ಬುಧವಾರ, ಮೇ 18, 2022
27 °C
ಮನೆಗೊಬ್ಬರು ಸೇನೆಗೆ ಸೇರಿದ ಕಾರಣ ಹೆಸರುವಾಸಿಯಾದ ಕಲಿವಾಳ

ನೀರಿಗೆ ಕಾಯುವ ‘ಸೈನಿಕರ’ ಗ್ರಾಮಸ್ಥರು

ಗಣೇಶಗೌಡ ಎಂ. ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಸವಣೂರ (ಹಾವೇರಿ ಜಿಲ್ಲೆ): ದೇಶ ಕಾಯುವ ಸೈನಿಕರ ಗ್ರಾಮ ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಕಲಿವಾಳದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನತೆ ನೀರಿಗಾಗಿ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.

‘ಇಚ್ಚಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಇಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 2,500ಕ್ಕೂ ಜನಸಂಖ್ಯೆ ಇದೆ. ಇಲ್ಲಿನ ಬಹುತೇಕ ಮನೆಗಳ ಸದಸ್ಯರೊಬ್ಬರು ಸೇನೆಯಲ್ಲಿದ್ದಾರೆ. ಇಲ್ಲವೇ, ಸೇವೆಯಿಂದ ನಿವೃತ್ತಿ ಅಥವಾ ಹುತಾತ್ಮರಾಗಿದ್ದಾರೆ. ಆದರೆ, ಅವರ ಮನೆಯವರು ನೀರಿಗಾಗಿ ಪಡುತ್ತಿರುವ ಪಡಿಪಾಟೀಲನ್ನು ರಾಜಕಾರಣಿಗಳು ಬಗೆಹರಿಸಿಲ್ಲ’ ಎಂದು ಈರಣ್ಣ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು. 

‘ಗ್ರಾಮದಲ್ಲಿ ಸುಮಾರು 140 ನಳಗಳಿದ್ದು, ಇವುಗಳಲ್ಲಿ ನೀರು ಬರುತ್ತಿಲ್ಲ. ಏನಿದ್ದರೂ, ರಾಜಕಾರಣಿಗಳಂತೆ ಬಾಯಿಮಾತಿನ ಬಿಸಿಗಾಳಿ ಮಾತ್ರ. ನೀರಿಗಾಗಿ ಜನ ಬಾಯಿ ಬಿಟ್ಟು ಕೂರುವಂತಾಗಿದೆ’ ಎಂದು ನೀಲಪ್ಪ ಹರಿಜನ ದೂರಿದರು.

‘ಗ್ರಾಮದ 7 ಕೊಳವೆಬಾವಿಗಳ ಪೈಕಿ, ನಾಲ್ಕರಲ್ಲಿ ಮಾತ್ರ ಸ್ವಲ್ಪ ನೀರಿದೆ. ಹೊಸಕೆರೆಯಲ್ಲಿರುವ ಕೊಳವೆಬಾವಿಯಿಂದ ತಕ್ಕಮಟ್ಟಿಗೆ ನೀರು ಪೂರೈಕೆಯಾಗುತ್ತಿದ್ದು, ನಾವು ನಿಟ್ಟುಸಿರು ಬಿಡುತ್ತಿದ್ದೇವೆ’ ಎನ್ನುತ್ತಾರೆ ನಿಂಗಪ್ಪ ಗೊಡ್ಡೆಮ್ಮಿ.

‘ನಳಗಳು ಕೈ ಕೊಟ್ಟಿದ್ದು, ಜನ– ಜಾನುವಾರುಗಳಿಗೂ ಸಮಸ್ಯೆ ಉಂಟಾಗಿದೆ. ಅದಕ್ಕಾಗಿ ಮೂರು ಮಿನಿ ಟ್ಯಾಂಕ್‌ಗಳಿಗೆ ನೀರು ಶೇಖರಣೆ ಮಾಡುತ್ತಿದ್ದಾರೆ. ಇದರಿಂದ ನಿದ್ದೆಗಟ್ಟು ನೀರಿಗೆ ಕಾದು, ನೀರು ಬಂದಾಗ ಅಡುಗೆ ಮಾಡುವ ಸ್ಥಿತಿ ಬಂದಿದೆ’ ಎನ್ನುತ್ತಾರೆ ಗಂಗವ್ವ ಹರಿಜನ.

ನೀರಿಲ್ಲದ ನಳಕ್ಕೂ ತೆರಿಗೆ: ನಳದಲ್ಲಿ ಸಮರ್ಪಕವಾಗಿ ನೀರು ಬಾರದಿದ್ದರೂ, ತೆರಿಗೆ ಪಾವತಿಸಬೇಕು ಎಂದು ಗ್ರಾಮ ಪಂಚಾಯ್ತಿ ಪಟ್ಟು ಹಿಡಿಯುತ್ತಿದೆ ಎಂದು ಸ್ಥಳೀಯರ ಆರೋಪ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.