪೂರೈಕೆಗೆ ಕೊಳವೆಬಾವಿ ಕೊರೆಸಲು ಸೂಚಿಸಲಾಗಿತ್ತು. ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
-ಪ್ರಕಾಶ ವಡ್ಡರ, ಇಒ ತಾಪಂ

**
ಕುಡಿಯುವ ನೀರಿನ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಆದರೂ ಕೂಡ ಗಲಗಿನವರ ದೊಡ್ಡಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ರಾಜಶೇಖರ ಡಂಬಳ, ಎಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು